ಪ್ರತಿಯೊಬ್ಬರ ಮನೆ ಆವರಣದಲ್ಲಿ 2 ಸಸಿ ನೆಡಿ: ಶಾಸಕ ಡಿ.ಸಿ.ಗೌರಿಶಂಕರ್

Update: 2018-07-21 17:40 GMT

ತುಮಕೂರು,ಜು.21: ಪ್ರತಿಯೊಬ್ಬರ ಮನೆಯ ಆವರಣದಲ್ಲಿ ಕನಿಷ್ಠ ಎರಡು ಮರಗಳನ್ನು ನೆಟ್ಟು ಆರೋಗ್ಯವಂತ ಪರಿಸರವನ್ನು ನಿರ್ಮಾಣ ಮಾಡಬೇಕೆಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಕರೆ ನೀಡಿದ್ದಾರೆ. 

ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಹೋಬಳಿಯ ಮುಳ್ಳುಕುಂಟೆಯ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಮಹಾತ್ಮಗಾಂಧಿ ನರೇಗ ಯೋಜನೆಯ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಹೊಸ ಬಡಾವಣೆಗಳ ನಿರ್ಮಾಣ ಸೇರಿದಂತೆ ನಗರೀಕರಣದಿಂದಾಗಿ ಮರಗಳನ್ನು ಕತ್ತರಿಸಲಾಗುತ್ತಿದೆ. ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉತ್ತಮ ವಾತಾವರಣ ಮತ್ತು ಮಳೆಯನ್ನು ಪಡೆಯಬೇಕಾದರೆ ಮಕ್ಕಳು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬರು ತಮ್ಮ ಮನೆಯ ಆವರಣದಲ್ಲಿ, ಜಮೀನುಗಳಲ್ಲಿ ಮತ್ತು ತೋಟಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದರು. 

ಕೇವಲ ಒಂದು ದಿನಕ್ಕೆ ವನಮಹೋತ್ಸವ ಸೀಮಿತವಾಗಬಾರದು. ವರ್ಷದ 365 ದಿನಗಳು ವನಮಹೋತ್ಸವ ಆಗಬೇಕು. ಈ ಉತ್ಸವದಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗಿಯಾಗಬೇಕು. ಐದಾರು ವರ್ಷಗಳ ಕಾಲ ಬರಗಾಲ ಬರುವ ಕಾಲ ಬಂದಿದೆ. ಇಂತಹ ಸಂದರ್ಭದಲ್ಲಿ ಎಲ್ಲೆಡೆ ಮರಗಳನ್ನು ನೆಡಬೇಕು. ಈ ಮೂಲಕ ಮಲೆನಾಡನ್ನು ನಿರ್ಮಿಸಿ ತಂಪಾದ ವಾತಾವರಣ ಸೃಷ್ಟಿಸಬೇಕು. ಇದಕ್ಕೆ ಎಲ್ಲರೂ ಇಚ್ಚಾಶಕ್ತಿ ಪ್ರದರ್ಶಿಸಬೇಕೆಂದು ತಿಳಿಸಿದರು. 

ಏತ ನೀರಾವರಿಯಲ್ಲಿ 1 ಟಿಎಂಸಿ ನೀರು ಬೇಕು: ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು 300 ಎಂಸಿಎಫ್‍ಟಿ ನೀರು ಲಭ್ಯವಾಗಲಿದೆ. ಈ ನೀರು ಸಾಕಾಗುವುದಿಲ್ಲ ಎಂದ ಶಾಸಕರು, ತುಮಕೂರು ತಾಲೂಕಿನ ಗೂಳೂರು-ಹೆಬ್ಬೂರು ಕೆರೆ ಸೇರಿದಂತೆ ಆ ಭಾಗದ ಕೆರೆಗಳನ್ನು ತುಂಬಿಸಲು ಕನಿಷ್ಠ 1 ಟಿಎಂಸಿ ನೀರು ಬೇಕಾಗುತ್ತದೆ. 1 ಟಿಎಂಸಿ ನೀರು ಒದಗಿಸುವಂತೆ ಕೋರಿ ಬರುವ ಸೋಮವಾರ ಅಥವಾ ಮಂಗಳವಾರ ಮುಖ್ಯಮಂತ್ರಿಗಳನ್ನು ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯತಿ ಸಿಇಓ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಪ್ರತಿ ವರ್ಷ ವನ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ಈ ಭಾರಿ ವಿಶೇಷವಾಗಿ ಆಚರಿಸಲಾಗುತ್ತಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಜಿಲ್ಲೆಯಲ್ಲಿ ನೆಡಲು ಗುರಿ ಹೊಂದಲಾಗಿದೆ. ಈ ಉತ್ಸವವು ಇಂದಿನಿಂದ 10 ದಿನಗಳ ಕಾಲ ನಡೆಯಲಿದೆ. ಉತ್ಸವವು ಕೇವಲ ಸರಕಾರದ ಇಲಾಖೆಗಳ ಕಾರ್ಯಕ್ರಮವಾಗದೆ ಮಕ್ಕಳು, ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರ ಕಾರ್ಯಕ್ರಮವಾಗಬೇಕು. ಸಮರೋಪಾದಿಯಲ್ಲಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಡಾ:ನಾಗಣ್ಣ, ಉಪಸಂರಕ್ಷಣಾಧಿಕಾರಿ ಪ್ರಾದೇಶಿಕ ಅರಣ್ಯ ವಲಯ ರಾಮಲಿಂಗೇಗೌಡ, ಉಪಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ಸತೀಶ್ ಬಾಬುರೈ, ಬಿಇಓ ರಂಗಧಾಮಪ್ಪ, ವಲಯ ಅರಣ್ಯಾಧಿಕಾರಿ ಚಂದ್ರಪ್ಪ ಸೇರಿದಂತೆ ಶಾಲಾ ಮಕ್ಕಳ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News