10,500 ಅತಿಥಿ ಉಪನ್ಯಾಸಕರ ಮರು ನೇಮಕ: ಸಚಿವ ಜಿ.ಟಿ ದೇವೇಗೌಡ

Update: 2018-07-21 16:33 GMT

ಮೈಸೂರು,ಜು.21: ರಾಜ್ಯದ ಎಲ್ಲಾ ಕಾಲೇಜುಗಳಿಗೆ 10,500 ಮಂದಿ ಅತಿಥಿ ಉಪನ್ಯಾಸಕರನ್ನು ಮರು ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾವರ್ಧಕ ಸಂಘದ 40ನೇ ವರ್ಷದ ಸಂಭ್ರಮಾಚರಣೆಯನ್ನು ಶನಿವಾರ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ 102 ಪದವಿ ಕಾಲೇಜುಗಳಿಗೆ ಸ್ವಂತ ಕಟ್ಟಡಗಳಿಲ್ಲ. ಇರುವ ಕಾಲೇಜು ಕಟ್ಟಡಗಳಲ್ಲೂ ಮೂಲಭೂತ ಸೌಕರ್ಯಕಗಳ ಕೊರತೆಯಿದೆ. 395 ಪ್ರಾಂಶುಪಾಲರ ಹುದ್ದೆಗಳು ಖಾಲಿಯಿದ್ದು ಶೀಘ್ರದಲ್ಲಿ ಭರ್ತಿಮಾಡಲಾಗುವುದು. ಹಿಂದಿನ ಸರಕಾರ ಇತ್ತ ಗಮನ ಹರಿಸಿದ್ದರೆ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಹೇಳಿದರು.

ಸದ್ಯದಲ್ಲೇ ಈ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಒಟ್ಟು 10,500 ಅತಿಥಿ ಉಪನ್ಯಾಸಕರನ್ನು ಮರು ನೇಮಕ ಮಾಡಿಕೊಳ್ಳವುದಾಗಿ ತಿಳಿಸಿದರು.

ಉನ್ನತ ಶಿಕ್ಷಣ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸುವ ಆತ್ಮವಿಶ್ವಾಸವಿದೆ. ನನಗೆ ಉನ್ನತ ಶಿಕ್ಷಣ ಖಾತೆ ಇಷ್ಟವಿರಲಿಲ್ಲ. ಕಂದಾಯ, ಗ್ರಾಮೀಣಾಭಿವೃದ್ದಿ, ಸಹಕಾರ ಖಾತೆ ಪಡೆಯುವ ಇಚ್ಛೆಯಿತ್ತು. ಹಾಗಾಗಿ ಉನ್ನತ ಶಿಕ್ಷಣ ಖಾತೆ ನೀಡಿದಾಗ 20 ದಿನಗಳಾದರೂ ಖಾತೆ ವಹಿಸಿಕೊಂಡಿರಲಿಲ್ಲ. ಆದರೆ ಮನದ ಇಚ್ಛೆಯ ಬದಲು ದೈವೇಚ್ಛೆಯಂತೆ ಉನ್ನತ ಶಿಕ್ಷಣ ಖಾತೆಯೇ ಲಭಿಸಿತು. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಟಿಯು ಕಾಲೇಜಿನ ಸಮಾರಂಭದಲ್ಲಿ ಭಾಗಿಯಾದ ವೇಳೆ ಹಲವಾರು ಮಂದಿ ಶಿಕ್ಷಣ ತಜ್ಞರು, ನೀವೇ ಉನ್ನತ ಶಿಕ್ಷಣ ಖಾತೆ ನಿಭಾಯಿಸಿ, ನಿಮಗೆ ಈ ಖಾತೆಯನ್ನು ನಿಭಾಯಿಸುವ ಶಕ್ತಿಯಿದೆ ಎಂದು ಸಲಹೆ ನೀಡಿದ್ದರು. ಹಾಗಾಗಿ ಉನ್ನತ ಶಿಕ್ಷಣ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸುವ ಆತ್ಮ ವಿಶ್ವಾಸ ಮೂಡಿದೆ  ಎಂದು ಹೇಳಿದರು.

ಈ ಸಂದರ್ಭ ವಿಧಾನಪರಿಷತ್ತಿನ ಉಪ ಸಭಾಪತಿ ಮರಿತಿಬ್ಬೇಗೌಡ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್ , ಖಜಾಂಚಿ ಶ್ರೀಶೈಲ ರಾಮಣ್ಣವರ, ಛೇರ್ಮನ್ ನಾಗರಾಜು, ಪ್ರಾಂಶುಪಾಲ ಮರಿಗೌಡ ಮತ್ತಿತರರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News