ಶಿರೂರು ಸ್ವಾಮೀಜಿಯ ನಿಗೂಢ ಸಾವು: ಉನ್ನತ ಸಂಸ್ಥೆಯಿಂದ ತನಿಖೆ ನಡೆಯಲಿ

Update: 2018-07-19 18:54 GMT

ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಮಠಗಳ ಸ್ವಾಮೀಜಿಗಳು ತಪ್ಪು ಕಾರಣಗಳಿಗಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಅತ್ಯಾಚಾರ ಪ್ರಕರಣವೊಂದರಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಸ್ವಾಮೀಜಿಗಳು ಕೋರ್ಟ್ ಮೆಟ್ಟ್ಟಿಲೇರಬೇಕಾಯಿತು. ಸಂತ್ರಸ್ತೆಯ ನಡುವೆ ಸ್ವಾಮೀಜಿಗೆ ‘ಶೀಲಗೆಟ್ಟ ಸಂಬಂಧ’ ಇದೆ ಎಂದು ನ್ಯಾಯಾಲಯವೇ ಹೇಳಿಕೆ ನೀಡುವಂತಾಯಿತು. ಆದರೂ ಸ್ವಾಮೀಜಿ ಇಂದಿಗೂ ತಮ್ಮ ಪೀಠಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ. ಉತ್ತರ ಭಾರತದಲ್ಲಂತೂ ಸ್ವಘೋಷಿತ ದೇವಮಾನವರು, ಬಾಬಾಗಳು ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಒಬ್ಬೊಬ್ಬರಾಗಿ ಜೈಲು ಸೇರುತ್ತಿದ್ದಾರೆ. ಅಧ್ಯಾತ್ಮದ ಕೇಂದ್ರವಾಗಬೇಕಾಗಿದ್ದ ಮಠಗಳು ರಾಜಕೀಯ ಮತ್ತು ಇನ್ನಿತರ ಅಕ್ರಮಗಳ ಗೂಡಾಗಿ ಪರಿವರ್ತನೆಯಾಗುತ್ತಿರುವುದು ಜನಸಾಮಾನ್ಯರಲ್ಲಿ ಸ್ವಾಮೀಜಿಗಳ ಕುರಿತಂತೆ ಅಪನಂಬಿಕೆಗಳನ್ನು ಹೆಚ್ಚಿಸುತ್ತಿದೆ.

ದಕ್ಷಿಣ ಭಾರತದ ಸಾಂಸ್ಕೃತಿಕ ಕೇಂದ್ರ ಎಂದೇ ಬಿಂಬಿಸಲ್ಪಟ್ಟಿರುವ ಉಡುಪಿ, ತಾನು ಕೂಡ ಇದಕ್ಕೆ ಹೊರತಾಗಿಲ್ಲ ಎನ್ನುವುದನ್ನು ಹೇಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಉಡುಪಿ ಸುದ್ದಿಯಲ್ಲಿದೆ. ಇಲ್ಲಿರುವ ಅಷ್ಟ ಮಠಗಳ ಸ್ವಾಮೀಜಿಗಳ ನಡುವಿನ ಭಿನ್ನಮತ ಇವುಗಳಲ್ಲಿ ಪ್ರಮುಖವಾದುದು. ಈ ಭಿನ್ನಮತ ಇದೀಗ ಒಬ್ಬ ಸ್ವಾಮೀಜಿಯ ಕೊಲೆಯಲ್ಲಿ ಪರ್ಯವಸಾನಗೊಂಡಿತೇ ಎಂದು ಜನ ಸಾಮಾನ್ಯರು ಶಂಕೆ ಪಡುವಂತಾಗಿದೆ. ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರ ದೇಹದಲ್ಲಿ ವಿಷದ ಅಂಶವಿರುವುದು, ವಿಷಾಹಾರವನ್ನು ಅವರು ಸೇವಿಸಿರುವುದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಅವರ ಸಾವು ಆಕಸ್ಮಿಕವಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಸ್ವಾಮೀಜಿಯ ಸಾವನ್ನು ಕೊಲೆ ಎಂದು ಶಂಕಿಸಲು ಸಾಕಷ್ಟು ಕಾರಣಗಳೂ ಇವೆ. ಈ ಹಿಂದೆ ಹಲವು ಬಾರಿ ಉಡುಪಿ ಅಷ್ಟಮಠಗಳ ಸ್ವಾಮೀಜಿಗಳ ನಡುವೆ ತಿಕ್ಕಾಟಗಳು ಕಾಣಿಸಿಕೊಂಡಿದ್ದವು. ಸ್ವಾಮೀಜಿಗಳು ಕಡಲು ದಾಟಿದ ವಿವಾದ, ಇನ್ನೋರ್ವ ಸ್ವಾಮೀಜಿಗಳು ಬಡ್ಡಿಗೆ ದುಡ್ಡು ಕೊಟ್ಟು, ಸಾಲಗಾರನಿಗೆ ಜೀವ ಬೆದರಿಕೆ ಹಾಕಿದ್ದು, ಪುತ್ತಿಗೆ ಸ್ವಾಮೀಜಿಗಳ ಪರ್ಯಾಯ ಸಂದರ್ಭದಲ್ಲಿ ಪೇಜಾವರಶ್ರೀಗಳು ಉಪವಾಸ ಕೂತಿದ್ದು.....ಹೀಗೆ ಒಂದು ನಿರ್ದಿಷ್ಟ ಬ್ರಾಹ್ಮಣ ಪಂಥದ ಮಠವಾಗಿದ್ದರೂ, ತನ್ನನ್ನು ತಾನು ಸಕಲ ಹಿಂದೂಗಳ ಮಠವೆಂದು ಬಿಂಬಿಸುತ್ತಾ, ಒಳಗೊಳಗೆ ಅದಕ್ಕನುಗುಣವಾಗಿ ನಡೆಯಲಾಗದೆ ಬಿಕ್ಕಟ್ಟುಗಳನ್ನು ಎದುರಿಸುತ್ತಾ ಮಾಧ್ಯಮಗಳಿಗೆ ಆಹಾರವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಉಡುಪಿಯಲ್ಲಿ ವಿವಾದದ ಕಿಡಿ ಹತ್ತುವುದಕ್ಕೆ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಮುಖ್ಯ ಕಾರಣವಾಗಿದ್ದರು. ಶಿರೂರು ಸ್ವಾಮೀಜಿಗಳು ಅಷ್ಟಮಠಗಳಿಗೆ ಸದಾ ನುಂಗಲಾರದ ತುತ್ತಾಗಿದ್ದರು. ಇವರು ಎಲ್ಲ ಸ್ವಾಮೀಜಿಗಳಂತಿರದೇ, ತುಸು ಭಿನ್ನವಾಗಿ, ಕ್ರಾಂತಿಕಾರಕವಾಗಿ ಮಾತನಾಡುತ್ತಿದ್ದುದು, ಬದುಕುತ್ತಿದ್ದುದು ಉಳಿದ ಸ್ವಾಮೀಜಿಗಳಿಗೆ ತಲೆನೋವು ತಂದಿತ್ತು. ಸಂಗೀತ, ಕ್ರೀಡೆ ಮೊದಲಾದ ಕ್ಷೇತ್ರಗಳ ಕುರಿತಂತೆಯೂ ಅವರಿಗೆ ಆಸಕ್ತಿಯಿತ್ತು. ಸಾಮಾಜಿಕ ಸೇವೆಯನ್ನು ತಮ್ಮ ಮಿತಿಯಲ್ಲಿ ಅವರು ಮಾಡುತ್ತಿದ್ದರು. ಜನಸಾಮಾನ್ಯರೊಂದಿಗೆ ಬೆರೆಯುವಲ್ಲಿ ಯಾವುದೇ ಮಡಿ ಮೈಲಿಗೆಯನ್ನು ಮಾಡುತ್ತಿರಲಿಲ್ಲ. ಜನರ ಜೊತೆಗೆ ಆತ್ಮೀಯ ಸಂಬಂಧವನ್ನು ಇಟ್ಟುಕೊಳ್ಳಲು ಅವರು ಬಯಸುತ್ತಿದ್ದರು.

