ಸಮ್ಮಿಶ್ರ ಸರಕಾರ ಅಭದ್ರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-07-20 15:19 GMT

ಮೈಸೂರು, ಜು.20: ಸಮ್ಮಿಶ್ರ ಸರಕಾರವನ್ನು ಅಭದ್ರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕುಟುಂಬದವರ ಹಾಗೆ ನಾವು ಕೆಲಸ ಮಾಡುತ್ತಿದ್ದೇವೆ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಅಣ್ಣ ತಮ್ಮಂದಿರ ಹಾಗೆ ಇದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಂಪತಿ, ತುಂಬಿ ಹರಿಯುತ್ತಿರುವ ಬೀಚನಹಳ್ಳಿಯಲ್ಲಿರುವ ಕಬಿನಿ ಮತ್ತು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಕೆ.ಆರ್.ಎಸ್. ಜಲಾಶಯಗಳಿಗೆ ಬಾಗಿನ ಅರ್ಪಿಸಿದರು. ಮಡಿಕೇರಿಯಿಂದ ಹೆಲಿಕಾಪ್ಟರ್ ಮೂಲಕ ಶುಕ್ರವಾರ ಮೈಸೂರಿಗೆ ಬಂದ ಅವರು ಮೊದಲಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀಚಾಮುಂಡೇಶ್ವರಿ ದರ್ಶನ ಪಡೆದು ನಂತರ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಕಬಿನಿ ಜಲಾಶಯಕ್ಕೆ ತೆರಳಿದರು. 

ರಾಜ್ಯದಲ್ಲಿ ಉತ್ತಮ ಮಳೆಯಾದ ಪರಿಣಾಮ ತುಂಬಿ ತುಳುಕುತ್ತಿದ್ದ ಕಪಿಲೆಗೆ ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವರಾದ ಡಿ.ಕೆ.ಶಿವಕುಮಾರ್, ಪುಟ್ಟರಂಗ ಶೆಟ್ಟಿ, ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಎನ್.ಮಹೇಶ್ ರೊಂದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಇದೇ ಮೊದಲ ಬಾರಿಗೆ ಎಚ್.ಡಿ.ಕೋಟೆ ತಾಲೂಕಿಗೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಶಾಸಕ ಅನಿಲ್ ಚಿಕ್ಕಮಾದು ಮೈಸೂರು ಪೇಟ, ಶಾಲು, ಏಲಕ್ಕಿ ಹಾರ ಹಾಕಿ ಬರಮಾಡಿಕೊಂಡರು.

ನಂತರ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಅಣೆಕಟ್ಟೆಗೆ ತೆರಳಿ ಸಂಜೆ 4.30 ಗಂಟೆಯ ಗೋಧೂಳೀ ಲಗ್ನದಲ್ಲಿ ಬಾಗಿನ ಅರ್ಪಿಸಿ, ಕೈಮುಗಿದು ಪ್ರಾರ್ಥಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಮ್ಮಿಶ್ರ ಸರಕಾರವನ್ನು ಅಭದ್ರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕುಟುಂಬದವರ ಹಾಗೆ ನಾವು ಕೆಲಸ ಮಾಡುತ್ತಿದ್ದೇವೆ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಅಣ್ಣ ತಮ್ಮಂದಿರ ರೀತಿ ಇದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲಾ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ತಮಿಳುನಾಡಿಗೆ ಸಪ್ಟಂಬರ್ ವರೆಗೆ ನೀಡಬೇಕಿದ್ದ ನೀರನ್ನು ಈಗಲೇ ನಾವು ಬಿಡುತ್ತಿದ್ದೇವೆ. ನಾಲ್ಕು ಜಲಾಶಯಗಳಾದ ಹಾರಂಗಿ, ತಲಕಾವೇರಿ, ಕಬಿನಿ, ಕೆ.ಆರ್.ಎಸ್ ಜಲಾಶಯಗಳು ಭರ್ತಿಯಾಗಿದ್ದು, ಮುಂದಾಗಬಹುದಾಗಿದ್ದ ಸಂಕಷ್ಟದಿಂದ ಪಾರಾಗಿದ್ದೇವೆ ಎಂದು ಹೇಳಿದರು.

ಶಾಸಕರಾದ ಹರ್ಷವರ್ಧನ್, ಅಶ್ವಿನ್‍ ಕುಮಾರ್, ಎಚ್.ವಿಶ್ವನಾಥ್, ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ.ಸಿಇಓ ಶಿವಶಂಕರ್, ಅಪರ ಜಿಲ್ಲಾಧಿಕಾರಿ ಟಿ.ಯೋಗೀಶ್, ಮೇಯರ್ ಭಾಗ್ಯವತಿ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಆರ್.ಧರ್ಮಸೇನಾ ಮಾಜಿ ಮೇಯರ್ ರವಿಕುಮಾರ್ ಎಚ್.ಡಿ.ಕೋಟೆ ತಾಲೂಕು ಜೆಡಿಎಸ್ ಅಧ್ಯಕ್ಷ ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News