ಸೋಮವಾರಪೇಟೆ-ವಿರಾಜಪೇಟೆ ರಸ್ತೆ ಮೇಲ್ದರ್ಜೆಗೆ: ಅನುದಾನ ಬಿಡುಗಡೆಗೆ ಶಾಸಕ ಅಪ್ಪಚ್ಚು ರಂಜನ್ ಒತ್ತಾಯ

Update: 2018-07-21 17:24 GMT

ಮಡಿಕೇರಿ, ಜು.21: ಹೊಳೆನರಸಿಪುರ-ಅರಕಲಗೋಡು-ಸೋಮವಾರಪೇಟೆ-ವಿರಾಜಪೇಟೆ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಕೆಷಿಫ್ ನಿಂದ ಡಿ.ಪಿ.ಆರ್ ಆಗಿದ್ದು, ಈ ರಸ್ತೆ ಸೋಮವಾರಪೇಟೆ-ಮಡಿಕೇರಿ-ವಿರಾಜಪೇಟೆ ತಾಲೂಕು ಮೂಲಕ ಹಾದು ಹೋಗುತ್ತದೆ. ಈ ವ್ಯಾಪ್ತಿಯ ಜನರ ಅನುಕೂಲಕ್ಕಾಗಿ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಅಗಲೀಕರಣಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ಅವರು ಕೋರಿದ್ದಾರೆ.  

ಕೊಡಗು ಜಿಲ್ಲೆಯಲ್ಲಿನ ಹೆಚ್ಚಿನ ರಸ್ತೆಗಳು ಮತ್ತು ಸೇತುವೆಗಳು ಇತ್ತೀಚೆಗೆ ಬಿದ್ದ ಮಳೆಯಿಂದ ಹಾನಿಯಾಗಿರುವುದರಿಂದ ವಿಶೇಷವಾಗಿ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಒಂದು ಸಾವಿರ ಕೋಟಿ ಅನುದಾನ ನೀಡುವಂತೆ ಶಾಸಕರು ಮನವಿ ಮಾಡಿದ್ದಾರೆ. 

ಕೊಡಗಿನ ರೈತರು ಈಗಾಗಲೇ ಕಾಫಿ ಮತ್ತು ಕರಿಮೆಣಸಿನ ಬೆಲೆಯು ಕಡಿಮೆಯಾಗಿದ್ದ ಪರಿಣಾಮ ಕಂಗಾಲಾಗಿದ್ದು, ಚೇತರಿಸಿಕೊಳ್ಳಲು ಶ್ರಮಿಸುತ್ತಿರುವ ಬೆನ್ನಲೇ ಈಗ ಬಿದ್ದ ಮಳೆಯಿಂದ ಕಾಫಿ ಮತ್ತು ಕರಿಮೆಣಸು ಸಂಪೂರ್ಣ ನಾಶ ಹೊಂದುತ್ತಿದ್ದು, ರೈತರು ಜೀವನ ನಡೆಸುವುದೇ ದುಸ್ತರವಾಗಿದೆ. ಆದ್ದರಿಂದ ಮಳೆಯಿಂದ ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡಬೇಕು ಎಂದು ತಿಳಿಸಿದರು. 

ಕೂಡಿಗೆಯಲ್ಲಿ ಈ ಹಿಂದೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಮಿನಿವಿಮಾನ ನಿಲ್ದಾಣಕ್ಕೆ ಜಾಗವನ್ನು ಗುರುತಿಸಿರುವುದರಿಂದ ಈ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ಮಂಜೂರು ಮಾಡಬೇಕಾಗಿ ಕೋರಿದರು. ಕೊಡಗಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಇದರಿಂದ ರೈತರ ವ್ಯವಸಾಯದ ಜಮೀನಿನಲ್ಲಿ ಬೆಳೆದ ಬೆಳೆ ನಷ್ಟವಾಗುವುದಲ್ಲದೆ ರೈತರ ಮೇಲೆ ಆಗಿಂದಾಗ್ಗೆ ದಾಳಿ ನಡೆಸುತ್ತಿರುವುದರಿಂದ ಕಾಡಾನೆ ತಡೆಗೆ ಕಂದಕ ನಿರ್ಮಾಣ, ಇಲ್ಲವೇ ಸೋಲಾರ್ ನಿರ್ಮಾಣ ಮಾಡಲು ಕ್ರಮವಹಿಸಬೇಕು ಎಂದರು.

