ಕೊಡಗಿನ ರಸ್ತೆಗಳ ಅಭಿವೃದ್ಧಿಗೆ 500 ಕೋಟಿ ಬೇಕು: ಸಿಎಂ ಗೆ ಮನವಿ ಸಲ್ಲಿಸಿದ ಎಂಎಲ್‍ಸಿ ವೀಣಾ ಅಚ್ಚಯ್ಯ
ಮಡಿಕೇರಿ, ಜು.20: ಪ್ರಸ್ತುತ ವರ್ಷ ಸುರಿದ ಧಾರಾಕಾರ ಮಳೆಗೆ ಕೊಡಗಿನ ಬಹುತೇಕ ಎಲ್ಲಾ ರಸ್ತೆಗಳು ಹಾಳಾಗಿದ್ದು, ರಸ್ತೆಗಳ ಅಭಿವೃದ್ಧಿಗೆ 500 ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಮಡಿಕೇರಿಗೆ ಭೇಟಿ ನೀಡಿದ ಸಂದರ್ಭ ಮನವಿ ಸಲ್ಲಿಸಿದ ವೀಣಾ ಅಚ್ಚಯ್ಯ ಅವರು ಅತಿವೃಷ್ಟಿಯಿಂದ ಕೊಡಗಿನ ಜನ ಅನುಭವಿಸುತ್ತಿರುವ ಕಷ್ಟ ನಷ್ಟಗಳ ಬಗ್ಗೆ ವಿವರಿಸಿದರು.
ಬೇಡಿಕೆಗಳು
ಅತಿವೃಷ್ಟಿಯಿಂದ ಹಾಳಾಗಿರುವ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ರೂ.500 ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡಬೇಕು. ಜಿಲ್ಲೆಗೆ ಈ ಮೊದಲು ನೀಡುತ್ತಿದ್ದ ವಾರ್ಷಿಕ ರೂ.50 ಕೋಟಿಗಳ ವಿಶೇಷ ಪ್ಯಾಕೇಜ್ ಮೊತ್ತವನ್ನು ರೂ.100 ಕೋಟಿಗಳಿಗೆ ಹೆಚ್ಚಿಸಬೇಕು. ಕೊಡಗಿನ ಜನತೆಯ ಬಹು ವರ್ಷಗಳ ಬೇಡಿಕೆಯಂತೆ ಕಾವೇರಿ ತಾಲೂಕು ಹಾಗೂ ಪೊನ್ನಂಪೇಟೆ ತಾಲೂಕುಗಳನ್ನು ಘೋಷಿಸಬೇಕು. ವನ್ಯಜೀವಿ ಹಾಗೂ ಆನೆ ಮಾನವ ಸಂಘರ್ಷವನ್ನು ತಡೆಗಟ್ಟಲು ಶಾಶ್ವತ ಪರಿಹಾರವನ್ನು ಸಂಬಂಧಿಸಿದ ಇಲಾಖೆಗಳಿಂದ ಕೈಗೊಳ್ಳಬೇಕು.
ಅತಿವೃಷ್ಟಿಯಿಂದ ವಸತಿ ರಹಿತರಾಗಿರುವವರಿಗೆ ಹಾಗೂ ನಷ್ಟ ಅನುಭವಿಸಿರುವ ರೈತರಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಜಿಲ್ಲೆಯ ರೈತರ ಹಿತ ಕಾಪಾಡಲು ಹಾಗೂ ಭತ್ತದ ಕೃಷಿಗೆ ಉತ್ತೇಜನ ನೀಡಲು ಒಂದು ಎಕರೆ ಕೃಷಿ ಭೂಮಿಗೆ ರೂ.10 ಸಾವಿರದಂತೆ ಪ್ರೋತ್ಸಾಹ ಧನ ಘೋಷಿಸಬೇಕು. ಬಹು ವರ್ಷಗಳ ಬೇಡಿಕೆಯಾದ ಜಮ್ಮಾ ಬಾಣೆ ಜಾಗಗಳನ್ನು ಕೂಡಲೇ ಕಂದಾಯಕ್ಕೆ ಒಳಪಡಿಸಲು ಕಂದಾಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಬೇಕು. ಮಡಿಕೇರಿ ನಗರ ಮತ್ತು ಜಿಲ್ಲೆಯ ಇತರ ಪಟ್ಟಣಗಳಲ್ಲಿ ನೂತನ ಗೃಹ ನಿರ್ಮಾಣಕ್ಕೆ ಭೂ ಪರಿವರ್ತನೆ ಕಡ್ಡಾಯವೆಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು.
ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಜಾಗಗಳ ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದ್ದು, ಸದರಿ ಜಾಗವನ್ನು ದೇಶ ರಕ್ಷಣೆಯಲ್ಲಿ ಪಾಲ್ಗೊಂಡು ನಿವೃತ್ತಿ ಹೊಂದಿದ ಮಾಜಿ ಸೈನಿಕರಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹಾಗೂ ಇತರ ತಾಂತ್ರಿಕ ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡಬೇಕು. ಕಂದಾಯ ಇಲಾಖೆಯಲ್ಲಿನ ಕೆಲಸ, ಕಾರ್ಯಗಳನ್ನು ಚುರುಕುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು. ವಿದ್ಯುತ್ ಸಂಪರ್ಕದ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಬೇಕು. ಪ್ರವಾಸಿತಾಣಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಬೇಕು. ಮಡಿಕೇರಿ ನಗರದಲ್ಲಿರುವ ಐತಿಹಾಸಿಕ ಕೋಟೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಮನವಿ ಪತ್ರವನ್ನು ವೀಣಾಅಚ್ಚಯ್ಯ ಮುಖ್ಯಮಂತ್ರಿಗಳಿಗೆ ನೀಡಿದರು.
ಇದೇ ಸಂದರ್ಭ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶಿವುಮಾದಪ್ಪ ಹಾಗೂ ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ ಅವರು ಕೂಡ ಪ್ರತ್ಯೇಕ ಮನವಿಪತ್ರ ಸಲ್ಲಿಸಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಕೋರಿಕೊಂಡರು.