ರೇಷ್ಮೆಗೂಡಿಗೆ 40 ರೂ. ಬೆಂಬಲ ಬೆಲೆ: ಎಚ್.ಡಿ.ಕುಮಾರಸ್ವಾಮಿ

Update: 2018-07-20 17:51 GMT

ಮಂಡ್ಯ, ಜು.20: ರೇಷ್ಮೆ ಗೂಡಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 40 ರೂ. ಬೆಂಬಲ ಬೆಲೆ ಘೋಷಿಸಿದ್ದು, ಮೈಷುಗರ್ ಸಕ್ಕರೆ ಕಾರ್ಖಾನೆ ಮುಚ್ಚುವುದಿಲ್ಲವೆಂಬ ಭರವಸೆ ನೀಡಿದ್ದಾರೆ.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜೆಡಿಎಸ್ ವತಿಯಿಂದ ಶುಕ್ರವಾರ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿ ಕೆ.ಜಿ. ಬೈವೋಲ್ಟೈನ್ ಗೂಡಿಗೂ 50 ರೂ. ಬೆಂಬಲ ಬೆಲೆ ಪ್ರಕಟಿಸಿದರು. ಇತಿಹಾಸ ಹೊಂದಿರುವ ಸರಕಾರಿ ಸ್ವಾಮ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಕದ ಮುಚ್ಚಲು ಅವಕಾಶ ನೀಡುವುದಿಲ್ಲ. ಅಗತ್ಯ ಅನುದಾನ ನೀಡಿ ಪುನಶ್ಚೇತನಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಈಗಾಗಲೇ ಘೋಷಿಸಿರುವಂತೆ ರೈತರ ಸಾಲಮನ್ನಾಗೆ ಸಂಬಂಧಿಸಿದಂತೆ ವಾರದೊಳಗೆ ಬ್ಯಾಂಕ್‍ಗಳಿಂದ ಋಣಮುಕ್ತ ಪತ್ರ ವಿತರಿಸಲಾಗುವುದು ಎಂದ ಅವರು, ರಾಜಕೀಯ ಶಕ್ತಿಕೊಟ್ಟ ಮಂಡ್ಯ ಜಿಲ್ಲೆಯ ಜನರನ್ನು ಕೊನೆ ಉಸಿರಿರೋವರೆಗೂ ಮರೆಯುವುದಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಹಾದಿ ತುಳಿಯಬೇಡಿ ಎಂದು ಮನವಿ ಮಾಡಿದರು.

ವರುಣನ ಕೃಪೆಯಿಂದ ಕನ್ನಂಬಾಡಿ ಭರ್ತಿಯಾಗಿದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಚಾಲನೆ ದೊರಕಿದೆ. ಮೊದಲೇ ಹೇಳಿದಂತೆ ಜಿಲ್ಲೆಯ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಅವರು ಹೇಳಿದರು.

ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಜಿ.ಟಿ. ದೇವೇಗೌಡ, ಶಾಸಕರಾದ ಕೆ.ಸುರೇಶ್‍ಗೌಡ, ಎಂ.ಶ್ರೀನಿವಾಸ್, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಕೆ.ಸಿ.ನಾರಾಯಣಗೌಡ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಕಲ್ಪನಾ ಸಿದ್ದರಾಜು, ಪ್ರಭಾವತಿ ಜಯರಾಂ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್, ಜಿಲ್ಲಾಧ್ಯಕ್ಷ ಡಿ.ರಮೇಶ್, ಲಕ್ಷ್ಮಿ ಅಶ್ವಿನ್‍ಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.

ಬಸವಳಿದ ಕಾರ್ಯಕರ್ತರು: ಮಧ್ಯಾಹ್ನ 3 ಗಂಟೆಗೆ ಆರಂಭವಾಗಿಬೇಕಿದ್ದ ಸಮಾವೇಶ ಸುಮಾರು 4 ಗಂಟೆ ತಡವಾದ್ದರಿಂದ ಸಾಗರೋಪಾದಿಯಲ್ಲಿ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರು ಬಸವಳಿದರು. ಕಾರ್ಯಕ್ರಮ ಆರಂಭ ವೇಳೆಗೆ ಹಲವರು ಗ್ರಾಮಗಳಿಗೆ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News