ಕೌಟುಂಬಿಕ ಕಲಹದ ಹಿನ್ನೆಲೆ: ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

Update: 2018-07-21 16:05 GMT

ಮೈಸೂರು,ಜು.21: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಅತ್ತಿಗೆ ಮನೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಸಹೋದರನ ಮಾವ ಮೃತಪಟ್ಟು, ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ಉದಯಗಿರಿಯ ಶಾಂತಿನಗರದಲ್ಲಿ ನಡೆದಿದೆ.

ಹಲ್ಲೆ ನಡೆಸಿದ ಸೈಯದ್ ಇರ್ಫಾನ್ ನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಲಂ ಪಾಷಾ ಸಾವನ್ನಪ್ಪಿದ್ದು, ಅವರ ಪತ್ನಿ ದಿಲ್ಶಾದ್ ಬಾನು ಹಾಗೂ ಮಗಳು ನಫೀಝ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ವಿವರ: ಸೈಯದ್ ಸುಹೇಲ್ ನನ್ನು ನಫೀಝ 5 ವರ್ಷಗಳ ಹಿಂದೆ ವಿವಾಹವಾಗಿದ್ದರು. 3 ವರ್ಷಗಳ ಹಿಂದೆ ದಂಪತಿಗಳು ಬೇರೆಯಾಗಿದ್ದರು. ನಂತರ ನಫೀಝ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ ಪರಿಹಾರ ನೀಡದ ಸೈಯದ್ ಸುಹೇಲ್ 80 ಸಾವಿರ ಬಾಕಿ ಉಳಿಸಿಕೊಂಡಿದ್ದ. ಇದರಿಂದಾಗಿ ನಫೀಝ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯದಲ್ಲಿ ಸೈಯದ್ ಸುಹೇಲ್ ಗೆ ಶಿಕ್ಷೆ ಪ್ರಕಟಿಸಲಾಗಿತ್ತು. ಇದರಿಂದ ಸುಹೇಲ್ ಜೈಲು ಸೇರಿದ್ದು, ರೊಚ್ಚಿಗೆದ್ದ ಸುಹೇಲ್ ನ ಸೋದರ ಸೈಯದ್ ಇರ್ಫಾನ್ ತಡರಾತ್ರಿ ಅತ್ತಿಗೆಯ ಮನೆಗೆ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಮೊದಲಿಗೆ ಎದುರಿಗೆ ಬಂದ ಅಣ್ಣನ ಮಾವ ಅಸ್ಲಂ ಪಾಷಾ ಮೇಲೆ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಸ್ಲಾಂ ಪಾಷ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಂತರ ತಡೆಯಲು ಬಂದ ಅತ್ತೆ ದಿಲ್ಶಾನ್ ಬಾನು, ಅತ್ತಿಗೆ ನಫೀಝ ಮೇಲೂ ಇರ್ಫಾನ್ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್ ಇರ್ಫಾನ್ ನನ್ನು ಬಂಧಿಸಲಾಗಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News