ಸೂಕ್ತ ಮನೆ ಸಿಗದೆ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ ಸಿದ್ದರಾಮಯ್ಯ

Update: 2018-07-19 14:22 GMT

ಬಾಗಲಕೋಟೆ, ಜು.19: ತಮ್ಮನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿರುವ ಬಾದಾಮಿ ಕ್ಷೇತ್ರದ ಜನತೆಯೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಉದ್ದೇಶದಿಂದ ಕ್ಷೇತ್ರದಲ್ಲಿಯೆ ಮನೆ ಮಾಡುವುದಾಗಿ ಪ್ರಕಟಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೂಕ್ತ ಮನೆ ಸಿಗದ ಕಾರಣ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಈ ಸಂಬಂಧ ಗುರುವಾರ ನಗರದಲ್ಲಿ ಅವರನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ತವಾದ ಮನೆ ಸಿಗದ ಕಾರಣ ಇನ್ನೂ ಬಾಡಿಗೆ ಮನೆಯನ್ನು ಮಾಡಿಲ್ಲ. ಸರಿಯಾದ ಮನೆ ಸಿಕ್ಕ ನಂತರ ನಾನು ಬಾದಾಮಿಗೆ ಆಗಮಿಸಿದಾಗ ಅದೇ ಮನೆಯಲ್ಲಿ ಉಳಿದುಕೊಳ್ಳುತ್ತೇನೆ ಎಂದರು.

ಬಾದಾಮಿಯ ಕೆಲವು ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯಗಾಗಿ ತಮ್ಮ ಮನೆಗಳನ್ನು ಉಚಿತವಾಗಿ ನೀಡಲು ಮುಂದೆ ಬಂದಿದ್ದರು. ಆದರೆ, ತನಗೆಉಚಿತ ಮನೆ ಬೇಡ, ಬಾಡಿಗೆ ಮನೆ ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕ ಎಂ.ಬಿ.ಹಂಗರಗಿ, ತಮಗಾಗಿ ಬಾದಾಮಿಯಲ್ಲಿ ಹೊಸ ಮನೆಯನ್ನೆ ನಿರ್ಮಿಸೋಣ ಎಂಬ ಪ್ರಸ್ತಾವ ಮುಂದಿಟ್ಟಿದ್ದಾಗಲು ತನಗೆ ಬಾಡಿಗೆ ಮನೆ ಮಾತ್ರ ಸಾಕು ಎಂದು ಪುನರುಚ್ಚರಿಸಿದ್ದರು.

ಜನಸಂಪರ್ಕ ಸಭೆ: ಬಾದಾಮಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಸಚಿವರನ್ನು ಇಲ್ಲಿಗೆ ಕರೆಸುತ್ತೇನೆ. ಐದು ವರ್ಷಗಳಲ್ಲಿ ನಿಮ್ಮ ಋಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಜನಸಂಪರ್ಕ ಸಭೆಯಲ್ಲಿ ಜನತೆಗೆ ಭರವಸೆ ನೀಡಿದರು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮುಳುಗಿರುವ ನನಗೆ ಆಗಾಗ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗದೆ ಇರಬಹುದು. ಆದರೆ, ಬಿಡುವಿದ್ದಾಗ ಖಂಡಿತ ಬಾದಾಮಿಗೆ ಬಂದು ನಿಮ್ಮನ್ನು ಭೇಟಿ ಮಾಡಿ, ನಿಮ್ಮ ಅಹವಾಲುಗಳನ್ನು ಆಲಿಸುತ್ತೇನೆ. ದಯಮಾಡಿ ಜನರು ತಪ್ಪು ತಿಳಿದುಕೊಳ್ಳಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಕೆಶಿಪ್ ಯೋಜನೆ ಪ್ರಗತಿ ಪರಿಶೀಲನೆ: ಕೆಶಿಪ್ ವತಿಯಿಂದ ಕೈಗೊಂಡಿರುವ ಬಾದಾಮಿ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿದ್ದರಾಮಯ್ಯ, ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ವಿಭಜಕ, ಎಲ್‌ಇಡಿ ದೀಪ ಅಳವಡಿಸಬೇಕು. ಸುಸಜ್ಜಿತ ಪಾದಾಚಾರಿ ಮಾರ್ಗ ನಿರ್ಮಿಸಬೇಕು ಎಂದರು.

ಕಾಮಗಾರಿ ಈಗಾಗಲೇ ವಿಳಂಬವಾಗಿದೆ. ಆಗಸ್ಟ್ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಬಾದಾಮಿ ವಿಧಾನಸಭೆ ಕ್ಷೇತ್ರದ ಮಂಗಳ ಗುಡ್ಡ, ಸಬ್ಬಲ ಹುಣಸಗಿ, ಇಂಚನವಾರಿ, ಹಾನಾಪುರ, ಹುಲ್ಲಿಕೇರಿ ಮತ್ತಿತರ ಗ್ರಾಮಗಳಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಣ್ಯ ಸಚಿವ ಆರ್.ಶಂಕರ್ ಅವರೊಂದಿಗೆ ಸಿದ್ದರಾಮಯ್ಯ ಸಭೆ ನಡೆಸಿದರು. ಅಲ್ಲದೆ, ಬಾದಾಮಿಯ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಕಲಚೇತನರಿಗೆ ಸಿದ್ದರಾಮಯ್ಯ ಮೋಟಾರು ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಹಂಪಿ ವಿಶ್ವವಿದ್ಯಾಲಯದ ಬಾದಾಮಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಲಲಿತ ಕಲಾ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಸಮಾಲೋಚನೆ ನಡೆಸಿದರು. ಅಲ್ಲದೆ, ಬಾದಾಮಿಯ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಬನಶಂಕರಿಯ ಪುಷ್ಕರಣಿಯ ಪುನಶ್ಚೇತನ ಕುರಿತು ಅಧಿಕಾರಿಗಳ ಜೊತೆ ಸಮಾಲೋಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News