ಮೈಸೂರು: ಎಸ್ಸಿ,ಎಸ್ಟಿ ಭಡ್ತಿ ಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

Update: 2018-07-19 16:39 GMT

ಮೈಸೂರು,ಜು.19: ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಕಾಯಿದೆ 2017 ಅನ್ನು ಕೂಡಲೇ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಡ್ತಿ ಮೀಸಲಾತಿ (ಎಸ್ಸಿ, ಎಸ್ಟಿ) ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಗರದ ಪುರಭವನದ ಆವರಣದಲ್ಲಿ ಗುರುವಾರ ಜಮಾಯಿಸಿದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಎಸ್ಸಿ ಎಸ್ಟಿ ನೌಕರರು ಅಧಿಕಾರಿಗಳು, ಇಂಜಿನಿಯರ್ ಗಳು ಮತ್ತು ದಲಿತ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅರಮನೆ ವೃತ್ತ, ಕೆ.ಆರ್.ಸರ್ಕಲ್, ದೇವರಾಜ ಅರಸು ರಸ್ತೆ, ಮೆಟ್ರೋಪೋಲ್ ವೃತ್ತ, ಹುಣಸೂರು ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ಮೂಲಕ ಬಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಿ.ಕೆ.ಪವಿತ್ರ ಪ್ರಕರಣದ ತೀರ್ಪಿನ ಹಿನ್ನಲೆಯಲ್ಲಿ ಹಿಂಬಡ್ತಿ ಹೊಂದಿರುವ ಎಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಧಿಕಾರಿ, ನೌಕರರ ಹಿಂಬಡ್ತಿ ಆದೇಶಗಳನ್ನು ಹಿಂಬಡ್ತಿ ಹೊಂದಿದ ದಿನಾಂಕದಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ರದ್ದುಪಡಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡುಸುವುದು, ಬಡ್ತಿ ಮೀಸಲಾತಿ ಹಾಗೂ ಜೇಷ್ಠತೆಯನ್ನು ಸಂರಕ್ಷಿಸುವ 2017ರ  ಕಾಯ್ದೆ ಪ್ರಕಾರ ಎಲ್ಲಾ ಇಲಾಖೆಗಳು 1978 ಮೀಸಲಾತಿ ಆದೇಶದನ್ವಯ ಭಡ್ತಿ ನೀಡಿರುವುದನ್ನು ದೃಢಪಡಿಸಿಕೊಳ್ಳಲು ಜೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಿ ಪುನರ್ ಪ್ರಕಟಿಸಲು ಸೂಕ್ತ ಕ್ರಮವಹಿಸುವುದು. ಬಿ.ಕೆ.ಪವಿತ್ರ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಹಾಗೂ ಸರ್ಕಾರದ ಆದೇಶ ಉಲ್ಲಂಘಿಸಿ ಜೇಷ್ಠತೆ ಪರಿಷ್ಕರಿಸಿ ಹಿಂಬಡ್ತಿ ನೀಡಲು ಕಾರಣರಾಗಿರುವ ಅಧಿಕಾರಿ ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು. ನ್ಯಾಯಾಲಯದಲ್ಲಿ  ಯಾವುದೇ ನಿಂದನಾ ಅರ್ಜಿ ಬಾಕಿ ಇಲ್ಲದಿದ್ದರೂ ರಾಷ್ಟ್ರಪತಿಗಳ ಅಂಕಿತ ಹಾಕಿರುವ ಕಾಯ್ದೆ ಜಾರಿ ಮಾಡುವುದು ಬೇಡ ಎಂದು ಅಭಿಪ್ರಾಯ ನೀಡುತ್ತಿರುವ ಅಡ್ವಕೇಟ್ ಜನರಲ್ ಉದಯ್‍ಹೊಳ್ಳರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ರಾಷ್ಟ್ರಪತಿಗಳ ಅಂಕಿತಕ್ಕೆ ಗೌರವ ಕೊಡದ ಸಮ್ಮಿಶ್ರ ಸರಕಾರ
ರಾಷ್ಟ್ರಪತಿಗಳು ಅಂಕಿತ ಹಾಕಿರುವ ಕಾಯ್ದೆ ಜಾರಿಗೊಳಿಸುವಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಮೀನಾಮೇಷ ಎಣಿಸುತ್ತಿದೆ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಕಿಡಿಕಾರಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಗುರುವಾರ ಪ್ರತಿಭಟನಾ ನಿರತರ ಕುರಿತು ಮಾತನಾಡಿದ ಅವರು, ಈ ದೇಶದ ಪರಮೋಚ್ಛ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಆದರೆ ರಾಜ್ಯ ಸರಕಾರ ಎಸ್ಸಿ ಎಸ್ಟಿ ಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದೆ. ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ವಿಚಾರಣೆಯಲ್ಲಿದೆ ಎಂದು ಇಲ್ಲ ಸಲ್ಲದ ಸಬೂಬು ಹೇಳಿ ದಲಿತ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ. ಹಾಗಾದರೆ ರಾಷ್ಟ್ರಪತಿಗಳಿಗಿಂತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ದೊಡ್ಡವರೇ ಎಂದು ಪ್ರಶ್ನಿಸಿದರು.

