×
Ad

ವಿದೇಶಿ ಕಾಳುಮೆಣಸು ಆಮದು ತಡೆಗೆ ಕೇಂದ್ರ ಮುಂದಾಗದಿದ್ದರೆ ಪ್ರತಿಭಟನೆ: ರೈತ ಸಂಘ ಮುಖಂಡ ದುಗ್ಗಪ್ಪಗೌಡ

Update: 2018-07-19 17:09 IST

ಚಿಕ್ಕಮಗಳೂರು, ಜು.19: ಕೇಂದ್ರ ಸರಕಾರ ಕಳಪೆ ಗುಣಮಟ್ಟದ ಕಾಳು ಮೆಣಸನ್ನು ಅತ್ಯಂತ ಕಡಿಮೆ ಬೆಲೆಗೆ ಆಮದು ಮಾಡಿಕೊಂಡು ಅದನ್ನೇ ಯೂರೋಪ್ ದೇಶಗಳಿಗೆ ರಪ್ತು ಮಾಡುತ್ತಿರುವುದರಿಂದ ಸ್ಥಳೀಯವಾಗಿ ಬೆಳೆಯಲಾಗುತ್ತಿರುವ ಉತ್ತಮ ಗುಣಮಟ್ಟದ ಕಾಳು ಮೆಣಸು ಧಾರಣೆ ಅತ್ಯಂತ ಕಡಿಮೆಯಾಗಿದೆ. ಧಾರಣೆ ಕುಸಿತದಿಂದಾಗಿ ಬೆಳೆಗಾರರಿಗೆ ಮಾಡಿದ ಖರ್ಚೂ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ನೀಡುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶದಿಂದ ಬರುವ ಅಗ್ಗದ ಕಾಳುಮೆಣಸಿನ ಹಾವಳಿಯಿಂದ ಸ್ಥಳೀಯ ಬೆಳೆಗಾರರು ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. 2015-16ರಲ್ಲಿ ಪ್ರತೀ ಕೆ.ಜಿ. ಕಾಳುಮೆಣಸಿಗೆ 600 ರೂ. ಬೆಲೆ ಇತ್ತು. ಪ್ರಸಕ್ತ 250 ರೂ. ಇದ್ದು, ಈ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಬೆಲೆ ಕುಸಿತದಿಂದ ಕಾಫಿ ಬೆಳೆಗಾರರು, ಕಾರ್ಮಿಕರು ಮತ್ತು ಸ್ಥಳೀಯ ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ತುತ್ತಾಗಿದ್ದಾರೆಂದ ಅವರು, ಕೇಂದ್ರ ಸರಕಾರ ಈ ಕೂಡಲೇ ಶ್ರೀಲಂಕಾ, ವಿಯೆಟ್ನಾಂ ಮತ್ತಿತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕಳಪೆ ಕಾಳು ಮೆಣಸು ಆಮದು ತಡೆಗೆ ಮುಂದಾಗಬೇಕು. ಅಲ್ಲದೆ ಕಳ್ಳ ಮಾರ್ಗದ ಮೂಲಕ ದೇಶಕ್ಕೆ ಬರುತ್ತಿರುವ ಕಾಳುಮೆಣಸಿನ ತಡೆಗೂ ಸೂಕ್ತ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಕೇಂದ್ರದ ರೈತ ವಿರೋಧಿ ನೀತಿ ಖಂಡಿಸಿ ಎಲ್ಲೆಡೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಸಿದರು.

ಕಳಪೆ ಗುಣಮಟ್ಟದ ವಿದೇಶಿ ಕಾಳುಮೆಣಸಿಗೆ ಧಾರಣೆ ಕಡಿಮೆ ಇದೆ. ಕೇಂದ್ರ ಸರಕಾರ ವಿದೇಶಿ ಕಾಳುಮೆಣಸು ಆಮದಿನ ಮೇಲೆ ಅಧಿಕ ಶುಲ್ಕ ವಿಧಿಸಿದ್ದರೂ ಕಳ್ಳಮಾರ್ಗದಿಂದ ಕಾಳುಮೆಣಸು ಆಮದಾಗುತ್ತಿದೆ. ಇದನ್ನು ತಡೆಯಲು ಕೇಂದ್ರ ಮುಂದಾಗಿಲ್ಲ. ಪರಿಣಾಮವಾಗಿ ರಾಜ್ಯದ ಚಿಕ್ಕಮಗಳೂರು, ಕೊಡಗು, ಮಡಕೇರಿ, ಶಿವಮೊಗ್ಗ ಜಿಲ್ಲೆಗಳ ಕಾಳುಮೆಣಸು ಬೆಳೆಗಾರರು ಬೀದಿಪಾಲಾಗುವ ಆತಂಕದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮುಕ್ತ ಆಮದು ನೀತಿಯಿಂದಾಗಿ ಶ್ರೀಲಂಕಾ, ನೇಪಾಳ, ವಿಯೆಟ್ನಾಂನಿಂದ ಕಳ್ಳಮಾರ್ಗದಲ್ಲಿ ಅಗ್ಗದ ಬೆಲೆಯ ಕಳಪೆ ಕಾಳುಮೆಣಸು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ಕಾಳು ಮೆಣಸು ಬೆಲೆ ಪಾತಾಳಕ್ಕೆ ಇಳಿದಿದೆ. ಇದರಿಂದಾಗಿ ಸ್ಥಳೀಯ ಕಾಳು ಮೆಣಸು ಬೆಳೆಗಾರರಿಗೆ ಉತ್ಪದನಾ ವೆಚ್ಚವು ಭರಿಸಲು ಸಾಧ್ಯವಾಗುತ್ತಿಲ್ಲ. ಬೆಳೆ ಬೆಳೆಯಲು ಮಾಡಿದ ಸಾಲ ದುಪ್ಪಟ್ಟಾಗುತ್ತಿದೆ ಎಂದರು.

