ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ: ಶಿಕ್ಷಕರು, ಆಡಳಿತ ಮಂಡಳಿಯ ಕಿರುಕುಳ ಆರೋಪ
ಮಂಡ್ಯ, ಜು.19: ಕೆ.ಆರ್.ಪೇಟೆ ತಾಲೂಕು ಕೋಡಿಮಾರನಹಳ್ಳಿ ಚೈತನ್ಯ ವಿದ್ಯಾನಿಕೇತನ ಪ್ರೌಢಶಾಲೆಯ 10 ನೆ ತರಗತಿ ವಿದ್ಯಾರ್ಥಿನಿ ಶಾಲೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವಿದ್ಯಾರ್ಥಿನಿ ಸಂಗೀತ(14) ಗುರುವಾರ ಮಧ್ಯಾಹ್ನ ಊಟಕ್ಕೆ ಬಿಟ್ಟ ಸಮಯದಲ್ಲಿ ಶಾಲಾ ಕೊಠಡಿಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಶಿಕ್ಷಕರು, ಆಡಳಿತ ಮಂಡಳಿಯ ಪಾದ್ರಿಯ ಕಿರುಕುಳ ಕಾರಣ ಎಂದು ಆರೋಪಿಸಲಾಗಿದೆ.
9ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದಿದ್ದು, ಶಾಲೆಯಿಂದ ಟಿ.ಸಿ ತೆಗೆದುಕೊಂಡು ಬೇರೆಡೆ ಹೋಗು ಎಂದು ಸಂಗೀತಗೆ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಫಾದರ್(ಪಾದ್ರಿ) ನಿತ್ಯ ಕಿರುಕುಳ ನೀಡುತ್ತಿದ್ದರಲ್ಲದೆ, ಶಿಕ್ಷಕನೋರ್ವ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸುತ್ತಮುತ್ತಲ ಗ್ರಾಮಸ್ಥರು ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯಾರ್ಥಿನಿಯ ಕುಟುಂಬದವರ ರೋದನ ಮುಗಿಲುಮುಟ್ಟಿತ್ತು.
'ಶಾಲೆಯಲ್ಲಿ ಹೆಚ್ಚಾಗಿ ಡೊನೇಶನ್ ತಗೆದುಕೊಳ್ಳುತ್ತಾರೆ. ಈ ಬಗ್ಗೆ ವಿವರ ಕೇಳಿದರೆ ಸರಿಯಾದ ಮಾಹಿತಿ ನೀಡುವುದಿಲ್ಲ. ಸರಿಯಾಗಿ ಪಾಠ ಮಾಡದೆ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಾರೆ' ಎಂದು ಪೋಷಕರು ಆರೋಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬೆಟ್ಟನಾಯಕ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಎಚ್.ಬಿ.ವೆಂಕಟೇಶಯ್ಯ, ಕಿಕ್ಕೇರಿ ಪೋಲಿಸ್ ಠಾಣೆಯ ಸಬ್‍ಇನ್ಸ್ ಪೆಕ್ಟರ್ ಆರ್.ಸಿದ್ದರಾಜು, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್ ಸಂಗೀತಾಳ ತಾಯಿ ಪಂಕಜ ಅವರಿಗೆ ಸಾಂತ್ವನ ಹೇಳಿದರಲ್ಲದೆ, ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.