ಹಾಗೆಯೇ ಉಡುಪಿ ಮಠದೊಳಗಿನ ರಾಜಕೀಯಗಳನ್ನು, ಅಕ್ರಮಗಳನ್ನು ಅವರು ಬಹಿರಂಗವಾಗಿ ಎತ್ತಿ ಆಡುತ್ತಿದ್ದರು. ಇತ್ತೀಚೆಗೆ ರಾಜಕೀಯ ಪ್ರವೇಶಿಸುವ ಕುರಿತಂತೆ ಒಲವು ವ್ಯಕ್ತಪಡಿಸಿದ್ದರು. ಉಡುಪಿಯ ಸ್ವಾಮೀಜಿಗಳು ರಾಜಕೀಯದ ಜೊತೆಗೆ ಗುರುತಿಸಿಕೊಳ್ಳುವುದು ಹೊಸತೇನೂ ಅಲ್ಲ. ಪೇಜಾವರ ಶ್ರೀಗಳು ಬಹಿರಂಗವಾಗಿ ರಾಜಕೀಯದೊಳಗೆ ಕಾಣಿಸಿಕೊಂಡವರಲ್ಲ. ಆದರೆ ರಾಜಕೀಯವಾಗಿ ಅಪಾರ ಪ್ರಭಾವವನ್ನು ಅವರು ಹೊಂದಿದ್ದಾರೆ. ರಾಮಜನ್ಮಭೂಮಿ ರಾಜಕಾರಣದಲ್ಲಿ ಅವರು ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಹೋಲಿಸಿದರೆ ಶಿರೂರು ಶ್ರೀಗಳ ರಾಜಕೀಯ ಒಲವು ಅತ್ಯಂತ ಭೋಳೆತನದಿಂದ ಕೂಡಿದ್ದು. ಪೇಜಾವರ ಶ್ರೀಗಳ ತಂತ್ರಗಾರಿಕೆ ಅವರಿಗೆ ಗೊತ್ತಿಲ್ಲ. ‘‘ಮಠಗಳಲ್ಲಿ ಎಲ್ಲ ಸ್ವಾಮೀಜಿಗಳಿಗೂ ಮಕ್ಕಳಿವೆ’’ ಎಂದು ಇವರು ಹೇಳುತ್ತಿರುವ ವೀಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿತ್ತು. ಪ್ರೇಜಾವರಶ್ರೀ ಸೇರಿದಂತೆ ಉಡುಪಿಯ ಎಲ್ಲ ಸ್ವಾಮೀಜಿಗಳೂ ಇದರಿಂದ ತೀವ್ರ ಮುಜುಗರ ಅನುಭವಿಸಿದ್ದರು. ಪಟ್ಟದ ದೇವರ ಪ್ರಕರಣ ಇತರ ಆರು ಸ್ವಾಮೀಜಿಗಳ ವಿರುದ್ಧ ಶಿರೂರು ಸ್ವಾಮೀಜಿಗಳು ತೀವ್ರ ಕೆಂಡ ಕಾರುವಂತೆ ಮಾಡಿತ್ತು. ಈ ಬಗ್ಗೆ ಶಿರೂರು ಶ್ರೀಗಳು ಪತ್ರಿಕಾಗೋಷ್ಠಿ ಮಾಡಿ ‘‘ಪಟ್ಟದ ದೇವರನ್ನು ನೀಡದೇ ಇದ್ದರೆ ನಾನು ಆರು ಯತಿಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತೇನೆ’’ ಎಂದು ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲ, ಉಡುಪಿ ಮಠಗಳಲ್ಲಿ ನಡೆಯುವ ಅಕ್ರಮಗಳನ್ನು ಬಯಲಿಗೆಳೆಯುವ ಬೆದರಿಕೆಯನ್ನೂ ಹಾಕಿದ್ದರು. ಇವೆಲ್ಲದರ ಜೊತೆಗೆ, ತನಗೆ ಜೀವ ಬೆದರಿಕೆಯಿದೆ ಎನ್ನುವುದನ್ನೂ ತೋಡಿಕೊಂಡಿದ್ದರು. ‘ಪೇಜಾವರಶ್ರೀಗಳಿಗೆ ಗನ್ ಮ್ಯಾನ್‌ಗಳಿದ್ದಾರೆ. ಆದರೆ ಜೀವ ಬೆದರಿಕೆಯಿರುವುದು ನನಗೆ. ಆದುದರಿಂದ ನನಗೂ ಗನ್ ಮ್ಯಾನ್ ಬೇಕು’’ ಎಂದು ಆಗ್ರಹಿಸಿದ್ದರು. ತನಗೆ ಜೀವ ಬೆದರಿಕೆಯಿದೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಶಿರೂರು ಸ್ವಾಮೀಜಿಗಳು ವಿಷಪ್ರಾಶನದಿಂದ ಸಾವನ್ನಪ್ಪಿದ್ದಾರೆ.

