ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ: ಪ್ರಧಾನಿ ಮೌನ ಮುರಿಯಲಿ

Update: 2018-07-19 04:28 GMT

ಬದುಕಿನುದ್ದಕ್ಕೂ ಜೀತದಾಳುಗಳಿಗಾಗಿ, ಆದಿವಾಸಿಗಳಿಗಾಗಿ ಮತ್ತು ಅವರ ಉತ್ತಮ ಬದುಕಿಗಾಗಿ ಹೋರಾಡುತ್ತಾ ಬಂದ ಈ ದೇಶದ ಆರ್ಯ ಸಮಾಜದ ಮಹಾನ್ ಸಂತ ಸ್ವಾಮಿ ಅಗ್ನಿವೇಶ್‌ರ ಮೇಲೆ ಮಂಗಳವಾರ ಜಾರ್ಖಂಡ್‌ನಲ್ಲಿ ನಡೆದ ಮಾರಣಾಂತಿಕ ಹಲ್ಲೆ ಅತ್ಯಂತ ಖಂಡನೀಯವಾಗಿದೆ. ನಡುರಸ್ತೆಯಲ್ಲಿ ಅಗ್ನಿವೇಶ್ ಅವರ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುದು ಈಗಾಗಲೇ ಬಟಾಬಯಲಾಗಿದೆ. ಬಿಜೆಪಿ ಕಾರ್ಯಕರ್ತರೆಂದು ಹೇಳಲಾದ ಗೂಂಡಾಗಳು ಅಗ್ನಿವೇಶ್ ಮೇಲೆ ದೈಹಿಕ ದಾಳಿ ಮಾಡಿ ನೆಲಕ್ಕೆ ಕೆಡವಿ ಉರುಳಾಡಿಸಿ ಹೊಡೆದಿದ್ದಾರೆ. ಡಾ. ಅಂಬೇಡ್ಕರ್, ಗಾಂಧಿ, ನೆಹರೂ, ಭಗತ್ ಸಿಂಗ್, ಸುಭಾಷ್ ಅವರು ಕಟ್ಟಿದ ಭಾರತ ನಿಧಾನವಾಗಿ ಹಿಟ್ಲರ್, ಮುಸಲೋನಿ, ಗೋಡ್ಸೆ ಭಾರತವಾಗಿ ಬದಲಾಗುತ್ತಿದೆಯೋ ಏನೋ ಎಂಬ ಆತಂಕ ಉಂಟಾಗುತ್ತದೆ. ಸ್ವಾಮಿ ಅಗ್ನಿವೇಶ್ ಹಿಂದೂ ಧರ್ಮದ ಉದಾತ್ತವಾದಿ ವೌಲ್ಯಗಳನ್ನು ಪ್ರತಿಪಾದಿಸುವ ಸನ್ಯಾಸಿ. ಈ ದೇಶದ ಬಡವರ, ದಲಿತರ, ಮಹಿಳೆಯರ, ಆದಿವಾಸಿಗಳ ಮೇಲೆ ಎಲ್ಲೇ ಹಲ್ಲೆ ಆದರೂ ಅಲ್ಲಿ ಹೋಗಿ ಪ್ರತಿಭಟನೆ ಮಾಡುತ್ತಾ ಬಂದವರು. ಸಂಘಪರಿವಾರದ ಫ್ಯಾಶಿಸ್ಟ್ ನೀತಿಯನ್ನು ವಿರೋಧಿಸುತ್ತಾ ಬಂದವರು. ಭೋಪಾಲ್ ವಿಷಾನಿಲ ಸಂತ್ರಸ್ತರ ಪರವಾಗಿ, ಹರ್ಯಾಣದ ಜೀತದಾಳುಗಳ ಪರವಾಗಿ ಜಾರ್ಖಂಡ್‌ನ ಆದಿವಾಸಿಗಳ ಪರವಾಗಿ ಹೋರಾಡುತ್ತಾ ಬಂದವರು. ಇಂತಹ ಮಹಾನ್ ವ್ಯಕ್ತಿಯ ಮೇಲೆ ಸಂಘಪರಿವಾರದ ಗೂಂಡಾಗಳು ನಡೆಸಿದ ಮಾರಣಾಂತಿಕ ದಾಳಿಯನ್ನು ಎಲ್ಲರೂ ಖಂಡಿಸಬೇಕಾಗಿದೆ.

