ತಪ್ಪೆಸಗಿದಾಗ ಎಚ್ಚರಿಸುವ ಗಂಟೆಗಳಂತೆ ಪತ್ರಕರ್ತರು ಕರ್ತವ್ಯ ನಿರ್ವಹಿಸಬೇಕು: ಸಚಿವ ಜಿ.ಟಿ.ದೇವೇಗೌಡ

Update: 2018-07-22 16:52 GMT

ಮೈಸೂರು,ಜು.22: ತಪ್ಪೆಸಗಿದಾದ ಎಷ್ಟೇ ಪ್ರಭಾವಿಗಳಾದರೂ ಅವರ ನಡೆ ಖಂಡಿಸುವುದು ಪ್ರತಿಯೊಬ್ಬ ಪತ್ರಕರ್ತನ ಆದ್ಯ ಕರ್ತವ್ಯವಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಮೈಸುರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ರಾಮಾನುಜ ರಸ್ತೆಯ ರಾಜೇಂದ್ರ ಭವನದಲ್ಲಿ ಪತ್ರಕರ್ತರ ವಾರ್ಷಿಕ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ತಿದ್ದುವ ಶಕ್ತಿ ಪತ್ರಿಕಾ ರಂಗಕ್ಕೆ ಇದೆ. ಸತ್ಯ ಹೊರ ಹಾಕುವುದು ಪತ್ರಿಕಾ ಧರ್ಮ. ತಪ್ಪೆಸಗಿದಾಗ ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ನಡೆ ಖಂಡಿಸುವುದು ಪ್ರತಿಯೊಬ್ಬ ಪತ್ರಕರ್ತನ ಆದ್ಯ ಕರ್ತವ್ಯವಾಗಬೇಕು. ನಡೆಯುವಾಗ ಎಡವುದು ಸಹಜ. ನಮ್ಮಲ್ಲಿ ತಪ್ಪಾದಾಗ ಅದನ್ನು ಖಂಡಿಸಿ ಬರೆಯರಿ. ಈ ಬಗ್ಗೆ ಹಿಂಜರಿಕೆ ಬೇಡ ಎಂದು ಕರೆ ನೀಡಿದರು.

ನಿವೇಶನ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಪತ್ರಕರ್ತರನ್ನೊಳಪಡಿಸುವ ಆಶ್ವಾಸನೆ ನೀಡಿ, ಗ್ರಾಮೀಣ ಭಾಗದ ಪ್ರತಿಭಾವಂತ ಪತ್ರಕರ್ತರಿಗೆ ತಾಲೂಕು ಮಟ್ಟದಲ್ಲಿ ಸ್ವಂತ ಕಚೇರಿ ತೆರೆಯಲು ಸಹಾಯ ಹಸ್ತ ಚಾಚುವುದಾಗಿ ಘೋಷಿಸಿದರು.

ಪ್ರತಿಯೊಬ್ಬ ಜಿ. ಪಂ ಅಧಿಕಾರಿಗಳು ಪ್ರತಿ ಸೋಮವಾರ ಗ್ರಾಮಗಳಿಗೆ ಭೇಟಿ ನೀಡಬೇಕೆಂದು ಈಗಾಗಲೇ ಸಿಎಂ ತಾಕಿತ್ತು ಮಾಡಿದ್ದು, ಅಧಿಕಾರಿಗಳು ಕರ್ತವ್ಯ ಲೋಪವೆಸಗಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಗೆ ನೀಡಿದರು.

ರಾಜ್ಯ ಹೋಟೆಲ್ ಮಾಲಿಕರ ಸಂಘದ ನಿರ್ಗಮಿತ ಅಧ್ಯಕ್ಷ ರಾಜೇಂದ್ರ ಮಾತನಾಡಿ, ಪ್ರಾಣದ ಹಂಗು ತೊರೆದು ಸುದ್ಧಿ ಸಂಗ್ರಹಕ್ಕಿಳಿಯುವ ಪತ್ರಕರ್ತರಿಗೆ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ, ಪ್ರಾಣಹಾನಿಯಾದಾಗ ಕುಟುಂಬದವರಿಗೆ 50 ಲಕ್ಷ ಪರಿಹಾರ ಧನ ಹಾಗೂ ಕುಟುಂಬ ಸದಸ್ಯರು ಸೇರಿದಂತೆ 5 ಲಕ್ಷ ಆರೋಗ್ಯ ವಿಮೆ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಪತ್ರಕರ್ತರಾದ ರಾಜಕುಮಾರ ಭಾವಸಾರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ವರ್ಷದ ಹಿರಿಯ ಉಪಸಂಪಾದಕರಾಗಿ ದೊಡ್ಡಹುಂಡಿ ರಾಜಣ್ಣ, ವರ್ಷದ ವರದಿಗಾರನಾಗಿ ಹರೀಶ್ ತಲಕಾಡು, ವರ್ಷದ ಗ್ರಾಮಾಂತರ ಪತ್ರಕರ್ತರಾಗಿ ಹುಣಸೂರಿನ ಹನಗೋಡು ನಟರಾಜು, ವರ್ಷದ ಛಾಯಾಗ್ರಾಹಕ ಪ್ರಶಸ್ತಿಯನ್ನು ಉದಯಶಂಕರ್, ವರ್ಷದ ಗ್ರಾಮಾಂತರ ಹಿರಿಯ ಛಾಯಾಗ್ರಾಹಕನಾಗಿ ಹೆಚ್.ಡಿ.ಕೋಟೆಯ ಕನ್ನಡ ಪ್ರಮೋದ್ , ದೃಶ್ಯಮಾಧ್ಯಮದ ವರ್ಷದ ಹಿರಿಯ ವರದಿಗಾರನಾಗಿ ರಂಗಸ್ವಾಮಿ ಹಾಗೂ ನಿತಿನ್ ರಾವ್ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತ ರವಿಹೆಗಡೆ, ಶಾಸಕರಾದ ಎಚ್.ವಿಶ್ವನಾಥ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು, ಹೋಟೆಲ್ ಮಾಲಿಕರ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News