ಮಡಿಕೇರಿ: ಮಳೆಹಾನಿ ನಡುವೆಯೇ ಕಾಡಾನೆಗಳ ಉಪಟಳಕ್ಕೆ ಬೆಳೆಗಾರರು ಕಂಗಾಲು

Update: 2018-07-21 17:21 GMT

ಮಡಿಕೇರಿ, ಜು.21: ಭಾರೀ ಗಾಳಿ ಮಳೆಯ ಸಂಕಷ್ಟದ ನಡುವೆಯೇ ಕೃಷಿಕ ಸಮೂಹ ಕಾಡಾನೆ ಹಾವಳಿಯಿಂದ ಬಸವಳಿದಿದ್ದು, ಮೂರ್ನಾಡು ಸಮೀಪದ ಹಾಲುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಮಕ್ಕಿ ಗ್ರಾಮದ ಭತ್ತ ಮತ್ತು ಕಾಫಿ ಕೃಷಿ ಕಾಡಾನೆಗಳಿಂದ ಧ್ವಂಸ ಗೊಂಡಿವೆ.

ಕಾವೇರಿ ನದಿಪಾತ್ರದ ಕೊಂಡಂಗೇರಿಯಿಂದ ವೀರಾಜಪೇಟೆಗೆ ತೆರಳುವ ಮಾರ್ಗದ ನಡುವೆ ಬರುವ ಬಟ್ಟೆಮಕ್ಕಿ ಕಾಡಾನೆ ಹಾವಳಿಗೆ ಒಳಗಾಗುವ ಪ್ರದೇಶವಲ್ಲ. ಹೀಗಿದ್ದೂ ಕಳೆದ ವಾರದಿಂದ ಅಂದಾಜು ಮೂರರಿಂದ ನಾಲ್ಕು ಆನೆಗಳ ಹಿಂಡೊಂದು ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸುತ್ತಾ, ಕೃಷಿ ಭೂಮಿ ಮತ್ತು ತೋಟಗಳಿಗೆ ದಾಳಿ ನಡೆಸುತ್ತಿದ್ದು, ಗ್ರಾಮೀಣರ ನಿದ್ದೆಗೆಡಿಸಿದೆ.

ನಾಟಿಗೆ ಪೈರೇ ಇಲ್ಲದ ಸ್ಥಿತಿ: ಬಟ್ಟೆಮಕ್ಕಿ ಗ್ರಾಮದ ಸುಬ್ರಾಯ, ದಿವಾಕರ್, ರವೀಂದ್ರ, ರಾಮಮೂರ್ತಿ ಸೇರಿದಂತೆ ಹಲ ಗ್ರಾಮಸ್ಥರು ತಮ್ಮ ಗದ್ದೆಗಳಲ್ಲಿ ಸಜ್ಜುಗೊಳಿಸಿದ್ದ ಸಸಿ ಮಡಿಗಳು ಕಾಡಾನೆಗಳ ದಾಳಿಗೆ ಸಿಲುಕಿ ನಜ್ಜುಗುಜ್ಜಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಾಟಿ ಕಾರ್ಯ ನಡೆಸಬೇಕಿತ್ತಾದರೂ, ಕಾಡಾನೆಗಳಿಂದ ಸಸಿ ಮಡಿಗಳು ನೆಲಕಚ್ಚಿದ್ದು, ನಾಟಿಗೆ ಪೈರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಫಿ, ಬಾಳೆಗೆ ಕುತ್ತು- ಬಟ್ಟೆಮಕ್ಕಿ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಉಪಟಳದಿಂದ, ಕಾಫಿ ಗಿಡಗಳು ಮುರಿದು ಹಾಳಾಗಿದ್ದರೆ, ಬಾಳೆ ಸೇರಿದಂತೆ ವಿವಿಧ ಉಪ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಗ್ರಾಮಸ್ಥರು ಮತ್ತು ಕಾರ್ಮಿಕರು ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸಲು ಆತಂಕ ಪಡುವಂತಾಗಿದೆ.

ಸಮಸ್ಯೆ ಬಗೆಹರಿಕೆಗೆ ಆಗ್ರಹ: ಗ್ರಾಮ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಗ್ರಾಮ ವ್ಯಾಪ್ತಿಯಿಂದ ಅಟ್ಟಲು ಅರಣ್ಯ ಇಲಾಖೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಕೃಷಿ ಹಾನಿಗೆ ಅಗತ್ಯ ಪರಿಹಾರ ಒದಗಿಸಲು ಸರ್ಕಾರ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚೆಟ್ಟಳ್ಳಿಯಲ್ಲೂ ಕಾಡಾನೆ ಉಪಟಳ

ಚೇರಳ ಶ್ರೀಮಂಗಲ ಗ್ರಾಮ ಚೆಟ್ಟಳ್ಳಿಯ ಪೇರಿಯನ ಉದಯ ಹಾಗೂ ಪೇರಿಯ ಪ್ರಕಾಶ್ ಎಂಬವರ ಕಾಫಿ ತೋಟದಲ್ಲಿ 3ರಿಂದ 4 ಕಾಡಾನೆಗಳು ಕಾಣಿಸಿಕೊಂಡಿವೆ. ಕಾಫಿ, ಅಡಿಕೆ ಸೇರಿದಂತೆ ಹಲವು ಬಗೆಯ ಹಣ್ಣಿನ ಗಿಡಗಳು, ಬಾಳೆ ಗಿಡಗಳನೆಲ್ಲ ನಾಶಪಡಿಸಿದ್ದು, ಸುಮಾರು 1 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ತೋಟದ ಮಾಲಿಕರು ತಿಳಿಸಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕಾಡಾನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News