ಅವಿಭಕ್ತ ಕುಟುಂಬಗಳಲ್ಲಿ ಹಿರಿಯರಿಗೆ ಜೀವನ ಭದ್ರತೆ ಹೆಚ್ಚು: ನಗರಸಭೆ ಆಯುಕ್ತೆ ತುಷಾರಮಣಿ

Update: 2018-07-21 13:08 GMT

ಚಿಕ್ಕಮಗಳೂರು,ಜು.21: ಹಿಂದೆ ಅವಿಭಕ್ತ ಕುಟುಂಬಗಳು ಇದ್ದವು, ಇಂದು ವಿಭಕ್ತ ಕುಟುಂಬಗಳು ಹೆಚ್ಚಾಗಿದ್ದು, ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ನಗರಸಭೆ ಆಯುಕ್ತೆ ತುಷಾರಮಣಿ ವಿಷಾಧ ವ್ಯಕ್ತಪಡಿಸಿದರು. 

ಅವರು ಶನಿವಾರ ನಗರದ ಹಿರಿಯ ನಾಗರಿಕರ ಹಗಲು ಯೋಗಕ್ಷೇಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಿಕ್ಕಮಗಳೂರು ಹಾಗೂ ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ದಂತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕ ಯೋಗಕ್ಷೇಮ ಕೇಂದ್ರ ಚಿಕ್ಕಮಗಳೂರಿನಲ್ಲಿರುವುದು ಹೆಮ್ಮೆಯ ವಿಷಯ. ಕೆಲವು ಪೋಷಕರ ಮಕ್ಕಳು ಈ ಕೇಂದ್ರಕ್ಕೆ ಹೋದರೆ ನಾವು ಹಿರಿಯರನ್ನು ಕಡೆಗಣಿಸುತ್ತಿದ್ದೇವೆ ಎಂದು ಸಮಾಜದಲ್ಲಿ ತಿಳಿದುಕೊಳ್ಳುತ್ತಾರೆಂದು ಕೇಂದ್ರಕ್ಕೆ ಹೋಗಬೇಡಿ ಎನ್ನುವ ಮಕ್ಕಳಿದ್ದಾರೆ ಎಂದು ತಿಳಿಸಿದರು.
ಹಿರಿಯ ನಾಗರಿಕರು ಇದಕ್ಕೆ ಅಂಜಿಕೊಳ್ಳದೆ, ವಯಸ್ಸಾಯಿತೆಂದು ಧೃತಿಗೆಡದೆ ಈ ಕೇಂದ್ರದಲ್ಲಿ ನಿಮ್ಮ ವಯಸ್ಕರಿರುವುದರಿಂದ ಸಂತೋಷದಿಂದ ಕಾಲ ಕಳೆಯಬಹುದು ಎಂದರು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಸುಂದರಗೌಡ ಮಾತನಾಡಿ ಹಿರಿಯ ನಾಗರಿಕರು ದೇಶದ ನಿಜವಾದ ಸಂಪತ್ತು. ಹಿರಿಯರು ಮಾನವೀಯ ಮೌಲ್ಯಗಳನ್ನು ಕಿರಿಯರಲ್ಲಿ ಬೆಳಸಬೇಕಿದೆ. ವ್ಯಕ್ತಿ ಯಾವಾಗ ಆರೋಗ್ಯವಾಗಿರುವುದಿಲ್ಲವೋ ಅವರು ಬೇರೆಯವರಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಪಾಲನೆ ಪೋಷಣೆ ಖಾಯ್ದೆ ಸದಸ್ಯ ಹೆಚ್.ಎನ್.ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಹಾಗೂ ದಂತ ತಪಾಸಣಾ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಮಂಡಲ ಪಂಚಾಯತ್ ಮಾಜಿ ಸದಸ್ಯ ಹಾಲಪ್ಪ ಮಾತನಾಡಿ, ಹಿರಿಯ ನಾಗರಿಕರು ಹೊರಗಡೆ ಕಾಲ ಕಳೆಯುವುದು ತುಂಬಾ ಕಷ್ಟವಾಗಿದ್ದು, ಇಂತಹ ಕೇಂದ್ರಗಳಿಂದ ಹಿರಿಯರಿಗೆ ಸಂತೋಷದಿಂದ ಕಾಲ ಕಳೆಯಲು ಅನುಕೂಲಕರವಾಗಿದೆ ಎಂದು ಹೇಳಿದರು.

ಕೇಂದ್ರದ ನೋಡಲ್ ಅಧಿಕಾರಿ ಆಶಾ ನಾಗರಾಜ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News