×
Ad

ಸ್ಮಾರ್ಟ್‍ಸಿಟಿ ಅಧಿಕಾರಿಗಳ ಹೆಸರಿನಲ್ಲಿ ಮನೆ ದರೋಡೆ: ಮೂವರು ಅಂತರಾಜ್ಯ ಕಳ್ಳರ ಬಂಧನ

Update: 2018-07-20 23:07 IST

ತುಮಕೂರು,ಜು.20: ಸ್ಮಾರ್ಟ್‍ಸಿಟಿ ಅಧಿಕಾರಿಗಳ ಹೆಸರಿನಲ್ಲಿ ವೃದ್ದರನ್ನು ವಂಚಿಸಿ, ಆಭರಣ, ನಗದು ದೋಚುತ್ತಿದ್ದ ಮೂವರು ಅಂತರಾಜ್ಯ ಕಳ್ಳರನ್ನು ತುಮಕೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತಮಿಳುನಾಡಿನ ವೆಲ್ಲೂರಿನ ಗಣೇಶ್(42), ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಡಿ.ಎಂ.ರಾಮಚಂದ್ರ(32) ಮತ್ತು ಪಂಜಾಬ್ ರಾಜ್ಯದ ಜಲಂಧರ್ ನ ಫರೀದುಲ್ ಇಂತಿಯಾಜ್ (26) ಎಂದು ಗುರುತಿಸಲಾಗಿದೆ. ತುಮಕೂರು ನಗರದ ಕ್ಯಾತ್ಸಂದ್ರ, ಜಯನಗರ ಮತ್ತು ಎನ್.ಇ.ಪಿ.ಎಸ್. ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ತಾವೇ ಮಾಡಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ವಯೋವೃದ್ದರು, ಮಹಿಳೆಯರೇ ಇರುವ ಮನೆಗಳನ್ನು ಗುರುತಿಸಿ, ಒಳ್ಳೆಯ ಬಟ್ಟೆ ತೊಟ್ಟು, ಅಧಿಕಾರಿಗಳಂತೆ ಪೋಸ್ ನೀಡಿ, ಮನೆಯಲ್ಲಿ ಯುಜಿಡಿ, ನಲ್ಲಿ ನೀರು ಸಂಪರ್ಕಗಳನ್ನು ಚೆಕ್ ಮಾಡುವಂತೆ ನಟಿಸಿ, ಮನೆಯವರನ್ನು ಮಹಡಿಯ ಮೇಲೆ ಕರೆದುಕೊಂಡು ಹೋಗುತ್ತಿದ್ದು, ಇದೇ ವೇಳೆ ಹೊರಗೆ ಇದನ್ನೇ ಕಾಯುತ್ತಿದ್ದ ಇನ್ನಿಬ್ಬರು ಮನೆಯೊಳಗೆ ನುಗ್ಗಿ ಹಣ, ಒಡವೆ ಇನ್ನಿತರ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗಣೇಶ್ ಎಂಬುವವರ ಮೇಲೆ ರಾಜ್ಯದ ವಿವಿಧ ಠಾಣೆಗಳಲ್ಲಿ 24 ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಎರಡನೇ ಆರೋಪಿಯಾಗಿರುವ ಡಿ.ಎಂ.ರಾಮಚಂದ್ರ ಮೇಲೆ 3 ಕೇಸುಗಳಿವೆ. ನೆರೆಯ ಆಂಧ್ರ ಮತ್ತು ತಮಿಳುನಾಡಿನಲ್ಲಿ ನಡೆದಿರುವ ಇದೇ ರೀತಿಯ ಪ್ರಕರಣಗಳಲ್ಲೂ ಇವರೇ ಅರೋಪಿಗಳಾಗಿದ್ದು, ಅಲ್ಲಿನ ಪೊಲೀಸ್ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಬಂಧಿತರಿಂದ 500 ಗ್ರಾಂ ಚಿನ್ನ ಮತ್ತು 2.52 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳಾದ ಡಿವೈಎಸ್ಪಿ ನಾಗರಾಜು, ಸಿಪಿಐಗಳಾದ ರಾಧಾಕೃಷ್ಣ, ರಾಮಕೃಷ್ಣಯ್ಯ, ಪಿ.ಎಸ್.ಐ ಲಕ್ಷ್ಮಯ್ಯ, ನರಸಿಂಹಯ್ಯ, ಸೈಮನ್ ವಿಕ್ಟರ್, ಮುನಾವರ್ ಪಾಷ ಅವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News