'ಸ್ಮಾರ್ಟ್ ಸಿಟಿ' ಯೋಜನೆಯ ನೂರಾರು ಕೋಟಿ ರೂ. ಮೊತ್ತದ ಕಾಮಗಾರಿ ನಿರ್ವಹಣೆಗೆ ಸಿಗದ ಗುತ್ತಿಗೆದಾರರು !

Update: 2018-07-21 17:36 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಜು. 21: ಸರ್ವೇ ಸಾಮಾನ್ಯವಾಗಿ ಸರ್ಕಾರಿ ಕಾಮಗಾರಿಗಳ ನಿರ್ವಹಣೆಗೆ ಗುತ್ತಿಗೆದಾರರ ನಡುವೆ ತೀವ್ರ ಪೈಪೋಟಿ ಕಂಡುಬರುತ್ತದೆ. ಕೋಟ್ಯಾಂತರ ರೂ. ಮೊತ್ತದ ಕಾಮಗಾರಿಗಳನ್ನು ತಮ್ಮದಾಗಿಸಿಕೊಳ್ಳಲು ಕೆಲ ಗುತ್ತಿಗೆದಾರರು ಸಾಕಷ್ಟು ಲಾಬಿ, ನಾನಾ ರೀತಿಯ ತಂತ್ರಗಾರಿಕೆ, ಪ್ರಭಾವ ಬಳಸುವುದು ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ. 

ಆದರೆ ಶಿವಮೊಗ್ಗ ನಗರದಲ್ಲಿ ಮಾತ್ರ ಇದಕ್ಕೆ ತದ್ವಿರುದ್ದ ಸ್ಥಿತಿ ಕಂಡುಬರುತ್ತಿದೆ. ಹೌದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ 'ಸ್ಮಾರ್ಟ್ ಸಿಟಿ' ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತಿರುವ ನೂರಾರು ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಗುತ್ತಿಗೆದಾರರೇ ಸಿಗುತ್ತಿಲ್ಲ. ಇದು, ವಿಚಿತ್ರವಾದರೂ ಅಕ್ಷರಶಃ ಸತ್ಯವಾಗಿದೆ.

ಗುತ್ತಿಗೆದಾರರ ನಿರಾಸಕ್ತಿಯ ಕಾರಣದಿಂದ, ಈಗಾಗಲೇ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಕಾಲಮಿತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗದೆ 'ಸ್ಮಾರ್ಟ್ ಸಿಟಿ' ಯೋಜನೆ ಅಧಿಕಾರಿಗಳು ತಡಬಡಾಯಿಸುವಂತಾಗಿದೆ. ಕೇಂದ್ರ-ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೂ ತುತ್ತಾಗುವಂತಾಗಿದೆ. ಜೊತೆಗೆ ರಾಜಕಾರಣಿಗಳ ಆರೋಪಗಳ ದಾಳಿಗೂ ಸಿಲುಕುವಂತಾಗಿದೆ. ಗುತ್ತಿಗೆದಾರರನ್ನು ಆಕರ್ಷಿಸುವ ಉದ್ದೇಶದಿಂದ, ಪುನಾರಾವರ್ತಿ ಟೆಂಡರ್ ನಡೆಸುತ್ತಿದ್ದಾರೆ. ಇದರ ಜೊತೆಗೆ ಗುತ್ತಿಗೆದಾರರ ಸಭೆ ನಡೆಸಿ, 'ಸ್ಮಾರ್ಟ್ ಸಿಟಿ' ಯೋಜನೆಯ ಟೆಂಡರ್ ಗೆ ಭಾಗಿಯಾಗುವಂತೆ ಹಾಗೂ ಕಾಮಗಾರಿ ನಿರ್ವಹಿಸುವಂತೆ ಮನವಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲದರ ಹೊರತಾಗಿಯೂ ಹಲವು ಕಾಮಗಾರಿಗಳ ನಿರ್ವಹಣೆಗೆ ಗುತ್ತಿಗೆದಾರರೇ ಬರುತ್ತಿಲ್ಲದಿರುವುದು, ಅಧಿಕಾರಿಗಳ ನಿದ್ದೆಗೆಡುವಂತೆ ಮಾಡಿದೆ. 

