ದೇಶ ಸೇವೆಗೆ ಯುವಜನತೆ ಸಜ್ಜಾಗಬೇಕಿದೆ: ಶ್ರೀ ಸಿದ್ದಲಿಂಗ ಸ್ವಾಮೀಜಿ

Update: 2018-07-22 13:16 GMT

ತುಮಕೂರು,ಜು.22: ದೇಶ ಸೇವೆಗೆ ಯುವಜನತೆ ಸನ್ನದ್ಧರಾಗಬೇಕಾದ ಅಗತ್ಯವಿದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಸಿದ್ದಗಂಗಾ ಮಠದಲ್ಲಿ ಸಂಯುಕ್ತ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ್ದ 19ನೇ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶ ಸೇವೆ ಎಂದರೆ ಸೈನಿಕರಾಗಿ ಮಾತ್ರ ಅಲ್ಲ. ಸ್ವಚ್ಚತೆ, ಪರಿಸರ ಸಂರಕ್ಷಣೆ, ಭ್ರಷ್ಟಾಚಾರ ನಿಗ್ರಹ ಹಾಗೂ ಸಮಾಜ ಸೇವೆಗಳು ಸಹ ದೇಶ ಸೇವೆ ಎನ್ನಿಸಿಕೊಳ್ಳುತ್ತವೆ ಎಂದರು.

ಭಾರತ ಪುರಾತನ ಕಾಲದಿಂದಲೂ ಶಾಂತಿಯನ್ನು ಬಯಸುತ್ತದೆ. ಆದರೆ ನಮ್ಮ ಶಾಂತಿಗೆ, ಐಕ್ಯತೆಗೆ ಧಕ್ಕೆ ಬಂದಾಗ ಸಹಿಸುವುದಿಲ್ಲ ಎಂಬುದಕ್ಕೆ ಕಾರ್ಗಿಲ್ ಯುದ್ದವೇ ಸಾಕ್ಷಿ. ಕಾರ್ಗಿಲ್ ವಿಜಯೋತ್ಸವ ಆಚರಿಸುವ ಮೂಲಕ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ನಾವು ಸಲ್ಲಿಸುತ್ತಿರುವ ನಮನ ಎಂದು ಸಿದ್ದಲಿಂಗ ಸ್ವಾಮೀಜಿ ನುಡಿದರು.

ನಮ್ಮ ಎರಡನೇ ಪ್ರಧಾನಿಯಾದ ಲಾಲ್ ಬಹದ್ದೂರು ಶಾಸ್ತ್ರಿ ಅವರು, ದೇಶದ ರಕ್ಷಣೆಗೆ ಪಣತೊಟ್ಟು ನಿಂತಿರುವ ಯೋಧ ಮತ್ತು ಅನ್ನ ನೀಡುವ ರೈತ ಇಬ್ಬರನ್ನು ಈ ದೇಶದ ಕಣ್ಣು ಎಂದು ನಂಬಿದ್ದರು. ಅದಕ್ಕಾಗಿಯೇ ಜೈ ಜವಾನ್ ಮತ್ತು ಜೈ ಕಿಸಾನ್ ಎಂಬ ಘೋಷಣೆ ಮಾಡಿದ್ದರು. ಅದನ್ನು ಮುಂದುವರೆದಂತೆ ಕ್ಷಿಪಣಿ ತಜ್ಞ ಡಾ.ಅಬ್ದುಲ್ ಕಲಾಂ ಜೈ ಜವಾನ್, ಜೈ ಕಿಸಾನ್ ಮತ್ತು ಜೈ ವಿಜ್ಞಾನ ಎಂದು ಮುಂದುವರೆಸಿದ್ದರು ಎಂದರು.

ಇಂದು ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಇಂಜಿನಿಯರ್, ಮೆಡಿಕಲ್ ಇನ್ನಿತರ ವೃತ್ತಿ ಪರ ಕೋರ್ಸುಗಳನ್ನು ಮಾಡಿದವರು ಸೇನೆ ಸೇರಬಹುದು. ಬೇರೆ ದೇಶಗಳಲ್ಲಿ ಇರುವಂತೆ ನಮ್ಮಲ್ಲಿಯೇ ಪ್ರತಿಯೊಂದು ಕುಟುಂಬದಲ್ಲಿ ಒಬ್ಬರು ಸೇನೆಗೆ ಸೇರಬೇಕೆಂಬ ನಿಯಮ ಜಾರಿಗೆ ಬಂದರೆ ಹೆಚ್ಚು ಅನುಕೂಲವಾದಿತು ಎಂದು ಶ್ರೀ ಸಿದ್ದಗಂಗಾ ಸ್ವಾಮೀಜಿ ನುಡಿದರು.

ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ಮಿಲಿಟರಿ ಅಧಿಕಾರಿ ಬಂಡಾರಿ ಮಾತನಾಡಿ, ದೇಶದ ಪ್ರತಿ ಕುಟುಂಬದಿಂದ ಒಬ್ಬರು ದೇಶ ಸೇವೆಗೆ ಸೇರಬೇಕು ಎಂಬುದು ನಮ್ಮ ಆಶಯ. ಹುಟ್ಟು, ಸಾವು ಸಹಜ ಪ್ರಕ್ರಿಯೆ. ಆದರೆ ಒಬ್ಬ ಯೋಧ ಸಾವನ್ನಪ್ಪಿದಾಗ ಇಡೀ ದೇಶವೇ ಮರುಕಪಡುತ್ತದೆ. ಇದು ನಮಗೆ ಹೆಮ್ಮೆಯ ವಿಷಯ. ದೇಶವನ್ನು ಶತ್ರುಗಳಿಂದ ಕಾಪಾಡುವುದೇ ನಮ್ಮ ಮುಂದಿರುವ ಗುರಿ ಎಂದರು. 

ಕಾರ್ಯಕ್ರಮದ ಅಂಗವಾಗಿ ರಾಷ್ಟ್ರದ್ವಜವನ್ನು ಶತಾಯುಷಿ ಡಾ.ಶ್ರೀಶಿವಕುಮಾರ ಸ್ವಾಮಿಜಿ ಅವರಿಗೆ ಹಸ್ತಾಂತರಿಸಲಾಯಿತು. ಸಾವಿರಾರು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News