ಕೋಟ್ಯಂತರ ರೂ. ನೋಟು ಬದಲಾವಣೆ ಆರೋಪ: ಅಮಿತ್ ಶಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Update: 2018-07-21 17:43 GMT

ಮಂಡ್ಯ, ಜು.21: ನೋಟು ಅಮಾನ್ಯೀಕರಣ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುಮಾರು 745 ಕೋಟಿ ರೂ. ಹಳೇ ನೋಟುಗಳನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ಬಿಜೆಪಿ ಮತ್ತು ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನೋಟು ಅಮಾನ್ಯೀಕರಣಗೊಂಡ ಒಂದೇ ದಿನದಲ್ಲಿ ಅಮಿತ್ ಶಾ ಅಧ್ಯಕ್ಷರಾಗಿರುವ ಅಹಮದಾಬಾದ್ ಜಿಲ್ಲಾ ಕೋಆಪರೇಟಿವ್ ಬ್ಯಾಂಕ್‍ನಲ್ಲಿ ಕಪ್ಪುಹಣವನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅಮಿತ್ ಶಾ ಅವರ ಅಕ್ರಮ ಹಣ ಬದಲಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದರೂ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಶಾ ಅವರನ್ನು ರಕ್ಷಿಸಲು ಹೊರಟಿದೆ ಎಂದು ಅವರು ದೂರಿದರು. ಒಂದೇ ದಿನದಲ್ಲಿ ಕೋಟ್ಯಂತರ ರೂ. ಹಳೇ ನೋಟುಗಳು ಸಹಕಾರ ಬ್ಯಾಂಕ್‍ನಲ್ಲಿ ಬದಲಾವಣೆ ಆಗಿರುವುದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸಿ ಶಾ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್‍ಗೌಡ, ಮಾಜಿ ಅಧ್ಯಕ್ಷ ಎಂ.ಎಸ್.ಚಿದಂಬರ್, ಕೆ.ವಿ.ಶ್ರೀನಿವಾಸ್, ಜಬೀವುಲ್ಲಾ, ಸಿ.ಎಂ.ದ್ಯಾವಪ್ಪ, ರಾಮೇಗೌಡ, ದೇವಯ್ಯ, ಕೊತ್ತತ್ತಿ ಸಿದ್ದಪ್ಪ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News