ಕೋಲಾರ: ಉಚಿತ ಬಸ್‍ಪಾಸ್ ವಿತರಣೆಗೆ ಆಗ್ರಹಿಸಿ ಎಸ್‍ಎಫ್‍ಐ ಧರಣಿ

Update: 2018-07-20 17:07 GMT

ಕೋಲಾರ,ಜು.20: ರಾಜ್ಯದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ವಿತರಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಎಸ್‍ಎಫ್‍ಐ ಸಂಘಟನೆ ವತಿಯಿಂದ ನಗರದ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ನಗರದ ಕಾಲೇಜು ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ವಿದ್ಯಾರ್ಥಿಗಳು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕೂಡಲೇ ಬಸ್ ಪಾಸ್ ವಿತರಣೆಗೆ ಕ್ರಮಕೈಗೊಳ್ಳಬೇಕು, ಅಂತರಾಜ್ಯ ನಾಮಫಲಕವಿರುವ ಬಸ್‍ಗಳಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸೇವೆ ನೀಡುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಎಸ್‍ಎಫ್‍ಐ ಮುಖಂಡರು, ಉಚಿತ ಬಸ್‍ಪಾಸ್ ನೀಡುವ ಕುರಿತು ನಿರಂತರವಾಗಿ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದರೂ ಸಹ ರಾಜ್ಯ ಸರಕಾರವು ಬಜೆಟ್‍ನಲ್ಲಿ ಸಂಪೂರ್ಣವಾಗಿ ಕಡೆಗಣಿಸಿ, ಬಸ್‍ಪಾಸ್ ನೀಡದೆ ವಂಚಿಸಿದೆ ಎಂದು ಆರೋಪಿಸಿದರು.

690 ಕೋಟಿ ರೂ.ಗಳನ್ನು ನೀಡಿದರೆ ರಾಜ್ಯದ 20 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಈ ಯೋಜನೆಗೆ ಸರಕಾರ ಹಣದ ಕೊರತೆಯ ಸಬೂಬು ಹೇಳುವುದು ಸರಿಯಲ್ಲ. ಸರಕಾರ ನೀಡುವ ಉಚಿತ ಬಸ್‍ಪಾಸ್‍ನಿಂದಾಗಿ ರಾಜ್ಯದ ರೈತರು, ಕಾರ್ಮಿಕರು, ಕೂಲಿಕಾರರ ಮಕ್ಕಳ ಶೈಕ್ಷಣಿಗೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ವಿದ್ಯಾರ್ಥಿಗಳು ಉಚಿತ ಬಸ್‍ಪಾಸ್ ಸಿಗುತ್ತದೆ ಎಂಬ ಭರವಸೆಯಿಂದಾಗಿ ಇಲ್ಲಿಯವರೆಗೂ ಕಾದು, ಇದೀಗ ಹಣ ನೀಡಿ ಬಸ್‍ಪಾಸ್‍ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೇ ಉಚಿತ ಬಸ್‍ಪಾಸ್ ನೀಡುವ ಕುರಿತು ಘೋಷಿಸಿ, ಹಣ ಮೀಸಲಿಡಬೇಕು ಎಂದು ಆಗ್ರಹಿಸಿದ ಅವರು, ಇಲ್ಲವಾದಲ್ಲಿ ಸಂಘಟನೆಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಂಡು ವಿಧಾನಸೌಧ ಚಲೋ ಹಮ್ಮಿಕೊಳ್ಳಬೇಕಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನು ವಿದ್ಯಾರ್ಥಿಗಳನ್ನು ಕಂಡರೆ ಕೆಲ ಚಾಲಕರು, ನಿರ್ವಾಹಕರು ಬಸ್ ನಿಲ್ಲಿಸದೆ ಹೋಗುತ್ತಿದ್ದಾರೆ. ಜತೆಗೆ ಅಂತರಾಜ್ಯ ವಾಹನ ಎಂದು ಫಲಕ ಅಳವಡಿಸಿರುವ ಬಸ್ಸುಗಳಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಅವಕಾಶ ನೀಡದಿರುವುದು ಗಂಭೀರವಾದ ಸಮಸ್ಯೆಯಾಗಿದೆ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಿ, ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು. ಗ್ರಾಮೀಣ ಭಾಗದ ಬಹುತೇಕ ಹಳ್ಳಿಗಳಿಗೆ ಬಸ್ ಸೌಲಭ್ಯ ಸಮರ್ಪಕವಾಗಿಲ್ಲ. ವಿದ್ಯಾರ್ಥಿಗಳು, ಸಾರ್ವಜನಿಕರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಕೂಡಲೇ ಸಹಾಯವಾಣಿಯನ್ನು ಆರಂಭಿಸಿದರೆ, ಜನರು ಸಮಸ್ಯೆಗಳನ್ನು ಹೇಳಿಕೊಳ್ಳಲು ಅನುಕೂಲ ಆಗುತ್ತದೆ. ಕರೆ ಬಂದ ತಕ್ಷಣ ಕೂಡಲೇ ಪರಿಶೀಲಿಸಿ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಕೆ.ವಾಸುದೇವರೆಡ್ಡಿ, ಕಾರ್ಯದರ್ಶಿ ಎನ್.ಶಿವಪ್ಪ, ತಾಲೂಕು ಅಧ್ಯಕ್ಷೆ ಗಾಯಿತ್ರಿ, ಕಾರ್ಯದರ್ಶಿ ಶ್ರೀಕಾಂತ್, ಮುಖಂಡರಾದ ಮಣಿ, ಭರತ್, ಅವಿನಾಶ್, ಕಾವ್ಯಾಂಜಲಿ, ಗೀತಾ, ಶ್ರಾವಣಿ, ಮಾಲಾ, ಸುಶ್ಮಿತಾ, ಸಹನ, ಎಸ್.ಅಂಕಿತ, ರಮ್ಯ ಮತ್ತಿತರರು ಉಪಸ್ಥಿತರಿದ್ದರು.

ಉಚಿತ ಬಸ್‍ಪಾಸ್‍ಗೆ ಆಗ್ರಹಿಸಿ ಎಸ್‍ಎಫ್‍ಐ ವತಿಯಿಂದ ಮುತ್ತಿಗೆ ಹಾಕಲಾಗುತ್ತದೆ ಎನ್ನುವ ಮಾಹಿತಿ ಇದ್ದುದರಿಂದ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಗೇಟ್‍ಗೆ ಶುಕ್ರವಾರ ಬೀಗ ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಸಂಘಟನೆಯ ಮುಖಂಡರು ಸಿಬ್ಬಂದಿಯ ವಿರೋಧದ ನಡುವೆಯೂ ಗೇಟ್ ಹಾರಿ ಒಳ ನುಗ್ಗಿ, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿಗಳು ನಡೆದವು.

ಸ್ಥಳಕ್ಕಾಗಮಿಸಿದ ನಗರಠಾಣೆ ವೃತ್ತ ನಿರೀಕ್ಷಕ ಲೋಕೇಶ್, ನೀವು ಈ ರೀತಿ ವರ್ತಿಸುವುದು ಸರಿಯಲ್ಲ. ಅಧಿಕಾರಿಗಳು ಇಲ್ಲಿಗೆ ಬರುತ್ತಾರೆ, ಮನವಿ ಸ್ವೀಕರಿಸುತ್ತಾರೆ. ಕಾನೂನು ಮೀರಿದರೆ ನಾವೂ ಸಹ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಬಳಿಕ ಪ್ರತಿಭಟನಾಕಾರರು ಸಮಾಧಾನಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News