ಹೊಸ ಆಲೋಚನೆಗಳೊಂದಿಗೆ ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಿ: ಡಿಸಿ ಅಭಿರಾಮ್ ಜಿ.ಶಂಕರ್ ಸೂಚನೆ

Update: 2018-07-21 16:30 GMT

ಮೈಸೂರು,ಜು.21: ಜಂಬೂಸಾವರಿಯನ್ನು ಈ ಬಾರಿ ಇನ್ನೂ ಹೆಚ್ಚು ಆಕರ್ಷಕವಾಗಿ ಆಚರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ. ಹೀಗಾಗಿ ಹೊಸ ಆಲೋಚನೆಗಳೊಂದಿಗೆ ದಸರಾ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ  ಕಚೇರಿ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಹೊಸ ಚಿಂತನೆ ಹಾಗೂ ವಿನೂತನ ಮಿತವ್ಯಯ ಖರ್ಚಿನಲ್ಲಿ ಈ ಬಾರಿಯ ದಸರಾ ಆಚರಿಸಲು ಅಧಿಕಾರಿಗಳು ಬೇಕಿರುವ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಿ. ದಸರಾ-2018 ರ ಕಾರ್ಯಕಾರಿ ಸಮಿತಿ ಸಭೆ ನಡೆದ ನಂತರ ಉಪಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.

ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತ್ ಕಾರ್ಯಕ್ರಮದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ವಿಶಿಷ್ಟ ಹಾಗೂ ವಿಭಿನ್ನವಾಗಿರಲಿ. ನೃತ್ಯದೊಂದಿಗೆ ಜೂಡೋ, ಮಾರ್ಷಲ್ ಆರ್ಟ್ಸ್ ಬಳಸಿಕೊಂಡು ಕಾರ್ಯಕ್ರಮ ನಡೆಸಬಹುದು. ಅದರ ಬಗ್ಗೆಯೂ ಹೆಚ್ಚು ಗಮನಹರಿಸುವಂತೆ ಹೇಳಿದರು.

ಕಾಮನ್ ವೆಲ್ತ್ ಕ್ರೀಡೆ ಹಾಗೂ ಇನ್ನಿತರ ಕ್ರೀಡಾ ಕೂಟದಲ್ಲಿ ಫೈರೋ ಟೆಕ್ನಿಷಿಯನ್‍ಗಳು ಹೊಗೆ ರಹಿತ ಪರಿಸರ ಸ್ನೇಹಿ ವಿದ್ಯುನ್ಮಾನ ಪಟಾಕಿಗಳನ್ನು ಬಳಸುತ್ತಾರೆ. ಇದನ್ನು ಈ ಬಾರಿ ಪಂಜಿನ ಕವಾಯತ್‍ನಲ್ಲಿ ಬಳಸಿಕೊಳ್ಳಬಹುದು. ಈ ರೀತಿಯ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ದಸರಾ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರವಾಸಿಗರು ಭಾಗವಹಿಸಲು ಕಾರ್ಯಕ್ರಮವನ್ನು ರೂಪಿಸಿಕೊಂಡು ದಸರಾದ 15 ದಿನ ಮೊದಲು ಆಹ್ವಾನ ಪತ್ರಿಕೆಗಳು ಸಿದ್ಧಗೊಂಡು ವಿತರಣೆಯಾಗಬೇಕು. ಇದಕ್ಕಾಗಿ ಕಾರ್ಯಕ್ರಮ ಯೋಜನೆಗಳ ರೂಪು ರೇಷುಗಳನ್ನು ಸಿದ್ಧಮಾಡಿಕೊಳ್ಳಿ ಎಂದರು.

ದಸರಾ ದೀಪಾಲಂಕಾರದ ಸಂದರ್ಭದಲ್ಲಿ ಮರಗಳಿಗೆ ಹಾಗೂ ಪಕ್ಷಿಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ. ದೀಪಾಲಂಕಾರದಿಂದ ಯಾವುದೇ ಜೀವಕ್ಕೂ ತೊಂದರೆಯಾಗದಂತೆ ಪರಿಸರ ಸ್ನೇಹಿ ದೀಪಾಲಂಕಾರ ಮಾಡುವಂತೆ ತಿಳಿಸಿದರು. ದಸರಾ ಚಲನಚಿತ್ರೋತ್ಸವದಲ್ಲಿ ಕಳೆದ ಬಾರಿ ಚಲನಚಿತ್ರಗಳು ಪ್ರದರ್ಶನಗೊಂಡಿದೆ. ಈ ಬಾರಿ ಕಾರ್ಯಾಗಾರಗಳನ್ನು ಆಯೋಜಿಸಿ, ಪರಿಣಿತರಿಂದ ಚಲನಚಿತ್ರ ನಿರ್ಮಾಣ, ನಿರ್ದೇಶನ, ಸಂಕಲನ ಹಾಗೂ ಛಾಯಗ್ರಾಹಣ ಮುಂತಾದ ವಿಷಯಗಳ ಬಗ್ಗೆ ತಿಳಿಸಿ ಎಂದರು.

ಸಭೆಯಲ್ಲಿ ಜಿ.ಪಂ. ಸಿಇಓ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಮೈಸೂರು ನಗರ ಉಪ ಪೊಲೀಸ್ ಆಯುಕ್ತ ವಿಕ್ರಂ ಅಮ್ಟೆ,  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕಾಂತರಾಜು, ಮೈಸೂರು ಮಹಾನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಸೇರಿದಂಗೆ ಇನ್ನಿತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News