ಸಂಘ ಸಂಸ್ಥೆಗಳು ಸದಾ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು: ಸಿ.ಟಿ.ರವಿ

Update: 2018-07-21 13:03 GMT

ಚಿಕ್ಕಮಗಳೂರು, ಜು.21: ಸಂಘ ಸಂಸ್ಥೆಗಳು ಸದಾ ಕ್ರಿಯಾಶೀಲವಾಗಿ ಸದಸ್ಯರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕೆ ಕಾರಣವಾಗಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಅವರು ಶನಿವಾರ ನಗರದ ಬೋಳರಾಮೇಶ್ವರ ದೇವಸ್ಥಾನದ ಮುಂಬಾಗ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ವಿಸ್ತರಣಾ 2ನೇ ಮಹಡಿ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಂಘ ಸಂಸ್ಥೆಗಳು ಕ್ರೀಯಾಶೀಲ ಚಟುವಟಿಕೆಯಿಂದ ಕೂಡುವುದರೊಂದಿಗೆ ಹೊಸತನ ಮಾಡಬೇಕೆಂಬ ಮನೋಭಾವನೆಯನ್ನು ಹೊಂದಿ ಪ್ರತಿಯೊಬ್ಬ ಸದಸ್ಯರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಹಾಗೂ ಕಲ್ಯಾಣಪರ ಯೋಜನೆಗಳನ್ನು ಮಾಡಬೇಕೆಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಸಂಘ ಸಂಸ್ಥೆಯ ಪದಾಧಿಕಾರಿ ಸ್ಥಾನಗಳು ಜವಾಬ್ದಾರಿಯುತವಾಗಿದೆ. ಸಂಘವು ಉತ್ತಮ ರೀತಿಯಲ್ಲಿ ನಡೆಯಲು ಸಂಘದ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುದಕೊಂಡು ಕೆಲಸ ಕಾರ್ಯಗಳನ್ನು ಆಯೋಜಿಸಬೇಕೆಂದ ಅವರು, ಜಿಲ್ಲಾ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲು ಇಚ್ಚಿಸುವ ಸಮುದಾಯ ಭವನ ನಿರ್ಮಾಣಕ್ಕೆ ಮುಖ್ಯ ಮಂತ್ರಿಯೊಂದಿಗೆ ಚರ್ಚಿಸಿ ಒಂದೂವರೆ ಕೋಟಿ ಅನುದಾನ ಕೊಡಿಸಲಾಗುವುದು. ನೂತನ ಪಿಂಚಣಿ ಯೋಜನೆಯಿಂದ ಹೊಸದಾಗಿ ಸೇರಿರುವ ಸರಕಾರಿ ನೌಕರರಿಗೆ ಹೆಚ್ಚಿನ ಅನಾನುಕೂಲ ಉಂಟಾಗಿದೆ. ಇದನ್ನು ಸರಿಪಡಿಸಲು ಸರಕಾರದ ಗಮನಕ್ಕೆ ತರಲಾಗುವುದು. ಸರಕಾರ ಸ್ಪಂದಿಸದೇ ಇದ್ದರೆ ನ್ಯಾಯಾಲಯದಲ್ಲಿ ನಾನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಪಿ.ಪರಮೇಶ್ವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನ ಪ್ರತಿನಿಧಿಗಳು ಹಾಗೂ ಸರಕಾರಿ ನೌಕರರ ಸಹಕಾರದಿಂದ ಉದ್ಘಾಟನೆಗೊಂಡ ಸುಸಜ್ಜಿತ ಕಟ್ಟಡದ ನಿರ್ಮಾಣಕ್ಕೆ ಸಾಧ್ಯವಾಯಿತು. ಇದನ್ನು ಮುಂದಿನ ದಿನಗಳಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಲಾಗುವುದು ಎಂದರು.

ಕರ್ನಾಟಕ ರಾಜ್ಯ ನೌಕರರ ಸಂಘದ ಕೋಶಾಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ನೌಕರರಿಗೆ ಪ್ರಸಕ್ತ ಸಮಸ್ಯೆಗಳ ಬಗ್ಗೆ ತಿಳಿಸುವುದರೊಂದಿಗೆ ಜನಪ್ರತಿನಿಧಿಗಳು ಇವುಗಳಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ಬಸವರಾಜ್, ವೆಂಕಟರಾಮ್ ಜಿಲ್ಲಾ ನೌಕರರ ಸಂಘದ ಗೌರವಾಧ್ಯಕ್ಷ ಹೆಚ್.ಕೆ.ಜಯಕುಮಾರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News