ಸಕಲೇಶಪುರದಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಹೈಕೋರ್ಟ್‌ನಿಂದ ಮಧ್ಯಂತರ ತಡೆ
ಬೆಂಗಳೂರು, ಜು.19: ಸಕಲೇಶಪುರ ನಗರದ ಮಧ್ಯದಲ್ಲಿ ಹಾದು ಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ್ಕಕೆ ಉಪ ವಿಭಾಗಾಧಿಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಎಸಿ ಹಾಗು ಪಿಡಬ್ಲುಡಿ ಕಚೇರಿಗೆ ಭಾರಿ ಮುಖಭಂಗವಾಗಿದೆ.
ಸಕಲೇಶಪುರ ನಗರದಲ್ಲಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಶ್ನಿಸಿ ಪ್ರವೀಣ್ ಕುಮಾರ್ ಹಾಗೂ ಇತರರು ಸಲ್ಲಿಸಿದ್ದ ರಿಟ್ ವಿಚಾರಣೆ ನ್ಯಾ. ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ನಗರದ ಹೊರಭಾಗದಲ್ಲಿ ಬೈಪಾಸ್‌ರಸ್ತೆ ನಿರ್ಮಾಣಕ್ಕೆ ಈಗಾಗಲೇ ನಕಾಶೆ ಸಿದ್ಧಪಡಿಸಲಾಗಿದೆ. ಬೈಪಾಸ್ ರಸ್ತೆ ಯೋಜನೆ ಪ್ರಗತಿಯಲ್ಲಿರುವಾಗ ನಗರದೊಳಗಿನ ಬಿಎಂ ರಸ್ತೆ ಅಗಲೀಕರಣ ಸರಿಯಲ್ಲ. ಹಾಗಾಗಿ ಎಸಿ ಆದೇಶಕ್ಕೆ ತಡೆ ನೀಡಬೇಕೆಂದು ಎಂದು ಮನವಿ ಮಾಡಿದರು.
ಅರ್ಜಿದಾರರ ಮನವಿ ಪುರಸ್ಕರಿಸಿದ ನ್ಯಾಯಪೀಠವು ನಗರದ ರಸ್ತೆ ಅಗಲೀಕರಣಕ್ಕೆ ಉಪ ವಿಭಾಗಾಧಿಕಾರಿಗಳು ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿತು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎಸಿ ಕಚೇರಿ ಹಾಗೂ ಲೋಕೋಪಯೋಗಿ ಇಲಾಖೆಗೆ ನ್ಯಾಯಪೀಠವು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣವೇನು: ಬೆಂಗಳೂರು-ಮಂಗಳೂರು ಹೈವೇ ಅಗಲೀಕರಣ ವಿಚಾರ ಸಂಬಂಧ ಸಕಲೇಶಪುರ ನಗರದ ಬಿಎಂ ರಸ್ತೆಯ ಪಕ್ಕದ 40 ಅಡಿ ಕಟ್ಟಡಗಳ ತೆರವಿಗೆ ಎಸಿ ಆದೇಶಿಸಿದ್ದರು. ಬುಧವಾರವಷ್ಟೇ ಆಟೋದಲ್ಲಿ ರಸ್ತೆ ತೆರವು ಕುರಿತು ಪ್ರಚಾರ ಕೂಡ ಮಾಡಿಸಿದ್ದರು.