ಸೊರಬ: ರೈತರ ಸಂಕಷ್ಟಗಳಿಗೆ ನೆರವಾಗುವಂತೆ ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ

Update: 2018-07-20 17:25 GMT

ಸೊರಬ, ಜು.20: ತಾಲೂಕಿನಲ್ಲಿ ಮಳೆಹಾನಿಯಿಂದ ಉಂಟಾಗಿರುವ ಬೆಳೆ ನಷ್ಟದ ಬಗ್ಗೆ ರೈತರಿಗೆ ಪ್ರಮಾಣಿಕವಾಗಿ ಸ್ಪಂದಿಸಿ ರೈತರ ಸಂಕಷ್ಟಗಳಿಗೆ ನೆರವಾಗುವ ಜೊತೆಗೆ ಪರಿಶೀಲನೆ ನಡೆಸಿ, ಸೂಕ್ತ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ತಾಲೂಕಿನಲ್ಲಿ ಮಳೆಯಿಂದಾಗಿ ವರದಾನದಿಯಿಂದ ಜಲಾವೃತವಾದ ಬೆಳೆ ಹಾನಿ ಪ್ರದೇಶಗಳಾದ ಜೋಳದಗುಡ್ಡೆ, ಚಂದ್ರಗುತ್ತಿ, ಅಂದವಳ್ಳಿ, ಕಡಸೂರು, ಕತವಾಯಿ, ತಟ್ಟಿಕೆರೆ ಗ್ರಾುಗಳಿಗೆ ಭೇಟಿ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ವರದಾ ನದಿ ಪ್ರವಾಹದಿಂದ ಸುಮಾರು 2ಸಾವಿರ ಎಕರೆ ರೈತರ ಜಮೀನುಗಳಿಗೆ ಹಾನಿಯಾಗಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸರಕಾರಕ್ಕೆ ಆಗ್ರಹಿಸಿ, ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಈ ಬಾಗದ ರೈತರು ಬೆಳೆ ಕಳೆದುಕೊಳ್ಳುವ ಜತೆಗೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಚಿಂತಿಸಲಾಗಿದೆ ಎಂದು ತಿಳಿಸಿದರು.

ತಾಲೂಕಿನ ಜನರು ಕುಮಾರ ಬಂಗಾರಪ್ಪ ಅವರ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಜನರ ನಂಬಿಕೆಗೆ ಅನುಗುಣವಾಗಿ ತಾಲೂಕಿನ ಅಭಿವೃದ್ಧಿಗೆ ಸರಕಾರದಿಂದ ಆಗುವ ಯೋಜನೆಗಳಿಗೆ ಹಾಗೂ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಶ್ರಮಿಸಲಿದ್ದಾರೆ. ದಂಡಾವತಿ ಯೋಜನೆ ಜೊತೆಗೆ ನದಿಗಳಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.

ಸರಕಾರ ಜನಹಿತ ಕಾಯುವ ಬದಲು ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ರೈತರ ಸಂಪೂರ್ಣ ಸಾಲಮನ್ನಾ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ. ರೈತರಿಗೆ ಪೂರಕವಾದ ಯೋಜನೆಗಳ ಬಗ್ಗೆ ಸರಕಾರ ಘೋಷಣೆ ಮಾಡಿಲ್ಲ. ಹದಿನೈದು ದಿನದೊಳಗೆ ರೈತರ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಶಾಸಕ ಕುಮಾರ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ತಾಲೂಕು ಅಧ್ಯಕ್ಷ ಎ.ಎಲ್.ಅರವಿಂದ, ತಾಪಂ ಅಧ್ಯಕ್ಷೆ ನಯನಾ, ದತ್ತಾತ್ರಿ, ಶ್ರೀಪಾದ ಹೆಗಡೆ, ತಬಲಿ ಬಂಗಾರಪ್ಪ, ಎಂ.ಡಿ.ಉಮೇಶ್, ತಹಶೀಲ್ದಾರ್ ಎಲ್. ಬಿ.ಚಂದ್ರಶೇಖರ್, ತಾಪಂ ಇಒ ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ದಿವಾಕರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News