ಮೈಸೂರು: ಪಾಲಿಕೆಯವರು ಎಂದು ಮನೆಯಲ್ಲಿದ್ದ ಹಣ ದೋಚಿದ ಖದೀಮರು

Update: 2018-07-21 16:26 GMT

ಮೈಸೂರು,ಜು.21: ನಾವು ಮಹಾನಗರಪಾಲಿಕೆಯವರು ನೀರಿನ ಸಂಪರ್ಕದ ಪೈಪ್ ಗಳನ್ನು ಬದಲಾಯಿಸಲು ಬಂದಿದ್ದು, ಮನೆ ಅಳತೆ ಮಾಡಬೇಕೆಂದು ಯಾಮಾರಿಸಿ ಬೀರುವಿನಲ್ಲಿದ್ದ ಹಣ ದೋಚಿ ಪರಾರಿಯಾದ ಘಟನೆ ಎನ್.ಆರ್.ಮೊಹಲ್ಲಾದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಇತ್ತೀಚೆಗಷ್ಟೇ ಕುವೆಂಪುನಗರದ ಬಸ್ ಡಿಪೋ ಬಳಿ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಬಂದು  ನಗ-ನಗದು ದೋಚಿದ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಘಟನೆ ನಡೆದಿದ್ದು, ನಗರದ ಜನತೆಯ ನಿದ್ದೆಗೆಡಿಸಿದೆ.

ಎನ್.ಆರ್.ಮೊಹಲ್ಲಾದಲ್ಲಿರುವ ಗಣೇಶ ದೇವಸ್ಥಾನದ ರಸ್ತೆ ನಿವಾಸಿ ಶೋಭ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. 

'75,000ರೂ. ಹಣವನ್ನು ತಮ್ಮ ಮನೆಯ ಬೀರುವಿನಲ್ಲಿ ಇಟ್ಟಿದ್ದು, ಹಣದ ಅವಶ್ಯಕತೆ ಇದ್ದುದರಿಂದ ಬೆಳಿಗ್ಗೆ ಬೀರುವನ್ನು ತೆಗೆದು ನೋಡಿದಾಗ ಬೀರುವಿನಲ್ಲಿ ಹಣ ಇರಲಿಲ್ಲ. ನಂತರ ಮನೆಯ ಎಲ್ಲಾ ಕಡೆ ಹುಡುಕಾಡಿ, ತಮ್ಮ ತಾಯಿಯನ್ನು ವಿಚಾರಿಸಿದಾಗ ಜೂ.25ರಂದು ಶೋಭಾ ಮತ್ತು ಅವರ ತಂಗಿ ಕೆಲಸಕ್ಕೆ ಹೋದ ನಂತರ ಯಾರೋ ಇಬ್ಬರು ಅಪರಿಚಿತರು ಮನೆಗೆ ಬಂದು ನಾವು ಕಾರ್ಪೋರೇಷನ್ ನಿಂದ  ಬಂದಿದ್ದು, ನೀರಿನ ಸಂಪರ್ಕದ ಪೈಪ್ ಗಳನ್ನು ಬದಲಾವಣೆ ಮಾಡುತ್ತಿದ್ದೇವೆ. ಮನೆಯನ್ನು ಅಳತೆ ಮಾಡಬೇಕು ಎಂದು ತಿಳಿಸಿ, ಟೆರೆಸ್ ಮೇಲೆ ಕರೆದುಕೊಂಡು ಹೋಗಿ, ತುಂಬಾ ಸಮಯದವರೆಗೆ ಮೇಲೆಯೇ ನಿಲ್ಲಿಸಿಕೊಂಡಿದ್ದು, ಮನೆಯ ಟೆರೆಸ್ ಮೇಲೆ ಮತ್ತು ಒಳಗೆ ಅಳತೆ ಮಾಡಿಕೊಂಡು ಹೋಗಿದ್ದಾರೆ ಎಂದಿದ್ದಾರೆ. ಬಹುಶಃ ಹಣವನ್ನು ಅವರೇ ಕಳ್ಳತನ ಮಾಡಿರಬೇಕೆಂದು ಶಂಕಿಸಲಾಗಿದ್ದು, ಈ ಕುರಿತು ಎನ್ ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News