ಭಾರತ ಪ್ರಜಾಪ್ರಭುತ್ವದ ವೌಲ್ಯಗಳ ಮೇಲೆ ತಲೆಯೆತ್ತಿ ನಿಂತ ರಾಷ್ಟ್ರ. ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನವು ಈ ದೇಶದ ಎಲ್ಲ ಧರ್ಮಗಳ, ಜಾತಿಗಳ ಜನರು ಘನತೆ ಮತ್ತು ಸಮಾನತೆಯಿಂದ ಬದುಕು ಕಟ್ಟಿಕೊಳ್ಳುವ ಹಕ್ಕುಗಳನ್ನು ಕೊಡಮಾಡಿದೆ. ಕಳೆದ ಏಳು ದಶಕಗಳಿಂದ ಅದೇ ಮಾರ್ಗದಲ್ಲಿ ಸಾಗಿಬಂದ ಈ ದೇಶ 90ರ ದಶಕದಲ್ಲಿ ಬಾಬರಿ ಮಸೀದಿ ನೆಲಸಮಗೊಂಡ ಆನಂತರ ಕೋಮುವಾದಿ, ಮೂಲಭೂತವಾದಿ ಶಕ್ತಿಗಳ ಅಟ್ಟಹಾಸದ ತಾಣವಾಗಿ ಬದಲಾಗುತ್ತಿದೆ. ಜನಸಾಮಾನ್ಯರ ಅಭಿವ್ಯಕ್ತಿ ಸ್ವಾತಂತ್ರಕ್ಕೆ, ಘನತೆಯಿಂದ ಜೀವಿಸುವ ಹಕ್ಕಿಗೆ ಧಕ್ಕೆ ತರಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರದ ಪರವಾಗಿ ಮಾತನಾಡಲು ಹೆದರಿಕೆಯಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಾವು ಆಡುವ ಮಾತು, ಉಡುವ ಬಟ್ಟೆ, ಉಣ್ಣುವ ಊಟ ಎಲ್ಲವನ್ನೂ ತೀರ್ಮಾನ ಮಾಡುವ ದೊಣ್ಣೆ ನಾಯಕರು ಇಲ್ಲಿ ಹುಟ್ಟಿಕೊಂಡಿದ್ದಾರೆ. ಮುಕ್ತ ಅಭಿವ್ಯಕ್ತಿ ಮತ್ತು ಸಂವಾದಗಳು ಸ್ಥಗಿತಗೊಳ್ಳುವ ಂತಹ ಸನ್ನಿವೇಶ ನಿರ್ಮಾಣವಾಗಿದೆ. 2002ರಲ್ಲಿ ಗುಜರಾತ್ ಹತ್ಯಾಕಾಂಡಕ್ಕೆ ಕಾರಣವಾದ ನರೇಂದ್ರ ಮೋದಿ ಈ ದೇಶದ ಪ್ರಧಾನಮಂತ್ರಿಯಾದ ಆನಂತರ ದೇಶದಲ್ಲಿ ಒಂದು ವಿಧದ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾದಂತಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಯಾರನ್ನೂ ಯಾರೂ ಕೊಲ್ಲುತ್ತಿರಲಿಲ್ಲ. ಆದರೆ, ಈಗ ಬೀದಿ ಬೀದಿಗಳಲ್ಲಿ ಕಂಡಕಂಡವರನ್ನು ಕೊಂದು ಹಾಕುತ್ತಿದ್ದಾರೆ. ಸಮಾನತೆಯ ಪರವಾಗಿ, ಮಾನವತೆಯ ಪರವಾಗಿ ಧ್ವನಿ ಎತ್ತುತ್ತಿರುವವರನ್ನು ಕೊಚ್ಚಿಹಾಕುತ್ತಿದ್ದಾರೆ. ಈ ಎಲ್ಲ ದುಷ್ಕೃತ್ಯಗಳಿಗೆ ಈ ದೇಶವನ್ನು ಆಳುವವರ ವೌನ ಸಮ್ಮತಿ ಇದ್ದಂತೆ ಕಾಣುತ್ತದೆ.