ಬರುತ್ತಿಲ್ಲ: ಕೇಂದ್ರ ಸರ್ಕಾರದ ಪ್ರತಿಷ್ಠಿತ 'ಸ್ಮಾರ್ಟ್ ಸಿಟಿ' ಯೋಜನೆಗೆ ಬೆಂಗಳೂರು, ಮೈಸೂರಿನಂತಹ ನಗರಗಳನ್ನು ಹಿಂದಿಕ್ಕಿ ಶಿವಮೊಗ್ಗ ನಗರ ಆಯ್ಕೆಯಾಗುವ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಯೋಜನೆಯಡಿ ಕೇಂದ್ರ - ರಾಜ್ಯ ಸರ್ಕಾರದಿಂದ ಸಾವಿರ ಕೋಟಿ ರೂ. ಅನುದಾನದ ಹೊಳೆಯೇ ಹರಿದು ಬರಲಿದ್ದು, ಇಡೀ ನಗರದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ ಎಂದು ಅಧಿಕಾರಸ್ಥರು ಹೇಳಿದ್ದರು. ಇದರಿಂದ ಈ ಯೋಜನೆಯು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಮತ್ತೊಂದೆಡೆ ಯೋಜನೆಯ ಕಾಮಗಾರಿಗಳ ಅನುಷ್ಠಾನಕ್ಕೆ ಪ್ರತ್ಯೇಕ ಕಚೇರಿ, ಅಧಿಕಾರಿಗಳ ತಂಡ ನಿಯೋಜಿಸಲಾಗಿತ್ತು. ಅಧಿಕಾರಿಗಳು ಹಗಲಿರುಳು ಶ್ರಮವಹಿಸಿ ಯೋಜನೆಯಡಿ ಅನುಷ್ಠಾನ ಮಾಡಬೇಕಾದ ಕಾಮಗಾರಿಗಳ ಸಮಗ್ರ ಪಟ್ಟಿ ಸಿದ್ದಪಡಿಸಿದ್ದರು. ಯಾವ ರೀತಿಯ ಕಾಮಗಾರಿಗಳ ನಿರ್ವಹಣೆ ಮಾಡಬೇಕು ಎಂಬಿತ್ಯಾದಿ ನೀಲನಕ್ಷೆ ರೂಪಿಸಿದ್ದರು. 

ಈ ನಡುವೆ ಕೇಂದ್ರ ಸರ್ಕಾರದಿಂದ ಸುಮಾರು 230 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆಯಾಗಿತ್ತು. ಈ ಅನುದಾನಕ್ಕೆ ಅನುಗುಣವಾಗಿ ಅಧಿಕಾರಿಗಳು ಕಾಮಗಾರಿಗಳ ಪಟ್ಟಿ ಸಿದ್ದಪಡಿಸಿ, ಅರ್ಹ ಗುತ್ತಿಗೆದಾರರಿಂದ ಇ-ಪ್ರಕ್ಯೂರ್‍ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಿದ್ದರು. ಆದರೆ ಮುಕ್ಕಾಲು ಪಾಲು ಕಾಮಗಾರಿಗಳಿಗೆ ಯಾವೊಬ್ಬ ಗುತ್ತಿಗೆದಾರರು ಅರ್ಜಿ ಸಲ್ಲಿಸಿರಲಿಲ್ಲ. 

ಕೆಲ ಕಾಮಗಾರಿಗಳಿಗೆ 2-3 ಬಾರಿ ಟೆಂಡರ್ ಆಹ್ವಾನಿಸಿದರೂ ಗುತ್ತಿಗೆದಾರರು ಸಿಕ್ಕಿರಲಿಲ್ಲ. ಮತ್ತೆ ಕೆಲ ಕಾಮಗಾರಿಗಳಿಗೆ ಗುತ್ತಿಗೆದಾರರು ಅರ್ಜಿ ಹಾಕಿದರೂ ಎಸ್.ಆರ್. ದರಕ್ಕಿಂತ ಹೆಚ್ಚಿನ ಮೊತ್ತ ನಮೂದಿಸುತ್ತಿದ್ದರು. ಕೆಲವೊಮ್ಮೆ ಕಾಮಗಾರಿಗಳಿಗೆ ಓರ್ವ ಗುತ್ತಿಗೆದಾರ ಮಾತ್ರ ಅರ್ಜಿ ಹಾಕುತ್ತಿದ್ದರು. ಇದರಿಂದ ಅಧಿಕಾರಿಗಳು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಂತಾಗಿತ್ತು. ಸೂಕ್ತ ಗುತ್ತಿಗೆದಾರರ ಅಲಭ್ಯತೆಯಿಂದ ಕಾಮಗಾರಿ ಕೂಡ ಪ್ರಾರಂಭಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. 

