ಹೈದರಾಬಾದ್: ಮಕ್ಕಳ ಆಹಾರದಲ್ಲಿ ಕೀಟನಾಶಕವೇ ಅಧಿಕ!

Update: 2018-07-19 07:50 GMT

ಹೈದರಾಬಾದ್, ಜು.19: ಇಲ್ಲಿನ ಮಕ್ಕಳು ತಿನ್ನುವ ಆಹಾರದಲ್ಲಿ ಯುರೋಪ್, ಅಮೆರಿಕ ಅಥವಾ ಕೆನಡಾ ಮಕ್ಕಳು ತಿನ್ನುವ ಆಹಾರಕ್ಕಿಂತ 40 ಪಟ್ಟು ಅಧಿಕ ಕೀಟನಾಶಕ ಇದೆ ಎಂಬ ಆಘಾತಕಾರಿ ಅಂಶ ಅಧ್ಯಯವೊಂದರಿಂದ ಬಹಿರಂಗವಾಗಿದೆ.

ಮಕ್ಕಳು ಆಹಾರದ ಮೂಲಕ ಎಷ್ಟು ಪ್ರಮಾಣದ ಕೀಟನಾಶಕ ಸೇವಿಸುತ್ತಿದ್ದಾರೆ ಎನ್ನುವುದನ್ನು ಪತ್ತೆ ಮಾಡುವ ಸಲುವಾಗಿ ಹೈದರಾಬಾದ್ ಮೂಲಕ ರಾಷ್ಟ್ರೀಯ ಪೌಷ್ಟಿಕ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಮಕ್ಕಳ ಆಹಾರದಲ್ಲಿ ಎಷ್ಟು ಪ್ರಮಾಣದಲ್ಲಿ ಆರ್ಗನೋಪಾಸ್ಫೇಟ್ (ಓಪಿ) ಅಂಶ ಇದೆ ಎನ್ನುವ ಬಗ್ಗೆ ಸಂಸ್ಥೆ ಅಧ್ಯಯನ ನಡೆಸಿತ್ತು. ಇದು ಸಾಮಾನ್ಯವಾಗಿ ಬಳಸುವ ಕೀಟನಾಶಕವಾಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ 40ಕ್ಕೂ ಹೆಚ್ಚು ಉತ್ಪನ್ನಗಳ ಓಪಿ ಅಂಶವನ್ನು ಪತ್ತೆ ಮಾಡಲಾಗಿದೆ.

ಓಪಿ ಕೀಟನಾಶಕ ಮಾನವ ಶರೀರಕ್ಕೆ ಸೇರಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಡೈಆಲ್ಕಲೈಲ್ ಫಾಸ್ಫೇಟ್ ಮೆಟಾಬೊಲಿಟಿಸ್ (ಡಿಎಪಿ) ಆಗಿ ಪರಿವರ್ತನೆಯಾಗುತ್ತದೆ. ಇದನ್ನು ಮೂತ್ರದ ಮೂಲಕ ದೇಹ ಹೊರಕ್ಕೆ ಹಾಕುತ್ತದೆ. ಮಕ್ಕಳ ಆಹಾರದಲ್ಲಿ ಎಷ್ಟರ ಮಟ್ಟಿಗೆ ಕೀಟನಾಶಕ ಸೇರಿದೆ ಎಂದು ತಿಳಿಯುವ ಸಲುವಾಗಿ ಎನ್‌ಐಎನ್ ವಿಜ್ಞಾನಿಗಳು, 6ರಿಂದ 15 ವರ್ಷ ವಯೋಮಿತಿಯ 377 ಮಕ್ಕಳ ಮೂತ್ರದ ಮಾದರಿ ಸಂಗ್ರಹಿಸಿದ್ದಾರೆ. ಈ ಮಕ್ಕಳಲ್ಲಿ ಸರಾಸರಿ ಪ್ರತಿ ಲೀಟರ್‌ಗೆ 4.1 ಮೈಕ್ರೊಮೋಲ್‌ನಷ್ಟು ಕೀಟನಾಶಕ ಪತ್ತೆಯಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.

ಡಿಎಪಿ ಪ್ರಮಾಣಕ್ಕೆ ರಾಷ್ಟ್ರೀಯ ಮಾನದಂಡ ಇದುವರೆಗೂ ನಿಗದಿಪಡಿಸಿಲ್ಲವಾದರೂ, ಇದು ವಿದೇಶಗಳಲ್ಲಿ ಇರುವ ಡಿಎಪಿ ಪ್ರಮಾಣಕ್ಕೆ ಹೋಲಿಸಿದರೆ 40 ಪಟ್ಟು ಅಧಿಕವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News