ಕಾರು ಚಾಲನೆಯ ವೇಳೆ ಸೀಟ್ ಬೆಲ್ಟ್ ಧರಿಸದ ಪ್ರಕರಣ: ಶಿವಮೊಗ್ಗದಲ್ಲಿ 500 ಕ್ಕೂ ಅಧಿಕ ಕೇಸ್ ದಾಖಲು

Update: 2018-07-19 17:13 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜು. 19: ಕಾರು ಹಾಗೂ ಇತರೆ ನಾಲ್ಕು ಚಕ್ರಗಳ ವಾಹನ ಚಾಲನೆ ವೇಳೆ, ಚಾಲಕ ಹಾಗೂ ಮುಂಬದಿ ಪಕ್ಕದಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸುವುದು ಮೋಟಾರು ಕಾಯ್ದೆ ನಿಯಮದ ಅನುಸಾರ ಕಡ್ಡಾಯವಾಗಿದೆ. ಆದರೆ ಶಿವಮೊಗ್ಗ ನಗರದಲ್ಲಿ ಅದೆಷ್ಟೊ ಕಾರು ಚಾಲಕರು ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸುತ್ತಿದ್ದರು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾತ್ರ ಸೀಟ್ ಬೆಲ್ಟ್ ಕಡ್ಡಾಯ ನಿಯಮ ಅನ್ವಯವಾಗಲಿದೆ ಎಂದು ಚಾಲಕರು ಭಾವಿಸಿದ್ದರು. ಆದರೆ ಶಿವಮೊಗ್ಗ ಸಂಚಾರಿ ಠಾಣೆಗಳ ಪೊಲೀಸರು ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸುತ್ತಿದ್ದ ಚಾಲಕರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲಾರಂಭಿಸಿದ್ದಾರೆ.

ಬುಧವಾರ ಹಾಗೂ ಗುರುವಾರ ನಗರದ ವಿವಿಧೆಡೆ ತಪಾಸಣೆ ನಡೆಸಿ, ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸುತ್ತಿದ್ದ ಚಾಲಕರ ವಿರುದ್ದ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸುವ ಕೆಲಸ ನಡೆಸಿದ್ದಾರೆ. ಪಶ್ಚಿಮ ಸಂಚಾರಿ ಠಾಣೆ ಸಬ್ ಇನ್ಸ್‍ಪೆಕ್ಟರ್ ಡಿ.ಕೆ.ಸಂತೋಷ್‍ಕುಮಾರ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ, ನಿಯಮ ಉಲ್ಲಂಘಿಸುವವರ ಪತ್ತೆ ಕಾರ್ಯ ನಡೆಯುತ್ತಿದೆ. 

ಲಭ್ಯ ಮಾಹಿತಿ ಅನುಸಾರ, ಪೂರ್ವ ಹಾಗೂ ಪಶ್ಚಿಮ ಸಂಚಾರಿ ಠಾಣೆಗಳ ಪೊಲೀಸರು ಎರಡು ದಿನಗಳಲ್ಲಿ 500 ಕ್ಕೂ ಅಧಿಕ ಸೀಟ್ ಬೆಲ್ಟ್ ಕೇಸ್ ದಾಖಲಿಸಿದ್ದಾರೆ. ಕೇವಲ ಎರಡು ದಿನಗಳಲ್ಲಿ ಇಷ್ಟೊಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೀಟ್ ಬೆಲ್ಟ್ ಕೇಸ್ ದಾಖಲಿಸಿದ್ದು, ಶಿವಮೊಗ್ಗ ನಗರದ ಟ್ರಾಫಿಕ್ ಪೊಲೀಸ್ ಠಾಣೆ ಇತಿಹಾಸದಲ್ಲಿಯೇ ದಾಖಲೆಯಾಗಿದೆ ಎಂದು ಹೇಳಲಾಗುತ್ತಿದೆ. 

