ರಾಷ್ಟ್ರಪತಿ ಅಂಕಿತ ಹಾಕಿದ್ದರೂ ಅನುಷ್ಟಾನಗೊಳಿಸಲು ಸಾಧ್ಯವಿಲ್ಲ: ಸಿಎಂ ಕುಮಾರಸ್ವಾಮಿ

Update: 2018-07-20 16:37 GMT

ಮೈಸೂರು,ಜು.20:  ರಾಷ್ಟ್ರಪತಿಗಳು ಅಂಕಿತ ಹಾಕಿದ್ದರೂ ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ಇರುವುದರಿಂದ ಎಸ್ಸಿ-ಎಸ್ಟಿ ಭಡ್ತಿ ಮೀಸಲಾತಿಯನ್ನು ಅನುಷ್ಟಾನಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮೊದಲ ಆಷಾಢ ಶುಕ್ರವಾರದ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲು ಶುಕ್ರವಾರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಎಸ್ಸಿ-ಎಸ್ಟಿ ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಅಂಕಿತ ಹಾಕಿರಬಹುದು, ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಯಾವ ವಿಚಾರ ಎಂದು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.

ರಾಜ್ಯದ ವಿ.ವಿ.ಗಳ ಸಿಂಡೀಕೇಟ್ ಸದಸ್ಯರುಗಳು ಮತ್ತು ನಾಮ ನಿರ್ದೇಶನ ಸದಸ್ಯರುಗಳನ್ನು ವಜಾಗೊಳಿಸಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಯಾವುದೇ ರಾಜಕೀಯ ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ರಾಜ್ಯದ ಜನ ಸಂತೋಷದಿಂದಿದ್ದಾರೆ: ಇದಕ್ಕೂ ಮೊದಲು ಮಾತನಾಡಿದ ಸಿಎಂ ಕುಮಾರಸ್ವಾಮಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ನಾಲ್ಕು ಜಲಾಶಯಗಳು ಭರ್ತಿಯಾಗಿವೆ. ರಾಜ್ಯದ ಜನ ಬರದಿಂದ ತತ್ತರಿಸುತ್ತಿದ್ದರು. ಈಗ ಮಳೆಯಾಗುತ್ತಿರುವುದರಿಂದ ಸಂತೋಷವಾಗಿದ್ದಾರೆ. ಭೂಮಿ ಎಲ್ಲೆಲ್ಲೂ ಹಸಿರಿನಿಂದ ಕೂಡಿದೆ. ಜನ ಜಾನುವಾರುಗಳಿಗೆ ಕುಡಿಯಲು ಸಾಕಷ್ಟು ನೀರು ಬಂದಿದೆ ಎಂದು ಹೇಳಿದರು.

ಜಲಾಶಯಗಳು ಭರ್ತಿಯಾದ ಹಿನ್ನಲೆಯಲ್ಲಿ ಇಂದು ಕಬಿನಿ ಮತ್ತು ಕೆ.ಆರ್.ಎಸ್ ಜಲಾಶಯಗಳಿಗೆ ಸಂಪ್ರದಾಯದಂತೆ ಭಾಗಿನ ಅರ್ಪಿಸುತ್ತಿದ್ದೇನೆ. ರಾಜ್ಯದ ಜನ ಸಂತೋಷದಿಂದ ಇರಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ನಾಲ್ಕು ಗಂಟೆ ತಡವಾಗಿ ಬಂದ ಸಿಎಂ: ನಿಗದಿಯಂತೆ ಮಡಕೇರಿಯಿಂದ ಬೆಳಿಗ್ಗೆ 9.30 ಗಂಟೆಗೆ ಬರಬೇಕಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಮಾರು ನಾಲ್ಕು ಗಂಟೆ ತಡವಾಗಿ ಆಗಮಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮುಖ್ಯಮಂತ್ರಿಗಳ ಜೊತೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದರು. ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಮೇಯರ್ ಭಾಗ್ಯವತಿ, ಶಾಸಕ ಎಂ.ಅಶ್ವಿನ್‍ ಕುಮಾರ್ ಹಾಜರಿದ್ದರು.

ಕಪ್ಪು ಬಾವುಟ ಪ್ರದರ್ಶಿಸಿದ ದಸಂಸ ಕಾರ್ಯಕರ್ತರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆ ರಸ್ತೆ ಪಕ್ಕದಲ್ಲಿ ನಿಂತಿದ್ದ ದಲಿತ ಸಂಘಟನೆ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಲು ಐರಾವತ ಬಸ್‍ನಲ್ಲಿ ಆಗಮಿಸುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮೈಸೂರು-ನಂಜನಗೂಡು ರಸ್ತೆಯ ರಿಂಗ್ ರೋಡ್ ಬಳಿ ಕಪ್ಪು ಬಾವುಟ ಪ್ರದರ್ಶಿಸಿದರು.

ರಾಷ್ಟ್ರಪತಿಗಳು ಅಂಕಿತ ಹಾಕಿರುವ ಕಾಯ್ದೆ ಜಾರಿಮಾಡಲು ನಿರ್ಲಕ್ಷ್ಯ ವಹಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಧಿಕ್ಕಾರ, ದಲಿತ ವಿರೋಧಿ ಸರಕಾರಕ್ಕೆ ಧಿಕ್ಕಾರ, ದಲಿತರ ಸ್ವಾಭಿನಾಕ್ಕೆ ಧಕ್ಕೆ ಉಂಟುಮಾಡುತ್ತಿರುವ ಸಚಿವ ಸಂಪುಟಕ್ಕೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ, ಸಂಘಟನಾ ಕಾರ್ಯದರ್ಶಿ ಎಡದೊರೆ ಮಹದೇವಯ್ಯ, ದಸಂಸ ಮುಖಂಡರಾದ ಕೆ.ವಿ.ದೇವೇಂದ್ರ, ಕಂದೇಗಾಲ ಶ್ರೀನಿವಾಸ, ಶಂಭುಲಿಂಗಸ್ವಾಮಿ, ಮಹದೇವಸ್ವಾಮಿ, ರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ರಾಷ್ಟ್ರಪತಿಗಳು ಹಾಕಿರುವ ಅಂಕಿತವನ್ನೇ ತಿರಸ್ಕಾರ ಮಾಡಿ ಅಪಮಾನ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಏಕೆ ನಾವು ಗೌರವ ಕೊಡಬೇಕು? ಎಸ್ಸಿ-ಎಸ್ಟಿ ನೌಕರರ ಮುಂಬಡ್ತಿ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.
-ಚೋರನಹಳ್ಳಿ ಶಿವಣ್ಣ, ದಸಂಸ ಜಿಲ್ಲಾ ಸಂಚಾಲಕ.

ಸುಪ್ರೀಂ ಕೋರ್ಟ್‍ನಲ್ಲಿ ಯಾವುದೇ ರೀತಿಯ ಅರ್ಜಿ ವಿಚಾರಣೆ ಇಲ್ಲದಿದ್ದರೂ ಬೇಕಂತಲೇ ಮುಖ್ಯಮಂತ್ರಿಗಳು ಭಡ್ತಿ ಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ದಲಿತರ ಮೇಲೆ ನಿಜವಾದ ಕಾಳಜಿ ಇದ್ದರೆ ರಾಷ್ಟ್ರಪತಿಗಳು ಅಂಕಿತ ಹಾಕಿರುವ ಕಾಯ್ದೆ ಜಾರಿಗೊಳಿಸಲಿ.

-ಎಡದೊರೆ ಮಹದೇವಯ್ಯ,ಸಂಘಟನಾ ಕಾರ್ಯದರ್ಶಿ ದಸಂಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News