ಮುಂದೇನು?: ಸದ್ಯ 'ಸ್ಮಾರ್ಟ್ ಸಿಟಿ' ಯೋಜನೆಯ ಅಧಿಕಾರಿಗಳೇ ಗುತ್ತಿಗೆದಾರರ ಸಭೆ ನಡೆಸಿ, ಮನವೊಲಿಸುವ ಕೆಲಸ ನಡೆಸುತ್ತಿದ್ದಾರೆ. ಇದರಿಂದ ಕೆಲ ಕಾಮಗಾರಿಗಳ ನಿರ್ವಹಣೆಗೆ ಗುತ್ತಿಗೆದಾರರು ಅರ್ಜಿ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಯೋಜನೆಯ ಅನುಷ್ಠಾನದ ಅಧಿಕಾರಿಯೋರ್ವರು ಅಭಿಪ್ರಾಯಪಡುತ್ತಾರೆ. ಒಟ್ಟಾರೆ ಸರ್ಕಾರಿ ಕಾಮಗಾರಿಗಳ ನಿರ್ವಹಣೆಗೆ ಮುಗಿಬೀಳುವ ಗುತ್ತಿಗೆದಾರರು, 'ಸ್ಮಾರ್ಟ್ ಸಿಟಿ'ಯ ಕೋಟ್ಯಾಂತರ ರೂ. ಮೊತ್ತದ ಕಾಮಗಾರಿಗಳ ನಿರ್ವಹಣೆಗೆ ಆಸಕ್ತಿ ವಹಿಸದಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿಗೆ ಕಾರಣವಾಗಿರುವುದರ ಜೊತೆಗೆ, ಭಾರೀ ಚರ್ಚೆಗೆಡೆ ಮಾಡಿಕೊಟ್ಟಿದೆ. 

'ಗುಣಮಟ್ಟ'ದ ಖಡಕ್ ಎಚ್ಚರಿಕೆ...!
'ಸ್ಮಾರ್ಟ್ ಸಿಟಿ' ಯೋಜನೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರ ಮಾತ್ರವಲ್ಲದೆ ಸ್ಥಳೀಯ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳ ತಂಡ ಕೂಡ ನಿರಂತರವಾಗಿ ಪರಿಶೀಲನೆ ನಡೆಸುತ್ತದೆ. ಗುಣಮಟ್ಟದಲ್ಲಿ ಕೊಂಚ ಹೆಚ್ಚು ಕಡಿಮೆಯಾದರೂ ಗುತ್ತಿಗೆದಾರರಿಗೆ ಸಕಾಲದಲ್ಲಿ ಗುತ್ತಿಗೆ ಮೊತ್ತ ತಲುಪುವುದಿಲ್ಲ. ನಾನಾ ರೀತಿಯ ತನಿಖೆ ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಕೆಲ ಗುತ್ತಿಗೆದಾರರು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ನಿರ್ವಹಣೆಗೆ ಹಿಂದೇಟು ಹಾಕುವಂತಾಗಿದೆ ಎಂದು ಕೆಲ ಮೂಲಗಳು ಹೇಳುತ್ತವೆ. 

ಅಧಿಕಾರಿಗಳ ಸಂಕಷ್ಟ!
ಗುತ್ತಿಗೆದಾರರ ನಿರಾಸಕ್ತಿಯ ಕಾರಣದಿಂದ, ಈಗಾಗಲೇ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಕಾಲಮಿತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗದೆ 'ಸ್ಮಾರ್ಟ್ ಸಿಟಿ' ಯೋಜನೆ ಅಧಿಕಾರಿಗಳು ತಡಬಡಾಯಿಸುವಂತಾಗಿದೆ. ಕೇಂದ್ರ-ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೂ ತುತ್ತಾಗುವಂತಾಗಿದೆ. ಜೊತೆಗೆ ರಾಜಕಾರಣಿಗಳ ಆರೋಪಗಳ 'ದಾಳಿ'ಗೂ ಸಿಲುಕುವಂತಾಗಿದೆ. 

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News