ಗೌಡರ ಕೊಡುಗೆಗಳ ಬಗ್ಗೆ ಹುಬ್ಬಳ್ಳಿಯಲ್ಲೆ ಬಹಿರಂಗ ಚರ್ಚೆಗೆ ಸಿದ್ಧ: ಮಾಜಿ ಶಾಸಕ ವೈಎಸ್‌ವಿ ದತ್ತ
ಬೆಂಗಳೂರು, ಜು. 19: ಉತ್ತರ ಕರ್ನಾಟಕಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಕೊಡುಗೆಗಳ ಬಗ್ಗೆ ಹುಬ್ಬಳ್ಳಿಯಲ್ಲೆ ಬಹಿರಂಗ ಚರ್ಚೆಗೆ ಸಿದ್ಧ. ಅನ್ಯಾಯ ಮಾಡಿದ್ದಾರೆಂದು ಆರೋಪಿಸುವವರು ಚರ್ಚೆಗೆ ಬರಲಿ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಪಂಥಾಹ್ವಾನ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉ.ಕ.ದ ಅಭಿವೃದ್ದಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಶೆಟ್ಟರ್ ಆಗ್ರಹವನ್ನು ಸ್ವಾಗತಿಸುವೆ. ಕೇಂದ್ರದಲ್ಲಿದ್ದ ಎನ್‌ಡಿಎ ಸರಕಾರದ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಎಷ್ಟೆಂಬ ಬಗ್ಗೆ ಕಪ್ಪು ಪತ್ರ ನೀಡಲು ಸಿದ್ಧ ಎಂದು ಹೇಳಿದರು.
ಗೌಡರು ನೀರಾವರಿ ಸಚಿವರಾಗಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಉತ್ತರ ಕರ್ನಾಟಕ ಭಾಗಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ 50 ಪುಟಗಳ ಬಹಿರಂಗ ಪತ್ರ ಅಥವಾ ಉತ್ತರ ಪತ್ರವನ್ನು ಬಿಡುಗಡೆ ಮಾಡಿದ ಅವರು, ಉ.ಕ. ಭಾಗಕ್ಕೆ ಗೌಡರಿಂದ ಅನ್ಯಾಯವಾಗಿದೆ ಎಂಬ ಆರೋಪಕ್ಕೆ ಇದು ಉತ್ತರವಾಗಲಿದೆ ಎಂದರು.
ಉತ್ತರ ಪತ್ರದಲ್ಲಿರುವ ಅಂಕಿ-ಅಂಶಗಳು, ಆದೇಶಗಳು, ವಾಸ್ತವವಾಗಿದ್ದು, ಆಧಾರ ಸಹಿತವಾಗಿವೆ. ವೈಯಕ್ತಿಕ ನೆಲೆಗಟ್ಟಿನಲ್ಲಿ ಉತ್ತರ ಪತ್ರವನ್ನು ಬಿಡುಗಡೆ ಮಾಡಿದ್ದೇನೆ ಎಂದ ಅವರು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿ ಎನ್‌ಡಿಎ ಅವಧಿಯಲ್ಲಿ ಆಗಿರುವ ಅನ್ಯಾಯದ ಬಗ್ಗೆ ಕಪ್ಪುಪತ್ರ ಹೊರತರಲಾಗುವುದು ಎಂದು ಎಚ್ಚರಿಸಿದರು.
ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯಕ್ಕಾಗಿ ಹೋರಾಟ ಮಾಡಿದವರು ಗೌಡರು. ಅದರ ಪರಿಣಾಮ ಬೆಂಗಳೂರಿನಲ್ಲಿ ರೈಲ್ವೆ ವಲಯ ಸ್ಥಾಪನೆಯಾಯಿತು. ಹುಬ್ಬಳ್ಳಿಯ ರೈಲ್ವೆ ವರ್ಕ್ ಶಾಪ್‌ಗೂ ಪ್ರಧಾನಿಯಾಗಿದ್ದಾಗ ಕಾಯಕಲ್ಪಕೊಟ್ಟರು. ಹುಬ್ಬಳ್ಳಿ-ಅಂಕೋಲ ರೈಲ್ವೆ ಮಾರ್ಗ ಅಧಿಕಾರದಲ್ಲಿದ್ದಾಗ ಹಣ ನೀಡಿದ್ದರೂ, ಇದುವರೆಗೂ ಕಾರ್ಯಗತ ಆಗಿಲ್ಲ ಎಂದು ವಿವರಿಸಿದರು.