ಇನ್ನು ಮುಂದೆ ನಿರಂತರವಾಗಿ ಸೀಟ್ ಬೆಲ್ಟ್ ಕೇಸ್ ದಾಖಲಿಸಲು ಸಂಚಾರಿ ಠಾಣೆಗಳ ಪೊಲೀಸರು ನಿರ್ಧರಿಸಿದ್ದಾರೆ. ಈ ಮೂಲಕ ಸಂಚಾರಿ ನಿಯಮಗಳ ಕಡ್ಡಾಯ ಪಾಲನೆ ಮಾಡುವ ಬಗ್ಗೆ, ಚಾಲಕರಲ್ಲಿ ಜನಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. 'ಕಾರು ಚಾಲನೆ ಮಾಡುವ ವೇಳೆ ಚಾಲಕ ಹಾಗೂ ಮುಂಬದಿ ಆತನ ಪಕ್ಕದ ಸೀಟ್‍ನಲ್ಲಿ ಕುಳಿತುಕೊಂಡವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಒಂದು ವೇಳೆ ಸೀಟ್ ಬೆಲ್ಟ್ ಧರಿಸದಿರುವುದು ಪತ್ತೆಯಾದರೆ ನಿಯಮಾನುಸಾರ 100 ರೂ. ದಂಡ ವಿಧಿಸಲಾಗುವುದು' ಎಂದು ಸಂಚಾರಿ ಠಾಣೆಯ ಪೊಲೀಸರೊಬ್ಬರು ಮಾಹಿತಿ ನೀಡಿದ್ದಾರೆ. 

ಎಚ್ಚೆತ್ತ ಚಾಲಕರು: ಪೊಲೀಸರು ಸೀಟ್ ಬೆಲ್ಟ್ ಹಾಕುತ್ತಿರುವ ವಿಷಯ ಅರಿಯುತ್ತಿದ್ದಂತೆ, ಇದೀಗ ನಗರದಲ್ಲಿ ಕಾರು ಸೇರಿದಂತೆ ನಾಲ್ಕು ಚಕ್ರಗಳ ಚಾಲಕರು ಚಾಲನೆಯ ವೇಳೆ ಸೀಟ್ ಬೆಲ್ಟ್ ಧರಿಸುತ್ತಿರುವುದು ಕಂಡುಬರುತ್ತಿದೆ. ಇಷ್ಟು ದಿನ ಕಾರ್‍ಗಳಿಗೆ ಸೀಟ್ ಬೆಲ್ಟ್ ಅಳವಡಿಸಿಕೊಳ್ಳದೆ ನಿರ್ಲಕ್ಷ್ಯವಹಿಸಿದ್ದವರು ಇದೀಗ, ಕೇಸ್ ದಾಖಲಾಗುವ ಭಯದಿಂದ ಸೀಟ್ ಬೆಲ್ಟ್ ಹಾಕಿಸಿಕೊಳ್ಳಲು ಗ್ಯಾರೇಜ್‍ಗಳಿಗೆ ದೌಡಾಯಿಸುತ್ತಿದ್ದಾರೆ. 

ಸೀಟ್ ಬೆಲ್ಟ್ ಧರಿಸದೆ ಜೀವ ತೆತ್ತಿದ್ದ ಕಾರು ಚಾಲಕ!
ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದ ಬಳಿ ಕಳೆದ ಕೆಲ ತಿಂಗಳ ಹಿಂದೆ ಬಸ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದ. ಕಾರು ಚಾಲಕ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಒಂದು ವೇಳೆ ಸೀಟ್ ಬೆಲ್ಟ್ ಧರಿಸಿದ್ದರೆ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತಿತ್ತು ಎನ್ನಲಾಗಿದೆ. ಆದ್ದರಿಂದ ಕಾರು ಹಾಗೂ ಇತರೆ ನಾಲ್ಕು ಚಕ್ರಗಳ ಚಾಲನೆಯ ವೇಳೆ ಕಡ್ಡಾಯವಾಗಿ ಚಾಲಕ ಹಾಗೂ ಆತನ ಪಕ್ಕದ ಸೀಟ್‍ನಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸಬೇಕು ಎಂದು ಪೊಲೀಸರು ಸಲಹೆ ನೀಡುತ್ತಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News