ಮೂಢನಂಬಿಕೆ ವಿರೋಧಿ ಹೋರಾಟಗಾರ ದಾಭೋಲ್ಕರ್ ಅವರ ಹತ್ಯೆ ನಡೆಯಿತು. ಆನಂತರ ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪನ್ಸಾರೆ ಅವರನ್ನು ಕೊಂದು ಹಾಕಿದರು. ಕರ್ನಾಟಕದ ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಟ್ಟು ಕೊಂದರು. ಕಳೆದ ವರ್ಷ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಮನೆ ಬಾಗಿಲಿಗೆ ಬಂದು ಹತ್ಯೆ ಮಾಡಿದರು. ಮಂಗಳವಾರ ಸ್ವಾಮಿ ಅಗ್ನಿವೇಶ್ ಅವರನ್ನು ಕೊಂದು ಹಾಕಲು ನಡು ರಸ್ತೆಯಲ್ಲಿ ದಾಳಿ ಮಾಡಿದರು. ಇಷ್ಟೆಲ್ಲ ನಡೆದರೂ ‘ಮನ್ ಕಿ ಬಾತ್’ ಮಾತನಾಡುವ ಪ್ರಧಾನಮಂತ್ರಿ ವೌನವಾಗಿದ್ದಾರೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ‘ವೌನಿ ಬಾಬಾ’ ಎಂದು ಕರೆಯುತ್ತಿದ್ದ ನರೇಂದ್ರ ಮೋದಿ ಈಗ ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ. ಈ ಎಲ್ಲ ಹತ್ಯೆಗಳಿಗೆ ಮತ್ತು ಸ್ವಾಮಿ ಅಗ್ನಿವೇಶ್ ಮೇಲಿನ ದಾಳಿಗೆ 

 ಪ್ರಧಾನಮಂತ್ರಿಯ ವೌನಸಮ್ಮತಿ ಇದ್ದಂತೆ ಕಾಣುತ್ತದೆ. ಸ್ವಾಮಿ ಅಗ್ನಿವೇಶ್ ಮೇಲೆ ತಮ್ಮದೇ ಪಕ್ಷದ ಕಾರ್ಯಕರ್ತರು ಪೈಶಾಚಿಕವಾಗಿ ಹಲ್ಲೆ ಮಾಡಿದ ನಂತರವೂ ಪ್ರಧಾನಮಂತ್ರಿ ವೌನ ತಾಳಿದ್ದಾರೆ ಎಂದರೆ ಅದರ ಅರ್ಥ ಏನು? ಇಂತಹ ಕೊಲೆಗಡುಕ ಕೃತ್ಯಗಳ ಮೂಲಕ ದೇಶದಲ್ಲಿ ಯಾವ ಅಚ್ಛೇ ದಿನ ತರಲು ಇವರು ಹೊರಟಿದ್ದಾರೆ? ಈ ಕೊಲೆಗಡುಕ ಕೃತ್ಯಗಳು ಬೇರೆ ದೇಶಗಳಿಗೆ ಏನು ಸಂದೇಶ ನೀಡುತ್ತವೆೆ? ಅಸಾರಾಂ ಬಾಪು ಅವರಂತಹ ಅತ್ಯಾಚಾರಿ ಸನ್ಯಾಸಿಗಳೊಂದಿಗೆ ಸಂಬಂಧವಿರಿಸಿಕೊಂಡು ಅವರನ್ನು ರಕ್ಷಿಸುತ್ತಾ ಬಂದ ಬಿಜೆಪಿ ಮತ್ತು ಸಂಘಪರಿವಾರ ಜನಸಾಮಾನ್ಯರ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ, ಸಾತ್ವಿಕ ಮನಸ್ಸಿನ ಹಿಂದೂ ಸನ್ಯಾಸಿ ಅಗ್ನಿವೇಶ್ ಅಂತಹವರ ಮೇಲೆ ಧರ್ಮದ ಹೆಸರಿನಲ್ಲಿ ದಾಳಿ ಮಾಡುವುದರ ಉದ್ದೇಶವೇನು? ‘ದಯಯೇ ಧರ್ಮದ ಮೂಲ’ ಎಂದು ಬಸವಣ್ಣ ಹೇಳಿದರು. ‘ಸರ್ವೇ ಜನಃ ಸುಖಿನೋ ಭವಂತು’ ಎಂದು ನಮ್ಮ ವೇದಗಳು ಹೇಳುತ್ತವೆ. ಆದರೆ, ವಿಚಾರವಾದಿಗಳನ್ನು ಕೊಲ್ಲುವ, ಸ್ವಾಮಿ ಅಗ್ನಿವೇಶ್ ಅಂತಹವರ ಮೇಲೆ ಹಲ್ಲೆ ಮಾಡುವ, ಕೊಲೆ ಮಾಡುವ ಈ ಭಯೋತ್ಪಾದಕರ ಧರ್ಮ ಯಾವುದು? ಜಾರ್ಖಂಡ್‌ನಲ್ಲಿ ಮಂಗಳವಾರ ನಡೆದಿರುವುದು ಭಯೋತ್ಪಾದನೆ ಅಲ್ಲದೆ, ಬೇರೇನೂ ಅಲ್ಲ.

