ಕೊಡಗು ಜಿಲ್ಲಾ ಎಸ್‍ಪಿಯಾಗಿ ಡಾ.ಸುಮನ್ ಡಿ.ಪಣ್ಣೇಕರ್ ಅಧಿಕಾರ ಸ್ವೀಕಾರ

Update: 2018-07-18 18:27 GMT

ಮಡಿಕೇರಿ, ಜು.18 : ಕೊಡಗು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಡಾ.ಸುಮನ್ ಡಿ.ಪಣ್ಣೇಕರ್ ಅವರು ಇಂದು ಅಧಿಕಾರ ಸ್ವೀಕರಿಸಿದರು.

ಮಡಿಕೇರಿ ನಗರದ ಎಸ್‍ಪಿ ಕಚೇರಿಯಲ್ಲಿ ಪ್ರಬಾರ ಎಸ್‍ಪಿ ಧರ್ಮೇಂದ್ರಕುಮಾರ್ ಮೀನಾ ಅವರಿಂದ ನೂತನ ಎಸ್‍ಪಿ ಅಧಿಕಾರ ಸ್ವೀಕರಿಸಿದರು. ಡಾ.ಸುಮನ್ ಅವರು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಕೊಡಗು ಜಿಲ್ಲಾ ಎಸ್ಪಿಯಾಗಿದ್ದ ಪಿ.ರಾಜೇಂದ್ರ ಪ್ರಸಾದ್ ಅವರು ಉತ್ತಮ ಕಾರ್ಯನಿರ್ವಹಣೆಯ ಮೂಲಕ ಜನಮೆಚ್ಚುಗೆ ಗಳಿಸಿದ್ದರು. 

ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಎಸ್‍ಪಿ ಡಾ. ಸುಮನ್ ಡಿ.ಪಣ್ಣೇಕರ್, ಕೊಡಗು ಜಿಲ್ಲೆಗೆ ಇದೇ ಮೊದಲ ಬಾರಿಗೆ ಬಂದಿದ್ದು, ಜಿಲ್ಲೆಯ ಜನತೆ ಶಾಂತಿ ಪ್ರಿಯರು ಎಂಬುದನ್ನು ಕೇಳಿದ್ದೇನೆ. ಜಿಲ್ಲೆಯ ಬಗ್ಗೆ  ಹೆಚ್ಚಿನ ಮಾಹಿತಿ ಇನ್ನಷ್ಟೆ ಪಡೆಯಬೇಕಿದ್ದು, ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ತನ್ನ ಸೇವಾ ಅವಧಿಯಲ್ಲಿ ಅವಕಾಶ ಕಲ್ಪಿಸುವುದಿಲ್ಲ ಎಂದು ತಿಳಿಸಿದರು. ಜಿಲ್ಲೆಯ ಜನತೆ ಕೂಡ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ತಾನು 2013ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದು, 2014ರಲ್ಲಿ ಕಾರ್ಕಳ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಆ ಬಳಿಕ 1.6 ವರ್ಷಗಳ ಕಾಲ ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ  ಎಸ್.ಪಿ.ಯಾಗಿ ಸೇವೆ ಸಲ್ಲಿಸಿರುವುದಾಗಿ ಹೇಳಿದರು.

ಅಧಿಕಾರಿಗಳ ಸಭೆ
ಜಿಲ್ಲೆಯ ಡಿವೈಎಸ್‍ಪಿಗಳು, ವೃತ ನಿರೀಕ್ಷಕರೊಂದಿಗೆ ಸಭೆ ನಡೆಸಿದ ಎಸ್.ಪಿ. ಡಾ.ಸುಮನ್ ಡಿ.ಪೆಣ್ಣೇಕರ್, ಜು.19 ರಂದು ಮುಖ್ಯಮಂತ್ರಿಗಳು ಕೊಡಗಿಗೆ ಭೇಟಿ ನೀಡುತ್ತಿದ್ದು, ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News