ದೊಡ್ಡ ಬಂಡವಾಳಶಾಹಿ ಕಂಪೆನಿಗಳು ಕಡಿಮೆ ಬೆಲೆಗೆ ವಿದೇಶಿ ಕಾಳುಮೆಣಸು ಖರೀದಿಸಿ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆಮದು ಮೇಲಿನ ನಿರ್ಬಂಧ ತೆಗೆದ ಕೇಂದ್ರ ಸರಕಾರ ರಫ್ತಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಶುರು ಮಾಡಿದೆ. ಇದು ರೈತರ ಮೇಲೆ ದುಷ್ಪರಿಣಾಮ ಬೀರಿದೆ. ಅಕ್ರಮ ಕಾಳುಮೆಣಸು ತಡೆಯುವಂತೆ ಕೇಂದ್ರ ಸರಕಾರಕ್ಕೆ ಎಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ ಅವರು, ಕಾಳುಮೆಣಸು ಆಮದು ಮೇಲೆ ಅಧಿಕ ಶುಲ್ಕ ವಿಧಿಸಿ ಆಮದು ತಡೆಯುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದ್ದರೂ ಸಂಬಂಧಿಸಿದ ವಾಣಿಜ್ಯ ಸಚಿವಾಲಯದ ಕಸ್ಟಮ್ಸ್ ಅಧಿಕಾರಿಗಳು ಅಧಿಕ ಶುಲ್ಕದ ಆದೇಶ ಜಾರಿ ಮಾಡದೇ ದೈತ್ಯ ಕಂಪನಿಗಳ ಪರ ನಿಂತಿದ್ದಾರೆಂದು ಆರೋಪಿಸಿದರು.

ಜನಪ್ರತಿನಿಧಿಗಳು ಕಾಳುಮೆಣಸು ಬೆಳೆಗಾರರ ಹಿತಕಾಯಲು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು. ಮುಂದಿನ ದಿನಗಳಲ್ಲಿ ಅಕ್ರಮ ಕಾಳುಮೆಣಸು ಆಮದಿಗೆ ಕಡಿವಾಣ ಹಾಕಬೇಕು. ಸ್ಥಳೀಯ ಕಾಳುಮೆಣಸು ಬೆಳೆಗಾರರ ಹಿತಕಪಾಡಬೇಕೆಂದ ಅವರು, ಅಕ್ರಮ ಕಾಳುಮೆಣಸು ತಡೆಗೆ ಕೇಂದ್ರ ಮುಂದಾಗದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಮಳೆಹಾನಿಯಾದ ಪ್ರದೇಶಗಳಲ್ಲಿ ಎಕರೆಗೆ 25 ಸಾವಿರ ರೂ. ಪರಿಹಾರಕ್ಕೆ ಒತ್ತಾಯ: 
ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ಬಾರಿ ಮಳೆ, ಗಾಳಿಗೆ ಮಲೆನಾಡು ಭಾಗದಲ್ಲಿ ಕಾಫಿ, ಮೆಣಸು ಶೇ.60ರಷ್ಟು ಹಾನಿ ಉಂಟಾಗಿದೆ. ಬೃಹತ್ ಮರಗಳು ಉರುಳಿ ಬಿದ್ದು ಕಾಫಿ ತೋಟಗಳು ನಾಶವಾಗಿದೆ. ಬಾಳೆ ಬೆಳೆ ನೆಲಕಚ್ಚಿದೆ. ಅಪಾರ ಪ್ರಮಾಣದ ಜಮೀನಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಸುಮಾರು 200ರಿಂದ 250ಕೋಟಿ. ರೂ. ಬೆಳೆ ಹಾನಿಯಾಗಿದೆ. ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಕಾಫಿ ಮಂಡಳಿ ಅಧಿಕಾರಿಗಳಿಂದ ರೈತರಿಗೆ ಆಗಿರುವ ಹಾನಿ ಬಗ್ಗೆ ವರದಿ ಪಡೆದು ಕನಿಷ್ಠ ಎಕರೆಗೆ 25 ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಾಲಮನ್ನಾ ಷರತ್ತು ಸಡಿಲಿಸಲು ಒತ್ತಾಯ: 

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ದುಗ್ಗಪ್ಪಗೌಡ ಒತ್ತಾಯಿಸಿದರು. ರೈತರ ಎರಡು ಲಕ್ಷ ರೂ. ರಾಜ್ಯ ಸರಕಾರ ಮನ್ನಾ ಮಾಡಿದೆ. ಸಾಲಮನ್ನಾ ಯೋಜನೆಗೆ ಹೆಚ್ಚಿನ ಷರತ್ತುಗಳನ್ನು ಹಾಕಿರುವುದರಿಂದ ಹೆಚ್ಚಿನ ರೈತರಿಗೆ ಇದರ ಲಾಭವಾಗಿಲ್ಲ. ಆದ್ದರಿಂದ ನಿಂಬಂಧನೆ ಸಡಿಲಿಸಿ ಸಂಪೂರ್ಣ ಸಾಲಮನ್ನಾ ಮಾಡುವಂತೆ ಒತ್ತಾಯಿಸಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದಕ್ಕೂ ಮುನ್ನಾ ಚುನಾವಣಾ ವೇಳೆ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಈ ಕೂಡಲೆ ಕೇಂದ್ರ ಸರಕಾರ ರೈತರ ಸಾಲಮನ್ನಾ ಮಾಡಬೇಕೆಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ನಾಗರಾಜ್, ತಾಲೂಕು ಅಧ್ಯಕ್ಷ ಮಂಜೇಗೌಡ, ಸುಧೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News