ಬಾಬಾಬುಡಾನ್‌ಗಿರಿ ರಸ್ತೆಯಲ್ಲಿ ಗುಡ್ಡ ಕುಸಿತ: ಗಂಟೆಗೂ ಹೆಚ್ಚುಕಾಲ ರಸ್ತೆ ಸಂಚಾರ ಸ್ತಬ್ಧ

Update: 2018-07-19 17:56 GMT

ಚಿಕ್ಕಮಗಳೂರು, ಜು.19: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿದ್ದ ಮಳೆ ಗುರುವಾರ ಸಂಪೂರ್ಣ ಕ್ಷೀಣಿಸಿದೆ. ಮಲೆನಾಡು ಭಾಗದಲ್ಲಿ ತುಂಬಿ ಹರಿಯುತ್ತಿದ್ದ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಹರಿವು ತಗ್ಗದೆ. ಶೃಂಗೇರಿ, ಕೊಪ್ಪ, ಎನ್.ಆರ್. ಪುರ, ಮೂಡಿಗೆರೆ, ಕಳಸ ಭಾಗದಲ್ಲಿ ಆಗಾಗ್ಗೆ ತುಂತುರು ಮಳೆಯಾಗುತ್ತಿದ್ದು, ಭಾರೀ ಮಳೆಯಾದ ಬಗ್ಗೆ ವರದಿಯಾಗಿಲ್ಲ. ಮಲೆನಾಡು ಭಾಗದಲ್ಲಿ ಧಟ್ಟ ಮೋಡ ಕವಿದ ವಾತಾವರಣ ಗುರುವಾರ ಕಂಡು ಬಂತು.

ಜಿಲ್ಲೆಯ ಚಿಕ್ಕಮಗಳೂರು, ಕಡೂರು, ಬೀರೂರು, ತರೀಕೆರೆ ಭಾಗದಲ್ಲಿಯೂ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಮೋಡ ಕವಿದ ವಾತವರಣವಿದೆ. ಕಳೆದ ಅನೇಕ ದಿನಗಳಿಂದ ಚಿಕ್ಕಮಗಳೂರು ತಾಲೂಕಿನಾದ್ಯಂತ ಸುರಿದ ಮಳೆಗೆ ಬಾಬಾಬುಡಾನ್‌ಗಿರಿ ತೆರಳುವ ಮಾರ್ಗ ಮಧ್ಯೆ ಕವಿಕಲ್‌ಗುಂಡಿ ಸಮೀಪ ಗುರುವಾರ ಗುಡ್ಡ ಕುಸಿದು ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.

ಗುಡ್ಡಕುಸಿದ ಪರಿಣಾಮ ಬಾಬಾಬುಡಾನ್ ಗಿರಿಗೆ ಆಗಮಿಸಿದ್ದ ಹೊರ ಜಿಲ್ಲೆಗಳಿಂದ ಬಂದಿದ್ದ ಪ್ರವಾಸಿಗರ ವಾಹನಗಳು ಮುಂದಕ್ಕೆ ಸಂಚರಿಸಲಾಗದೇ ಸಾಲು ಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂತು. ಮಣ್ಣು ಕುಸಿತದಿಂದಾಗಿ ಭಾರೀ ಗಾತ್ರದ ಕಲ್ಲುಗಳು ರಸ್ತೆ ಮಧ್ಯೆ ಹರಡಿ ಬಿದ್ದಿದ್ದವು. ಸ್ಥಳೀಯರು ಹಾಗೂ ಕಾಫಿ ತೋಟಕ್ಕೆ ವಾಹನಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರು ನಡೆದುಕೊಂಡೇ ಕೆಲಸಕ್ಕೆ ಹೋಗುವಂತಾಗಿತ್ತು. ಘಟನೆ ಸುದ್ದಿ ತಿಳಿದು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ಸಹಕಾರದಿಂದ ಒಂದು ಗಂಟೆಯೊಳಗೆ ರಸ್ತೆ ಬಿದ್ದಿದ್ದ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಈ ಘಟನೆಯ ಹೊರತು ಪಡಿಸಿ ಜಿಲ್ಲೆಯಲ್ಲಿ ಮಳೆಯಿಂದಾಗಿ ನಡೆದ ಅವಾಂತರಗಳ ಬಗ್ಗೆ ವರದಿಯಾಗಿಲ್ಲ.

ಮಳೆ ವಿವರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ 113.4 ಮಿ.ಮೀ. ಮಳೆಯಾಗಿದೆ.

ಗುರುವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ಮಳೆಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ವಿವರ ಇಂತಿದೆ. (ವಿವರ ಮಿ.ಮೀ.ಗಳಲ್ಲಿ): ಚಿಕ್ಕಮಗಳೂರು ತಾಲ್ಲೂಕಿನ ಚಿಕ್ಕಮಗಳೂರು 2.3 ಮಿ.ಮೀ., ವಸ್ತಾರೆ 11.2 ಮಿ.ಮೀ., ಜೋಳದಾಳು 11 ಮಿ.ಮೀ., ಆಲ್ದೂರು 16 ಮಿ.ಮೀ., ಕೆ.ಆರ್.ಪೇಟೆ 5.6 ಮಿ.ಮೀ., ಅತ್ತಿಗುಂಡಿ 24 ಮಿ.ಮೀ., ಸಂಗಮೇಶ್ವರಪೇಟೆ 14 ಮಿ.ಮೀ., ಬ್ಯಾರವಳ್ಳಿ 18.2 ಮಿ.ಮೀ., ಕಳಸಾಪುರ 1 ಮಿ.ಮೀ., ಮಳಲೂರು 3.4 ಮಿ.ಮೀ., ದಾಸರಳ್ಳಿಯಲ್ಲಿ 1.2 ಮಿ.ಮೀ. ಮಳೆಯಾಗಿದೆ.

ಕಡೂರು ತಾಲೂಕಿನ ಸಖರಾಯಪಟ್ಟಣ 6.4 ಮಿ.ಮೀ., ಗಿರಿಯಾಪುರ 4 ಮಿ.ಮೀ., ಬೀರೂರು 1.8 ಮಿ.ಮೀ., ಎಮ್ಮೆದೊಡ್ಡಿಯಲ್ಲಿ 10.2 ಮಿ.ಮೀ., ಕೊಪ್ಪತಾಲೂಕಿನ ಕೊಪ್ಪ 38 ಮಿ.ಮೀ., ಹರಿಹರಪುರ 50 ಮಿ.ಮೀ., ಜಯಪುರ 49.4 ಮಿ.ಮೀ., ಕಮ್ಮರಡಿ 42.2 ಮಿ.ಮೀ., ಬಸರಿಕಟ್ಟೆ 52.2, ಮೂಡಿಗೆರೆ ತಾಲ್ಲೂಕಿನ ಮೂಡಿಗೆರೆ 19.5, ಕೊಟ್ಟಿಗೆಹಾರ 56.4, ಜಾವಳಿ 30 ಮಿ.ಮೀ., ಗೋಣಿಬೀಡು 15 ಮಿ.ಮೀ., ಕಳಸ 31.4 ಮಿ.ಮೀ. ಮಳೆಯಾಗಿದೆ.

ನರಸಿಂಹರಾಜಪುರ ತಾಲೂಕಿನ ನರಸಿಂಹರಾಜಪುರ 7.6 ಮಿ.ಮೀ., ಬಾಳೆಹೊನ್ನೂರು 18.6 ಮಿ.ಮೀ., ಮೇಗರಮಕ್ಕಿ 50 ಮಿ.ಮೀ., ಶೃಂಗೇರಿ ತಾಲೂಕಿನ ಶೃಂಗೇರಿ 60 ಮಿ.ಮೀ., ಕಿಗ್ಗ 79.2 ಮಿ.ಮೀ., ಕೆರೆಕಟ್ಟೆ 113.4 ಮಿ.ಮೀ., ತರೀಕೆರೆ ತಾಲೂಕಿನ ತರೀಕೆರೆ 6 ಮಿ.ಮೀ., ಲಕ್ಕವಳ್ಳಿ 3.2 ಮಿ.ಮೀ., ಅಜ್ಜಂಪುರ 4.2 ಮಿ.ಮೀ., ಶಿವನಿ 2 ಮಿ.ಮೀ., ಬುಕ್ಕಾಂಬುದಿ 2 ಮಿ.ಮೀ., ಲಿಂಗದಹಳ್ಳಿ 2.4 ಮಿ.ಮೀ., ತಣಿಗೆಬೈಲು 6.6 ಮಿ.ಮೀ., ಉಡೇವಾ 2.4 ಮಿ.ಮೀ., ತ್ಯಾಗದಬಾಗಿ 5.6 ಮಿ.ಮೀ., ಹುಣಸಘಟ್ಟ 1 ಮಿ.ಮೀ. ಮತ್ತು ರಂಗೇನಹಳ್ಳಿಯಲ್ಲಿ 5.4 ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News