ಮೈಸೂರು: ಉಚಿತ ಬಸ್ ಪಾಸ್‍ಗೆ ಒತ್ತಾಯಿಸಿ ಶಾಲಾ-ಕಾಲೇಜ್ ಬಂದ್ ಮಾಡಿ ಪ್ರತಿಭಟನೆ

Update: 2018-07-21 16:36 GMT

ಮೈಸೂರು,ಜು.21: ಉಚಿತ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಸ್ವಯಂ ಪ್ರೇರಿತ ಶಾಲಾ ಕಾಲೇಜುಗಳ ಬಂದ್‍ಗೆ ಮೈಸೂರಿನಲ್ಲಿ ಬೆಂಬಲ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳು ಶಾಲಾ ಕಾಲೇಜು ಬಂದ್ ಮಾಡಿ ಪ್ರತಿಭಟಿಸಿದರು.

ನಗರದ ರಾಮಸ್ವಾಮಿ ವೃತ್ತದಲ್ಲಿ ಶನಿವಾರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್,ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್, ಮೈಸೂರು ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಸ್ವಯಂ ಪ್ರೇರಿತ ಶಾಲಾ ಕಾಲೇಜು ಬಂದ್ ನಡೆಸಿ ನ್ಯಾಯವೊದಗಿಸುವಂತೆ ವಿದ್ಯಾರ್ಥಿಗಳು ಘೋಷಣೆ ಕೂಗಿದರು.

ನಾಲ್ಕು ವರ್ಷಗಳಿಂದ ಸತತ ಬರ, ಬೆಲೆಯೇರಿಕೆ, ನೋಟು ರದ್ಧತಿಯಿಂದಾಗಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಹಿಂದಿನ ಸರ್ಕಾರ ಬಜೆಟ್ ನಲ್ಲಿ ಎಲ್ಲರಿಗೂ ಉಚಿತ ಬಸ್ ಪಾಸ್ ಘೋಷಿಸಿತ್ತು. ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಕೂಡ ಉಚಿತ ಬಸ್ ಪಾಸ್ ಜಾರಿಗೆ ಭರವಸೆ ನೀಡಿದ್ದರು. ಹಿಂದಿನ ಎಲ್ಲಾ ಬಜೆಟ್ ಘೋಷಣೆಗಳನ್ನು ಮುಂದುವರಿಸಿರುವುದರ ಕುರಿತು ಮುಖ್ಯಮಂತ್ರಿಗಳು ಮಂಡಿಸಿದ ಮುಂಗಡಪತ್ರದಲ್ಲಿದೆ. ಆದರೆ ಇಲ್ಲಿಯವರೆಗೆ ಉಚಿತ ಬಸ್ ಪಾಸ್ ಬಗ್ಗೆ ಸ್ಪಷ್ಟ ನಿರ್ಧಾರವಾಗಲೂ ಇಲ್ಲ. ಜಾರಿಯೂ ಆಗಲಿಲ್ಲ. ಇದರಿಂದ 2 ತಿಂಗಳಿನಿಂದ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ತೀವ್ರ ಆಘಾತವಾಗಿದೆ. ರಾಜ್ಯ ಸರ್ಕಾರ ನಮ್ಮನ್ನು ವಂಚಿಸಿದೆ. ರೈತರ ಪರ ಎಂದು ಹೇಳಿಕೊಳ್ಳುವ ಸರ್ಕಾರ ರೈತರ ಮಕ್ಕಳಿಗೆ ಅನ್ಯಾಯ ಮಾಡಿದೆ. ವಿದ್ಯಾರ್ಥಿಗಳು ಈ ಹಿಂದೆ ಪ್ರತಿಭಟನೆ ನಡೆಸಿದರೂ ಭರವಸೆ ನೀಡಿದರೇ ಹೊರತು ಜಾರಿಮಾಡಲಿಲ್ಲ. ಅದಕ್ಕಾಗಿ ಇಂದು ಎಲ್ಲ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಕಾಲೇಜು ತರಗತಿಗಳನ್ನು ಬಹಿಷ್ಕರಿಸಿದ್ದು, ಮಾತು ತಪ್ಪಿದ ಸರ್ಕಾರವನ್ನು ಎಚ್ಚರಿಸಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಮಹಾರಾಜ ಪದವಿ, ಯುವರಾಜ, ಮಹಾರಾಜ ಪಿಯು, ಮಹಾರಾಣಿ ಕಾಲೇಜು, ವಿದ್ಯಾವರ್ಧಕ ಸೇರಿದಂತೆ ಅನೇಕ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಧ್ಯಾ ಪಿಎಸ್, ಸೀಮಾ ಜಿ.ಎಸ್, ಬಸವರಾಜು, ಆಕಾಶ್ ಕುಮಾರ್, ಬಿ.ಎಸ್,ಆಸೀಯಾ ಬೇಗಂ, ಸುನೀಲ್ ಟಿ.ಆರ್, ಸುಮ, ಕಲಾವತಿ ಸೇರಿದಂತೆ ಸಹಸ್ರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News