×
Ad

ಹಾಸನ: ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್‍ ನೀಡಲು ಒತ್ತಾಯಿಸಿ ಎನ್‍ಎಸ್‍ಯುಐ ಧರಣಿ

Update: 2018-07-19 17:17 IST

ಹಾಸನ,ಜು.19: ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವಿತರಣೆ ಮುಂದುವರೆಸುವಂತೆ ಒತ್ತಾಯಿಸಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ)ನಿಂದ ಧರಣಿ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸಾಗಿತು. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವಿತರಣೆ ಮಾಡಲು ಬಜೆಟ್‍ನಲ್ಲಿ ಹಣ ನಿಗದಿಪಡಿಸಿದ್ದರು. ಈಗಿನ ಸಿಎಂ ಕುಮಾರಸ್ವಾಮಿ ಯೋಜನೆಯನ್ನು ಮುಂದುವರೆಸದೇ ಕೈಬಿಟ್ಟಿರುವುದನ್ನು ಖಂಡನೀಯ. ಸಿದ್ದರಾಮಯ್ಯ ಅವರ ಪ್ರತಿ ಬಜೆಟ್‍ನಲ್ಲೂ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವಾಗಿ ಅನುದಾನವನ್ನು ಮೀಸಲಿಡುತ್ತಲೇ ಬರಲಾಗಿತ್ತು. ಜೊತೆಗೆ ಪ್ರತಿ ಹಂತದಲ್ಲೂ ಅನುಕೂಲವಾಗುವಂತಹ ಯೋಜನೆಯನ್ನು ಜಾರಿ ಮಾಡಿದ್ದು, ಉಚಿತ ಶೂ, ಲ್ಯಾಪ್‍ಟಾಪ್ ವಿತರಣೆಯಂತಹ ಕ್ರಮಗಳಿಂದ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಾಗುವಂತೆ ಮಾಡಲಾಗಿತ್ತು. ಇದರಿಂದ ಶಿಕ್ಷಣದಿಂದ ಯಾರೂ ವಂಚಿತರಾಗದಂತೆ ಅವರಲ್ಲಿ ಉತ್ಸಾಹ ಹೆಚ್ಚು ಮಾಡಲಾಗಿತ್ತು ಎಂದರು. 

ಇಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡುವ ಕಾರಣಕ್ಕಾಗಿ ಉಚಿತ ಬಸ್‍ಪಾಸ್ ವಿತರಣೆಯನ್ನು ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲ. ಉಚಿತ ಬಸ್‍ಪಾಸ್ ಪಡೆಯುವ ಬಹುತೇಕ ವಿದ್ಯಾರ್ಥಿಗಳು ರೈತರ ಮಕ್ಕಳೇ ಆಗಿದ್ದಾರೆ. ಬೇರೆ ಬೇರೆ ಕ್ಷೇತ್ರದ ಅನುಧಾನವನ್ನು ಕೃಷಿ ಕ್ಷೇತ್ರಕ್ಕೆ ಬಳಸಿಕೊಂಡು ಉಚಿತ ಬಸ್‍ಪಾಸ್ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಈಗಾಗಲೇ ಶಾಲಾ-ಕಾಲೇಜುಗಳು ಪ್ರಾರಂಭವಾಗಿ ಎರಡು ತಿಂಗಳುಗಳು ಕಳೆದಿದೆ. ಬಸ್‍ಪಾಸ್ ವಿಚಾರದಲ್ಲಿ ವಿದ್ಯಾರ್ಥಿಗಳು ಗೊಂದಲದಲ್ಲಿ ಇದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ವಿತರಣೆಗೆ ಆದೇಶ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ರಾಜ್ಯ ಉಪಾಧ್ಯಕ್ಷ ಚೇತನ್, ಜಿಲ್ಲಾಧ್ಯಕ್ಷ ಜಿ.ಆರ್. ರಂಜಿತ್, ಜಿಲ್ಲಾ ಉಪಾಧ್ಯಕ್ಷ ಉಜ್ವಲ್, ಜಿಲ್ಲಾ ಉಪಾಧ್ಯಕ್ಷ ಅವಿನಾಶ್, ಸಾಗರ್, ಎಲ್.ಡಿ. ಸುದೀಪ್, ಹೇಮಂತ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News