ಹನೂರು: ಹದಗೆಟ್ಟ ಕುಡುವಾಳೆ ಗ್ರಾಮದ ರಸ್ತೆ ದುರಸ್ತಿಗೆ ಆಗ್ರಹ
ಹನೂರು,ಜು.21: ಪಿಜಿಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುವಾಳೆ ದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ತುಂಬಾ ಹದಗೆಟ್ಟಿದ್ದು, ಸಾರ್ವಜನಿಕರು, ವಾಹನ ಸವಾರರು ತಿರುಗಾಡಲು ಅಯೋಗ್ಯವಾಗಿದೆ. ಈ ಗ್ರಾಮದ ರಸ್ತೆಯನ್ನು ಸಂಬಂಧ ಪಟ್ಟವರು ಗಮನ ಹರಿಸಿ ದುರಸ್ತಿ ಪಡಿಸುವಂತೆ ಗ್ರಾಮಸ್ಥರು ಆಗ್ರಸಿದ್ದಾರೆ.
ಲೊಕ್ಕನಹಳ್ಳಿ ಜಿ ಪಂ, ಪಿ.ಜಿ.ಪಾಳ್ಯ ಗ್ರಾ.ಪಂ. ವ್ಯಾಪ್ತಿಗೆ ಸೇರಿರುವ ಕುಡುವಾಳೆ ದೊಡ್ಡಿ ಗ್ರಾಮದಲ್ಲಿ ಗಿರಿಜನರು ವಾಸವಾಗಿದ್ದಾರೆ. ಈ ಗ್ರಾಮದಲ್ಲಿ ನಿತ್ಯ ಕೂಲಿ ಜೀವನ ಆಶ್ರಯಿಸಿರುವ ಸೋಲಿಗ ಕುಟುಂಬಗಳೇ ಹೆಚ್ಚಾಗಿದೆ. ಗ್ರಾ.ಪಂ. ಅಥವಾ ತಾಲೂಕು ಮತ್ತು ಜಿಲ್ಲಾಡಳಿತ ವತಿಯಿಂದ ರಸ್ತೆ, ಚರಂಡಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಿಲ್ಲ. ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು, ಕಳೆದೆರಡು ವರ್ಷಗಳ ಹಿಂದೆ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿರುವ ಮೆಟ್ಲಿಂಗ್ ರಸ್ತೆ ಕಾಮಾಗಾರಿ ಕೆಲವೇ ದಿನಗಳಲ್ಲಿಯೇ ಕಿತ್ತು ಹೋಗಿದೆ. ಇದರ ಬಗ್ಗೆ ಕ್ರಮ ವಹಿಸುವಂತೆ ಹಲವಾರು ಬಾರಿ ಮುಖಂಡರು, ಅಧಿಕಾರಿ ಮತ್ತು ಸ್ಥಳೀಯ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಚುನಾವಣೆ ವೇಳೆ ಮಾತ್ರ ಜನಪ್ರತಿನಿಧಿಗಳು ಮತ ಕೇಳಲು ಬರುತ್ತಾರೆ. ಆದರೆ ಚುನಾವಣೆ ಆದ ನಂತರ ಈ ಭಾಗಕ್ಕೆ ತಿರುಗಿಯೂ ನೋಡುವುದಿಲ್ಲ. ಜನರ ಕಷ್ಟ ಕೇಳುವವರೇ ಇಲ್ಲದಂತಾಗಿದೆ. ಇನ್ನು ಅಧಿಕಾರಿ ವರ್ಗದವರಿಗೆ ಕುಡುವಾಳೆ ಗ್ರಾಮ ಎಲ್ಲಿದೆ ಎಂಬುವುದೆ ಗೊತ್ತಿಲ್ಲದಂತೆ ವರ್ತಿಸುತ್ತಿದ್ದು, ಇವರ ನಿರ್ಲಕ್ಷದಿಂದಾಗಿ ಕನಿಷ್ಠ ಮೂಲಭೂತ ಸೌಲಭ್ಯಗಳಿಂದಲೂ ಸಂಪೂರ್ಣ ವಂಚಿತರಾಗಿದ್ದೇವೆ ಎಂದು ಇಲ್ಲಿನ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.