ಮಡಿಕೇರಿ: ಕಾಡಾನೆ ದಾಳಿ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಲು ರೈತ, ಕಾರ್ಮಿಕ ಸಂಘಟನೆಗಳ ಒತ್ತಾಯ

Update: 2018-07-22 13:07 GMT

ಮಡಿಕೇರಿ, ಜು.22 : ಕಾಡಾನೆಗಳಿಂದಾಗಿ ಮಾನವ ಜೀವ ಹಾನಿ ಮತ್ತು ಆಸ್ತಿಪಾಸ್ತಿಗಳ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ, ಕೊಡಗು ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

ಸುಮಾರು 70ಕ್ಕೂ ಹೆಚ್ಚು ಮಾನವ ಜೀವ ಕಾಡಾನೆಗಳ ಹಾವಳಿಗೆ ಬಲಿಯಾಗಿದ್ದು, ಇದಕ್ಕೆ ಪೂರಕವಾಗಿ ವೈಜ್ಞಾನಿಕವಾಗಿ ಅರಣ್ಯಗಳ ಬದಿಯಲ್ಲಿ ರೈಲ್ವೆ ಹಳಿಗಳನ್ನು ಬಳಸಿ ಬೇಲಿ ನಿರ್ಮಿಸಿ ಕಾಡಾನೆಗಳನ್ನು ಕಾಡಿನಲ್ಲೇ ನಿಯಂತ್ರಿಸಬೇಕು. 2015ರ ಪರಿಹಾರ ಸುತ್ತೋಲೆಯನ್ನು ತಕ್ಷಣ ರದ್ದುಗೊಳಿಸಿ, ಜೀವ ಹಾಗೂ ಆಸ್ತಿಪಾಸ್ತಿಗಳ ನಷ್ಟಕ್ಕೆ ಆಯಾ ಇಲಾಖೆ ವೈಜ್ಞಾನಿಕವಾಗಿ ನಷ್ಟವನ್ನು ನಿಗದಿಪಡಿಸಬೇಕು. ಕಾಡಾನೆ ಹಾವಳಿಯಿಂದಾಗಿ ರೈತರು ಯಾವುದೇ ಬೇಸಾಯ ಮಾಡದೆ ಭೂಮಿಯನ್ನು ಬಂಜರು ಭೂಮಿಯನ್ನಾಗಿ ಬಿಟ್ಟಿದ್ದು, ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.

ಕಾಡಾನೆಗಳ ದಾಳಿಗೆ ಒಳಗಾದ ಸಂದರ್ಭದಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮತ್ತು ಸಂಪೂರ್ಣ ವೈದ್ಯಕೀಯ ಖರ್ಚು ಸಂಪೂರ್ಣವಾಗಿ ಸರಕಾರವೇ ಭರಿಸಬೇಕು. ಮಾನವ ಸಾಕು ಪ್ರಾಣಿಗಳನ್ನು ವನ್ಯಜೀವಿಗಳು ಕೊಂದು, ತಿಂದು ಹಾಕಿದರೆ ಒಂದು ಹಸುವಿಗೆ ರೂ. 50,000 ಪರಿಹಾರ ಮತ್ತು ಸಾಗಾಣಿಕೆಗೆ ವ್ಯಯಿಸಿದ ಹಣವನ್ನು ನೀಡಬೇಕು. ಪ್ರಕರಣವೊಂದರ ತೀರ್ಪಿನಂತೆ 65 ಕಾಡಾನೆಗಳನ್ನು ಸೆರೆಹಿಡಿಯಲು ತೀರ್ಪನ್ನು ನೀಡಿದ್ದರೂ ಅರಣ್ಯ ಇಲಾಖೆಯವರು ಈ ವಿಚಾರದ ಬಗ್ಗೆ ಕ್ರಮ ಜರುಗಿಸಿಲ್ಲ. ಅರಣ್ಯ ಸಚಿವರ ಗಮನಕ್ಕೆ ತಂದು ತಕ್ಷಣ ಆದೇಶ ಪಾಲಿಸುವಂತೆ ಕ್ರಮ ಜರುಗಿಬೇಕು ಎಂದು ಒತ್ತಾಯಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿರುವ ತೇಗ ಹಾಗೂ ನೀಲಗಿರಿ ಮರಗಳನ್ನು ತೆರವುಗೊಳಿಸಿ, ಪ್ರಾಣಿಸ್ನೇಹಿ ಹಣ್ಣುಹಂಪಲು ಗಿಡಗಳನ್ನು ನೆಡುವ ಬಗ್ಗೆ ಗಮನ ಹರಿಸಬೇಕು. ಅರಣ್ಯದಲ್ಲಿರುವ ಕೆರೆಗಳ ಕೆಸರು ತೆಗಿಸಿ ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದಲ್ಲದೆ, ಹೊಸ ಕೆರೆಗಳನ್ನು ವೈಜ್ಞಾನಿಕ ರೂಪದಲ್ಲೇ ನಿರ್ಮಿಸಬೇಕು. ಕೆರೆಗಳ ನೀರು ಇಂಗದಂತೆ ಸೋಲಾರ್ ಕೊಳವೆ ಬಾವಿಗಳಿಂದ ಕೆರೆಗಳಿಗೆ ನೀರು ಹಾಯಿಸತಕ್ಕಂತಹ ವ್ಯವಸ್ಥೆ ಮಾಡಬೇಕು.

ವನ್ಯ ಪ್ರಾಣಿಗಳ ಹಾವಳಿ, ಅದನ್ನು ತಡೆಗಟ್ಟುವ ಕಾರ್ಯಕ್ರಮಗಳ ಬಗ್ಗೆ ಮತ್ತು ಅದರ ಸಫಲತೆ, ವಿಫಲತೆಗಳ ಬಗ್ಗೆ ಪ್ರತಿ ತಿಂಗಳ ಸೋಮವಾರದಂದು ಪ್ರತೀ ಗ್ರಾ.ಪಂ ಮಟ್ಟದಲ್ಲಿ ರೈತರ ಹಾಗೂ ಕಾರ್ಮಿಕರ ಸಭೆ ಕರೆದು ಸಲಹೆ ಸೂಚನೆಗಳನ್ನು ನೀಡಬೇಕೆಂದು ಒತ್ತಾಯಿಸಿ ಸಂಘಟನೆಗಳ ಪ್ರಮುಖರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ, ಸಮಿತಿಯ ಕಾನೂನು ಸಲಹೆಗಾರ ಹೇಮಚಂದ್ರ, ಸಂಚಾಲಕ ಪವೀಣ್ ಬೋಪಣ್ಣ, ಕಾರ್ಮಿಕ ಮುಖಂಡ ಪಿ.ಆರ್. ಭರತ್, ಕಾರ್ಮಿಕ ನಾಯಕ ಮಹದೇವ್ ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News