ತುಮಕೂರು: ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಧರಣಿ

Update: 2018-07-19 17:22 GMT

ತುಮಕೂರು,ಜು.19: ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ನಡೆಸಿದ ಕೋಮುವಾದಿ ಎಬಿವಿಪಿ ಮತ್ತು ಭಜರಂಗ ದಳದ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತುಮಕೂರು ನಗರದಲ್ಲಿ ಪ್ರತಿಭಟನೆ ನಡೆಯಿತು.

ಟೌನ್‍ಹಾಲ್ ನಲ್ಲಿ ಸಮಾವೇಶಗೊಂಡ ಪ್ರಗತಿಪರ ಸಂಘಟನೆಗಳ ಮುಖಂಡರು ಸ್ವಾಮಿ ಆಗ್ನಿವೇಶ್ ಮೇಲೆ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದರು. ಹಿಂದೂ ಸಂತರಾದ ಸ್ವಾಮಿ ಅಗ್ನಿವೇಶ್ ಮೇಲೆ ಗೂಂಡಾಗಳ ರೀತಿ ದಾಳಿ ನಡೆಸಿರುವುದು ಹೇಯ ಕೃತ್ಯವಾಗಿದೆ ಎಂದು ದೂರಿದರು.

ದೇಶದಲ್ಲಿ ಮತಾಂಥ ಶಕ್ತಿಗಳು ಪ್ರಗತಿಪರ ವಿಧಾರೆಯನ್ನು ಪ್ರತಿಪಾದಿಸುವವರ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿವೆ. ಸತ್ಯ, ಅಹಿಂಸೆ, ಕೋಮುಸೌರ್ಹಾತೆ ಮತ್ತು ಭ್ರಾತೃತ್ವವನ್ನು ಬಯಸುವ ಪ್ರಗತಿಪರ ಸ್ವಾಮೀಜಿಗಳು ಲೇಖಕರ ಮೇಲೆ ದಾಳಿ ನಡೆಸಿ ಸತ್ಯದ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿವೆ. ಇಂತಹ ಬೆದರಿಕೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.

ಕೋಮುವಾದಿ ಮತಾಂಧ ಶಕ್ತಿಗಳಾದ ಬಿಜೆಪಿ,ಆರೆಸ್ಸೆಸ್ ಮತ್ತು ಭಜರಂಗ ದಳದಂತಹ ಸಂಘಟನೆಗಳು ಸಮಾಜದಲ್ಲಿ ಗಲಭೆಗಳನ್ನು ಸೃಷ್ಟಿ ಮಾಡುತ್ತಿವೆ. ಈ ಶಕ್ತಿಗಳು ಧರ್ಮ, ಜಾತಿ ಮತ್ತು ದೇವರ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ಶಾಂತಿ ನೆಮ್ಮದಿಗೆ ಭಂಗ ತರುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರಗತಿಪರ ವಿಚಾರಧಾರೆಗೆ ಹೆಸರಾಗಿ ಸಂವಿಧಾನದತ್ತ ಆಶಯಗಳನ್ನು ಪ್ರತಿಪಾದಿಸುತ್ತಾ ಸಮಾಜದಲ್ಲಿ ಪೊಳ್ಳಿನ ಕಂತೆಗಳನ್ನು ಬಯಲು ಮಾಡುತ್ತಾ ಸತ್ಯವನ್ನು ಹೇಳುತ್ತಿರುವ ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಪ್ರಜಾಪ್ರಭತ್ವಕ್ಕೆ ಕಪ್ಪುಚುಕ್ಕೆಯಂತಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುತ್ತ ಜನರಿಗೆ ಸತ್ಯವೇ ಗೊತ್ತಾಗದಂತೆ ಮುಚ್ಚಿಡುವ ಪ್ರಯತ್ನವನ್ನು ಆರೆಸ್ಸೆಸ್, ಬಿಜೆಪಿ ಮತ್ತು ಭಜರಂಗದಳ ದಂತಹ ಸಂಘಟನೆಗಳು ಮಾಡುತ್ತಿದ್ದು,ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.

ಈ ದೇಶದ ಅತ್ಯುನ್ನತ ನ್ಯಾಯಾಲಯ ಗುಂಪು ದಾಳಿಗಳನ್ನು ಕೂಡಲೇ ನಿಲ್ಲಸಬೇಕೆಂದು ಎಲ್ಲಾ ಸರ್ಕಾರಗಳಿಗೂ ನಿರ್ದೇಶನ ನೀಡಿದ್ದರೂ ಪ್ರಗತಿಪರರ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಜನಪರ ಚಿಂತಕ ಕೆ.ದೊರೈರಾಜ್, ಡಿವೈಎಫ್‍ಐ ಕಾರ್ಯದರ್ಶಿ ಎಸ್.ರಾಘವೇಂದ್ರ ಎಸ್.ಎಫ್‍ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ, ಕಟ್ಟಡ ಕಾರ್ಮಿಕರ ಸಂಘದ ಮುಖಂಡ ರಾಮಚಂದ್ರ, ಮುಖಂಡರಾದ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ,ಇನಾಮುಲ್ಲಾ, ಇಬ್ರಾಹಿಂ, ಸಿರ್ವಾಹುದ್ದಿನ್, ತಾಜುದ್ದೀನ್ ಶರೀಪ್, ಕಾಂತರಾಜು, ಬಿಎಸ್‍ಪಿ ಮುಖಂಡ ರುದ್ರಪ್ಪ, ಲೋಕೇಶ್, ಡಿವೈಎಫ್‍ಐ ಮುಖಂಡ ದರ್ಶನ್, ಸಮುದಾಯ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News