ಜಂಟಿ ಸದನ ಸಮಿತಿಯಲ್ಲಿ ಅನುಮೋದನೆ ನೀಡಿದ್ದರೂ ಮೀಸಲಾತಿ ಜಾರಿಗೊಳಿಸಲು ಇಷ್ಟೊಂದು ಅಡ್ಡಿ ಯಾವ ಕಾರಣಕ್ಕೆ ಎಂಬುದು ಗೊತ್ತಾಗುತ್ತಿಲ್ಲ. ರಾಜ್ಯದ ಸಮ್ಮಿಶ್ರ ಸರಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸವರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಲಿತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಇಂದು ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ದಲಿತರ ಮೇಲೆ ನಿಜವಾದ ಕಾಳಜಿ ಇವರಿಗೆ ಇದ್ದಿದ್ದರೆ ರಾಷ್ಟ್ರಪತಿಗಳು ಅಂಕಿತ ಹಾಕಿದ ಮರುಕ್ಷಣವೇ ಮೀಸಲಾತಿ ಜಾರಿಗೊಳಿಸಬೇಕಿತ್ತು. ಆದರೆ ಇವರೇ ಇನ್ನು ಯೋಚನೆ ಮಾಡುತ್ತಿರುವುದು ಅನುಮಾನ ಮೂಡಿಸುತ್ತಿದೆ. ಇದೇ ರೀತಿ ನಿಮ್ಮ ನಡವಳಿಕೆ ಮುಂದುವರೆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಬಣ್ಣ ಬಯಲು ಮಾಡುವುದಾಗಿ ಎಚ್ಚರಿಕೆ ನೀಡಿದರು.

ನಾವೇನು ರಾಜ್ಯ ಸರಕಾರದ ಭಿಕ್ಷೆ ಕೇಳುತ್ತಿಲ್ಲ, ಸಂವಿಧಾನ ಬದ್ಧವಾದ ಹಕ್ಕನ್ನು ಕೇಳುತ್ತಿದ್ದೇವೆ. ದಲಿತರ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ಹಿಂದಿನಿಂದಲೂ ನಡೆಯುತ್ತಿದೆ. ದಲಿತರು ರಾಜ್ಯಾದ್ಯಂತ ಒಗ್ಗೂಡಿ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಸವನಾಗೀದೇವ ಶರಣ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಅಹಿಂದ ಮುಖಂಡರಾದ ಸೋಮಯ್ಯ ಮಲೆಯೂರು, ಚಿಕ್ಕ ಜವರಯ್ಯ, ಎಸ್‍ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಸಂಚಾಲಕ ಕೆ.ಎಂ.ಮಹದೇವಸ್ವಾಮಿ, ದಲಿತ ಸಂಘರ್ಷ ಸಮಿತಿಯ ಚೋರನಹಳ್ಳಿ ಶಿವಣ್ಣ, ಶಂಭುಲಿಂಗಸ್ವಾಮಿ, ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಹರೀಶ್‍ಬಾಬು, ಮೈಸೂರು ಲ್ಯಾಕ್ ಮತ್ತು ವಾರ್ನಿಷ್ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕ ಸಿ.ಹರಕುಮಾರ್, ಹಿಂಬಡ್ತಿ ಹೊಂದಿರುವ ಇಂಜಿನಿಯರ್‍ಗಳಾದ ಮರಿಸ್ವಾಮಿ, ರವಿಕುಮಾರ್, ಮಹೇಶ್,ನಾಗರಾಜ ಮೂರ್ತಿ, ಆರ್.ಕೆ.ರಾಜು, ನೌಕರರಾದ ಚೇತನ್, ಬಾಲರಾಜ್, ಗೋಪಾಲಕೃಷ್ಣ  ಕೃಷ್ಣಮೂರ್ತಿ ಚಮರಂ, ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News