ಒಂದಂತೂ ನಿಜ. ಪಟ್ಟದ ದೇವರು ಸಿಗದೇ ಇದ್ದರೆ ಅದನ್ನು ಅವರು ಯಾವ ರೀತಿಯಲ್ಲಾದರೂ ಮರಳಿ ಪಡೆಯಲು ಸಿದ್ಧರಾಗಿ ನಿಂತಿದ್ದರು. ಒಂದು ಹಂತದಲ್ಲಿ, ಮಠದಲ್ಲಿ ನಡೆಯುವ ಅಕ್ರಮಗಳು, ಮಠಗಳು ಎಲ್ಲೆಲ್ಲ ಆಸ್ತಿಗಳನ್ನ್ನು ಮಾಡಿಟ್ಟಿವೆೆ, ಅಕ್ರಮ ಹಣವನ್ನು ಬಚ್ಚಿಟ್ಟಿವೆ ಇವೆಲ್ಲವನ್ನೂ ಬಹಿರಂಗ ಪಡಿಸುವ ಬೆದರಿಕೆಯನ್ನೂ ಹಾಕಿದ್ದರು. ಅವರು ಯಾವತ್ತ್ತು ಬೇಕಾದರೂ ಸಿಡಿಯಬಲ್ಲ ಆಟಂಬಾಂಬ್ ಆಗಿದ್ದರು. ಅವರಿಂದಾಗಿ ಸ್ವಾಮೀಜಿಗಳಿಗಷ್ಟೇ ಅಲ್ಲ, ಅವರ ಬೆನ್ನಿಗಿರುವ ರಾಜಕೀಯ ನಾಯಕರಿಗೆ, ಉದ್ಯಮಿಗಳಿಗೂ ಅಪಾಯವಿತ್ತು. ಈ ಕಾರಣದಿಂದ, ಶಿರೂರು ಸ್ವಾಮೀಜಿಯ ನಿಗೂಢ ಸಾವು ತನಿಖೆಗೊಳಗಾಗಬೇಕಾಗಿದೆ. ಸ್ವಾಮೀಜಿಗಳ ದೇಹದಲ್ಲಿ ವಿಷದ ಅಂಶವಿದೆ, ವಿಷಪ್ರಾಶನದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಈಗಾಗಲೇ ವರದಿಯನ್ನು ನೀಡಿದ್ದಾರೆ. ಸ್ವಾಮೀಜಿಗಳು ಮಾಂಸಾಹಾರಿಗಳಲ್ಲ. ಅಪ್ಪಟ ಸಸ್ಯಾಹಾರಿಗಳು. ಜೊತೆಗೆ ಆಹಾರದ ಕುರಿತಂತೆ ಅವರು ಕಡ್ಡಾಯವಾಗಿ ಶುಚಿಯನ್ನು ಕಾಪಾಡಿಕೊಂಡು ಬರುತ್ತಾರೆ. ಯಾವುದೋ ರಸ್ತೆ ಬದಿಯ ಅಂಗಡಿಯಲ್ಲಿ ಅಥವಾ ಇನ್ನಾವುದೇ ಕಳಪೆ ಹೊಟೇಲ್‌ಗಳಲ್ಲಿ ಅವರು ಆಹಾರ ಸೇವಿಸುವ ಕ್ರಮವಿಲ್ಲ. ಹೀಗಿರುವಾಗ ಆಹಾರದಲ್ಲಿ ವಿಷಪ್ರಾಶನವಾಗಲು ಹೇಗೆ ಸಾಧ್ಯ? ಇದೇ ಸಂದರ್ಭದಲ್ಲಿ ಸ್ವಾಮೀಜಿಯ ಅನುಮಾನಾಸ್ಪದ ಸಾವಿನ ಕುರಿತಂತೆ ಠಾಣೆಯಲ್ಲಿ ದೂರೂ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಉನ್ನತ ಸಂಸ್ಥೆಯಿಂದ ತನಿಖೆ ನಡೆಯುವುದು ಅತ್ಯಗತ್ಯವಾಗಿದೆ. ಶಿರೂರು ಸ್ವಾಮೀಜಿಯ ಶತ್ರು ಪಾಳಯದಲ್ಲಿ ಪೇಜಾವರ ಶ್ರೀಗಳ ಹೆಸರೂ ಇದೆ. ಆದುದರಿಂದ, ಅವರ ಸಾವು ಕೊಲೆಯೋ, ಅಲ್ಲವೋ ಎನ್ನುವುದು ಸಾಬೀತಾಗುವುದು ಪೇಜಾವರಶ್ರೀಗಳ ಅಗತ್ಯವೂ ಹೌದು. ಇಲ್ಲವಾದರೆ, ಆ ಕಳಂಕವನ್ನು ಅವರು ಜೀವನಪೂರ್ತಿ ಹೊತ್ತುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಉಡುಪಿಯ ಎಲ್ಲ ಸ್ವಾಮೀಜಿಗಳು ಒಂದಾಗಿ ಶಿರೂರು ಸ್ವಾಮೀಜಿಗಳ ಸಾವಿನ ತನಿಖೆಗೆ ಒತ್ತಾಯಿಸಬೇಕು. ಒಂದು ವೇಳೆ, ಈ ಬಗ್ಗೆ ಅವರು ವೌನವಾಗುಳಿದರೆ, ಅದು ವದಂತಿಗಳನ್ನು ಹರಡುವ ಜನರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News