ಧರ್ಮದ ಹೆಸರು ಹೇಳಿಕೊಂಡು ಯಾರೇ ಇಂತಹ ಗೂಂಡಾಗಿರಿ ಮಾಡಿದರೂ, ಯಾರೇ ಭಯೋತ್ಪಾದಕ ಕೃತ್ಯ ಮಾಡಿದರೂ ಅವರನ್ನು ದಂಡಿಸಬೇಕಾಗಿರುವುದು ಅಧಿಕಾರದಲ್ಲಿರುವವರ ಕರ್ತವ್ಯ. ಮಂಗಳವಾರ ದಾಳಿಗೆ ಗುರಿಯಾದ ಸ್ವಾಮಿ ಅಗ್ನಿವೇಶ್ ಸಾಮಾನ್ಯ ವ್ಯಕ್ತಿಯಲ್ಲ. ಆಧುನಿಕ ವಿವೇಕಾನಂದರೆಂದೇ ಕರೆಸಿಕೊಳ್ಳುತ್ತಿರುವ 80ರ ಹಿರಿ ವಯಸ್ಸಿನ ಅವರ ಮೇಲೆ ನಡುರಸ್ತೆಯಲ್ಲೇ ಈ ರೀತಿ ಹಲ್ಲೆ ಮಾಡುತ್ತಾರೆಂದರೆ ಅದರ ಅರ್ಥ ಏನು? ಈ ದೇಶದಲ್ಲಿ ಶಾಸನ ಬದ್ಧ ಆಡಳಿತ ಸತ್ತು ಹೋಗಿದೆಯೇ? ಅಧಿಕಾರದಲ್ಲಿರುವವರೇ ಮೌನವಾಗಿ ಕುಳಿತರೆ ಪ್ರಜೆಗಳನ್ನು ರಕ್ಷಿಸುವವರು ಯಾರು?

ಮಂಗಳವಾರ ಜಾರ್ಖಂಡ್‌ನಲ್ಲಿ ಆದಿವಾಸಿಗಳ ಸಭೆಯೊಂದರಲ್ಲಿ ಮಾತನಾಡಲು ಬಂದಿದ್ದ ಅಗ್ನಿವೇಶ್ ಅವರ ಮೇಲೆ ನಡೆದ ಹಲ್ಲೆ ಪೂರ್ವನಿಯೋಜಿತವಾಗಿದೆ. ಇದಕ್ಕಾಗಿ ಅಮಾಯಕ ಹುಡುಗರನ್ನು ಬಳಸಿಕೊಳ್ಳಲಾಗಿದೆ. ಏನೂ ತಿಳಿಯದ ಯುವಕರ ತಲೆಯಲ್ಲಿ ಧರ್ಮದ ವಿಷವನ್ನು ತುಂಬಿ ಅವರ ಮೂಲಕ ಈ ಕೃತ್ಯ ಎಸಗಲಾಗಿದೆ. ಈ ಹಲ್ಲೆ ನಡೆಯುವ ಮುನ್ನ ಅಗ್ನಿವೇಶ್ ತಂಗಿದ್ದ ಹೊಟೇಲ್ ಮುಂದೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿತ್ತು. ದಾಳಿಯ ಮುನ್ಸೂಚನೆಯನ್ನು ಅರಿತ ಅಗ್ನಿವೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಫೋನ್ ಮಾಡಿ ರಕ್ಷಣೆ ಕೋರಿದ್ದರು. ಆದರೆ, ಛತ್ತೀಸ್‌ಗಡದ ಬಿಜೆಪಿ ಸರಕಾರ ಅಗ್ನಿವೇಶ್‌ಗೆ ರಕ್ಷಣೆ ನೀಡಲಿಲ್ಲ. ಘಟನೆ ನಡೆದ ಸ್ಥಳದಲ್ಲಿ ದೂರ ನಿಂತಿದ್ದ ಪೊಲೀಸರು ಮೌನ ಪ್ರೇಕ್ಷಕರಂತೆ ವರ್ತಿಸಿದ್ದಾರೆ. ಇದನ್ನು ಈ ದೇಶದ ಪ್ರಜಾಪ್ರಭುತ್ವವಾದಿಗಳು ಅತ್ಯಂತ ಉಗ್ರವಾಗಿ ಖಂಡಿಸಬೇಕಾಗಿದೆ.

ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿರುವ ಫ್ಯಾಶಿಸ್ಟ್ ಶಕ್ತಿಗಳು ಹಾಗೂ ಗಾಂಧಿ ಹಂತಕ ಪರಿವಾರದವರು ತಮ್ಮ ವಿಚಾರವನ್ನು ಒಪ್ಪದ ಎಲ್ಲರ ಮೇಲೂ ದಾಳಿ ಮಾಡುತ್ತಿದ್ದಾರೆ. ಕಾಶಿಯ ವಿಧವೆಯರ ಸಿನೆಮಾ ತೆಗೆಯಲು ಹೋದಾಗ ಚಿತ್ರ ತಂಡದ ಮೇಲೆ ದಾಳಿ ಮಾಡಿದರು. ಈ ದೇಶದ ಮಹಾನ್ ಚಿತ್ರಕಲಾವಿದ ಹಾಗೂ ಮಹಾನ್ ದೇಶ ಭಕ್ತ ಎಂ.ಎಫ್. ಹುಸೇನ್ ಇವರ ಗೂಂಡಾಗಿರಿಗೆ ಬೆದರಿ ಈ ದೇಶವನ್ನೇ ಬಿಟ್ಟುಹೋದರು. ಅವರ ಕಲಾಕೃತಿಗಳು ಬೆಂಕಿಗೆ ಆಹುತಿಯಾದವು. ತಮಿಳುನಾಡಿನಲ್ಲಿ ಪೆರುಮಾಳ್ ಮುರುಗನ್ ಎಂಬ ಸಾಹಿತಿ ಬರೆದ ಕಾದಂಬರಿಯ ಬಗ್ಗೆ ಪ್ರತಿಭಟಿಸಿ ಅವರಿಗೆ ಪ್ರಾಣ ಬೆದರಿಕೆ ಹಾಕಿದರು. ಇನ್ನು ಮುಂದೆ ಸಾಹಿತ್ಯವನ್ನೇ ರಚಿಸುವುದಿಲ್ಲ ಎಂದು ಅವರಿಂದ ಪತ್ರ ಬರೆಸಿಕೊಂಡರು. ಭಾರತದಲ್ಲಿ ಅಸಹನೆ ಹೆಚ್ಚುತ್ತಿದೆ ಎಂದು ಹೇಳಿದ ತಪ್ಪಿಗಾಗಿ ಆಮಿರ್ ಖಾನ್ ಮತ್ತು ಶಾರುಖ್ ಖಾನ್ ಅವರಿಗೂ ಪ್ರಾಣ ಬೆದರಿಕೆಗಳು ಬಂದಿದ್ದವು. ಪಾಕಿಸ್ತಾನಕ್ಕೆ ಹೋಗುವಂತೆ ಅವರಿಗೆ ಬೆದರಿಕೆ ಹಾಕಿದ್ದರು. ಸಾಹಿತಿ ಯು.ಆರ್. ಅನಂತಮೂರ್ತಿ ಅವರಿಗೆ ಬದುಕಿರುವವರೆಗೂ ಚಿತ್ರಹಿಂಸೆ ನೀಡಿದರು. ನರೇಂದ್ರ ಮೋದಿ ಪ್ರಧಾನಮಂತ್ರಿ ಆದ ನಂತರವಂತೂ ಇವರು ನೇರವಾಗಿ ಹತ್ಯಾಕಾಂಡಕ್ಕೆ ಇಳಿದಿದ್ದಾರೆ. ಬರಲಿರುವ ದಿನಗಳು ಇನ್ನೂ ಭಯಾನಕವಾಗಿವೆ. ಇಂತಹ ಸನ್ನಿವೇಶದಲ್ಲಿ ಸಂವಿಧಾನ ರಕ್ಷಕರಾದ ರಾಷ್ಟ್ರಪತಿ ಮಧ್ಯಪ್ರವೇಶ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಈ ಸರಕಾರಕ್ಕೆ ತಾಕೀತು ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News