ಈಗಾಗಲೇ ಸಮಾಜ ಕಲ್ಯಾಣ ಬಿ.ಸಿ.ಎಂ ಇಲಾಖೆಯಲ್ಲಿ ಅಡುಗೆಯವರು ಮತ್ತು ಅಡುಗೆ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚಿಗೆ ಈ ಹುದ್ದೆಗಳಿಗೆ ಸರ್ಕಾರದಿಂದ ಹೊಸದಾಗಿ ಸಿಬ್ಬಂದಿಗಳನ್ನು ನೇಮಿಸಿದ್ದರಿಂದ, ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಇಂತವರಿಗೆ ತಾತ್ಕಾಲಿಕ ಸಿಬ್ಬಂದಿಗಳನ್ನು ನೇಮಕ ಮಾಡಲು ಕ್ರಮವಹಿಸಬೇಕೆಂದು ಅಪ್ಪಚ್ಚುರಂಜನ್ ಅವರು ಮನವಿ ಪತ್ರದಲ್ಲಿ ಕೋರಿದ್ದಾರೆ. 

ಕೊಡಗು ಜಿಲ್ಲೆಯಲ್ಲಿ ನಡೆಯುವ ದಸರಾ ಉತ್ಸವಕ್ಕೆ ಮೈಸೂರಿಗೆ ನೀಡುವಂತೆ ವಿಶೇಷ ಅನುದಾನವನ್ನು ಮೀಸಲಿಡಬೇಕು ಎಂದು ತಿಳಿಸಿದರು. ಕೊಡಗಿನ ರೈತರ ಪ್ರಮುಖ ಬೇಡಿಕೆಯಾದ ಜಮ್ಮಾ ಹಕ್ಕು ಯೋಜನೆಯನ್ನು ಜಾರಿಗೆ ತರುವ ಮೂಲಕ ಕಂದಾಯ ಭೂಮಿಯನ್ನಾಗಿ ಪರಿವರ್ತಿಸಬೇಕು. ಕೊಡಗು ಜಿಲ್ಲೆಗೆ ರಾಜ್ಯ, ರಾಷ್ಟ್ರ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಿಂದಲೂ ಸಹ ಪ್ರವಾಸಿಗರು ಆಗಮಿಸುತ್ತಿದ್ದು ಜಿಲ್ಲೆಯ ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿ ಪಡಿಸಿ ಮೂಲಭೂತ ಸೌಲಭ್ಯ ಕಲ್ಪಿಸುವ ದೃಷ್ಠಿಯಿಂದ ಜಿಲ್ಲೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು. 

ಸರ್ಕಾರಿ ಆಸ್ಪತ್ರೆಗಳ ವೈದ್ಯರ ಕೊರತೆ ಸೇರಿದಂತೆ ಜಿಲ್ಲೆಯ ಸರ್ಕಾರಿ ಇಲಾಖೆಗಳಲ್ಲಿ ಶೇ.50 ಕ್ಕಿಂತಲೂ ಹೆಚ್ಚು ಸಿಬ್ಬಂದಿಗಳ ಕೊರತೆ ಇರುವುದರಿಂದ ಸರ್ಕಾರಿ ಕೆಲಸಗಳು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಆಗದೆ ತೊಂದರೆಯಾಗಿರುವುದರಿಂದ ಸರ್ಕಾರಿ ಕಚೇರಿಯಲ್ಲಿನ ಸಿಬ್ಬಂದಿಗಳ ನೇಮಕಾತಿ ಮಾಡಬೇಕು ಎಂದರು. 

ಮಡಿಕೇರಿಯ ರಾಜರ ಕೋಟೆ ಈ ಹಿಂದೆ ಸರ್ಕಾರಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಇತರೆ ಕಚೇರಿಗಳು ಇಲ್ಲಿಂದ ಜಿಲ್ಲಾಧಿಕಾರಿಗಳ ಹೊಸ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿದ್ದು, ಇನ್ನು ಕೆಲವೇ ಕಚೇರಿಗಳು ಮಾತ್ರ ಕೋಟೆಯಲ್ಲಿದ್ದು, ಇಲ್ಲಿನ ಕೋಟೆಯು ಮಳೆಯಿಂದ ಶಿಥಿಲಗೊಳ್ಳುತ್ತಿದ್ದು, ತ್ವರಿತವಾಗಿ ಈ ಕೋಟೆಯನ್ನು ದುರಸ್ತಿಪಡಿಸಿದ್ದಲ್ಲಿ ಪುರಾತನವಾದ ಕೋಟೆಯು ಉಳಿಯುವುದರಿಂದ ಕೋಟೆಯ ದುರಸ್ತಿಗೆ ವಿಶೇಷ ಅನುದಾನ ನೀಡಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News