ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂದುವರೆದ ಮುಂಗಾರು: ಚುರುಕುಗೊಂಡ ಕೃಷಿ ಚಟುವಟಿಕೆ

Update: 2018-07-19 17:16 GMT

ಶಿವಮೊಗ್ಗ, ಜು. 19: ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ಕಡಿಮೆಯಾಗಿದೆ. ಸಾಧಾರಣ ಮಳೆಯಾಗುತ್ತಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಆದರೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಳೆ ಮುಂದುವರೆದಿದೆ. ಉಳಿದಂತೆ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಭತ್ತ ಬಿತ್ತನೆ, ನಾಟಿ ಕಾರ್ಯ ಚುರುಕುಗೊಂಡಿದೆ. 

ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ, ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಹುಲಿಕಲ್‍ನಲ್ಲಿ ಅತ್ಯದಿಕ 107 ಮಿಲಿ ಮೀಟರ್ (ಮಿ.ಮೀ.) ಮಳೆಯಾಗಿದೆ. ಮಾಣಿಯಲ್ಲಿ 80 ಮಿ.ಮೀ., ಯಡೂರಿನಲ್ಲಿ 92 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 102 ಮಿ.ಮೀ ವರ್ಷಧಾರೆಯಾಗಿದೆ. 
ಉಳಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ನಗರದಲ್ಲಿ ಗುರುವಾರ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದು, ಆಗಾಗ್ಗೆ ಬಿಸಿಲು ಬೀಳುತ್ತಿದೆ. ಜೊತೆಗೆ ಮಳೆಯಾಗುತ್ತಿದೆ. 

ಡ್ಯಾಂ ವಿವರ: ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1798.10 (ಗರಿಷ್ಠ ಮಟ್ಟ : 1819) ಅಡಿಯಿದೆ. 32,171 ಕ್ಯೂಸೆಕ್ ಒಳಹರಿವಿದ್ದು, 2170 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1768.10 ಅಡಿ ನೀರು ಸಂಗ್ರಹವಾಗಿತ್ತು. ಭದ್ರಾ ಡ್ಯಾಂನ ನೀರಿನ ಮಟ್ಟ 176.11 (ಗರಿಷ್ಠ ಮಟ್ಟ : 186) ಅಡಿಯಿದೆ. 26,944 ಕ್ಯೂಸೆಕ್ ಒಳಹರಿವಿದ್ದು, 2731 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 129.10 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ತುಂಗಾ ಜಲಾಶಯವು ಜೂನ್ ತಿಂಗಳಲ್ಲಿಯೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದ್ದು, ಪ್ರಸ್ತುತ 36,627 ಕ್ಯೂಸೆಕ್ ಒಳಹರಿವಿದ್ದು, 35,303 ಕ್ಯೂಸೆಕ್ ನೀರನ್ನು ಹೊಸಪೇಟೆಯ ಟಿ.ಬಿ. ಡ್ಯಾಂಗೆ ಹೊರ ಬಿಡಲಾಗುತ್ತಿದೆ. 

ಚುರುಕು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೆರೆಕಟ್ಟೆಗಳು ಭರ್ತಿಯಾಗಿರುವುದು ಹಾಗೂ ಪ್ರಮುಖ ಜಲಾಶಯಗಳಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ, ಭತ್ತ ಬಿತ್ತನೆ ಹಾಗೂ ನಾಟಿ ಕಾರ್ಯವನ್ನು ಈಗಾಗಲೇ ರೈತರು ಆರಂಭಿಸಿದ್ದಾರೆ. ಸದ್ಯ ಮಳೆಯ ಪ್ರಮಾಣ ಕೂಡ ತಗ್ಗಿರುವುದರಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. 

ಮಳೆ ಹಾನಿ ಪ್ರದೇಶಕ್ಕೆ ಬಿಎಸ್‍ವೈ ಭೇಟಿ
ಜಿಲ್ಲೆಯ ಸೊರಬ ಹಾಗೂ ಸಾಗರ ತಾಲೂಕಿನ ಮಳೆ ಹಾನಿ ಪೀಡಿತ ಪ್ರದೇಶಗಳೀಗೆ ಜು. 20 ರಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಭೇಟಿನೀಡಿ ಪರಿಶೀಲನೆ ನಡೆಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸೊರಬ ತಾಲೂಕಿನ ಚಂದ್ರಗುತ್ತಿ ಹೋಬಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಸಾಗರದ ಮಂಡಗಳಲೆ ಸುತ್ತಮುತ್ತಲು ಪರಿಶೀಲಿಸಿ, ಸ್ಥಳೀಯರ ಅಹವಾಲು ಆಲಿಸಲಿದ್ದಾರೆ. ತದನಂತರ ಮಧ್ಯಾಹ್ನ ಸಾಗರದ ಪ್ರವಾಸಿ ಮಂದಿರದಲ್ಲಿ ಮಳೆ ಹಾನಿಗೆ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News