ಭಾರತ ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ: ಸಂಸದ ಆರ್.ಧ್ರುವನಾರಾಯಣ

Update: 2018-07-22 16:58 GMT

ಮೈಸೂರು,ಜು.22: ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅಂಬೇಡ್ಕರ್ ಅವರು ಸಹ ಪ್ರಮುಖರಾಗಿದ್ದು, ಹಿಂದುಳಿದ ಅಸ್ಪೃಶ್ಯರ ಪರವಾಗಿ ನಿರಂತರ ಹೋರಾಟ ನಡೆಸಿ ದೇಶದ ಒಳಿತಿಗೆ ಸದಾ ಚಿಂತನೆ ಮಾಡುತ್ತಿದ್ದರು ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.

ನಗರದ ಬನ್ನಿಮಂಟಪ ವೃತ್ತದಲ್ಲಿರುವ ಭಾರತೀಯ ಜೀವ ವಿಮಾ ಕಚೇರಿಯಲ್ಲಿ ರವಿವಾರ ಎಸ್ಸಿ, ಎಸ್ಟಿ ಬುದ್ದೀಸ್ಟ್ ವೆಲ್‍ಫೇರ್ ಅಸೋಷಿಯೇಶನ್ ವತಿಯಿಂದ ಏರ್ಪಡಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 127ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಹೊರ ದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಅಲ್ಲಿ ಸಿಕ್ಕಂತಹ ಹುದ್ದೆಯನ್ನು ತ್ಯಜಿಸಿ ಭಾರತಕ್ಕೆ ಹಿಂದಿರುಗಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರ ದೇಶ ಪ್ರೇಮ ಎಷ್ಟಿತ್ತು ಎಂಬುದು ಇದರಲ್ಲಿಯೇ ಅರ್ಥವಾಗುತ್ತದೆ ಎಂದು ಹೇಳಿದರು.

ಈ ಹಿಂದೆ ಅಂಬೇಡ್ಕರ್ ಜಯಂತಿಯನ್ನು ಪರಿಶಿಷ್ಟ ಜಾತಿ ಯವರು ಎಲ್ಲಿ ಹೆಚ್ಚಾಗಿ ಇರುತ್ತಾರೊ ಅಲ್ಲಿ ಆಚರಿಸಲಾಗುತಿತ್ತು. ಇಂದು ವಿಶ್ವದಾದ್ಯಂತ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯಲ್ಲಿ ಅವರ ಜನ್ಮದಿನವನ್ನು ಪ್ರತಿ ವರ್ಷ ಎ.14 ಅನ್ನು 'ಜ್ಞಾನ ದಿನ' ಎಂದು ಪರಿಗಣಿಸಿ ಆಚರಿಸುತ್ತಿರುವುದು ಅವರ ಘನತೆಯನ್ನು ಮತ್ತಷ್ಟು ಎತ್ತಿಹಿಡಿಯಲಿದೆ ಎಂದು ಹೇಳಿದರು.

ಬೌದ್ಧ ಧರ್ಮ ನಮ್ಮ ದೇಶದಲ್ಲಿ ಜನ್ಮತಾಳಿದರೂ ಅದು ಬೆಳೆಯಲಿಲ್ಲ. ಆದರೆ ಜಪಾನ್, ಚೀನಾ, ಬ್ಯಾಂಕಾಕ್ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಬೆಳೆದಿರುವು ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.

ನಮ್ಮ ರಾಜ್ಯದ ಚಾಮರಾಜನಗರ ಮತ್ತು ಕೊಳ್ಳೇಗಾಲ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬೌದ್ಧ ವಿಹಾರ ಸ್ಥಾಪಿಸಿ ಅದರ ಮೂಲಕ ಬೌದ್ಧ ಧರ್ಮದ ಪ್ರಚಾರಕ್ಕೆ ಸರಕಾರ ಮುಂದಾಗಿದ್ದು, ಇದಕ್ಕಾಗಿ 10 ಕೋಟಿ ರೂ.ಗಳ ಅನುದಾನ ನೀಡಿದ್ದು, ಶೀಘ್ರದಲ್ಲಿಯೇ ವಿಹಾರಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು. 

ಇದೇ ವೇಳೆ ದ್ವಿತೀಯ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗು ಇಲಾಖೆ ನಿಗದಿ ಪಡಿಸಿದ ಗುರಿಯಲ್ಲಿ ಶೇ.100 ರಷ್ಟು ಸಾಧನೆ ಮಾಡಿದ ಹಿರಿಯ ವಿಭಾಗ ವ್ಯವಸ್ಥಾಪಕ ದೊರೆಸ್ವಾಮಿ ನಾಯಕ್, ಅರಕಲಗೂಡು ಶಾಖಾ ವ್ಯವಸ್ಥಾಪಕ ಕಾಂತರಾಜು ಅವರುಗಳನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ರಾಜೀವ್, ಡಾ.ಆನಂದ್, ಸಿದ್ದಾರ್ಥ, ಆರ್.ರಂಗಸ್ವಾಮಿ, ದೀಪಾ ನಾಯಕ್ ಸೇರಿದಂತೆ ಇಲಾಖೆ ಅಧಿಕಾರಿಗಳು ನೌಕರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News