ಬಾಗೇಪಲ್ಲಿ: ವಕೀಲರ ಸಂಘ, ಭಾರತೀಯ ರೆಡ್ ಕ್ರಾಸ್ ವತಿಯಿಂದ ರಕ್ತದಾನ ಶಿಬಿರ

Update: 2018-07-22 17:13 GMT

ಬಾಗೇಪಲ್ಲಿ,ಜು.22: ಪ್ರತಿ ಮೂರು ತಿಂಗಳಿಗೋಮ್ಮೆ ರಕ್ತದಾನ ಮಾಡಿದರೆ ಮನುಷ್ಯರಿಗೆ ಯಾವುದೇ ಕಾಯಿಲೆಗಳು ಬರುವುದಿಲ್ಲ ಎಂದು ಪ್ರಥಮ ದರ್ಜೆ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಆರ್.ಜೆ.ಎಸ್ ಪ್ರವೀಣ್ ತಿಳಿಸಿದರು.

ಅವರು ಇಂದು ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ಮತ್ತು ಭಾರತೀಯ ರೆಡ್ ಕ್ರಾಸ್ ಘಟಕದ ವತಿಯಿಂದ ಏರ್ಪಡಿಸಿದ್ದ ಉಚಿತ ರಕ್ತದಾನ ಶಿಬಿರವನ್ನು ಉದ್ಟಾಟಿಸಿ ಮಾತನಾಡಿ, 18 ವರ್ಷದಿಂದ 40 ವರ್ಷದೊಳಗಿನ ಯುವಕ, ಯುವತಿಯರು ರಕ್ತದಾನ ಮಾಡಿದರೆ ಅಮೂಲ್ಯ ಪ್ರಾಣಗಳು ಉಳಿಸಿದಂತಾಗುತ್ತದೆ .ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗಿ ಮನುಷ್ಯರು ಲವಲವಿಕೆಯಿಂದ ಇರಲು ಸಾದ್ಯವಾಗುತ್ತದೆ. ಪಟ್ಟಣದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಅನೇಕ ಅಪಘಾತಗಳು ನಡೆದು ತೀವ್ರ ರಕ್ತಸೋರಿಕೆಯಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಇಂತಹ ಜೀವಗಳನ್ನು ರಕ್ಷಣೆ ಮಾಡಲು ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದ ಅವರು ನಮ್ಮ ದೇಶದಲ್ಲಿ ಎಲ್ಲಾ ದಾನಗಳು ಮಾಡುತ್ತಾರೆ. ರಕ್ತದಾನ ಮಾಡಲು ಹೆದುರುತ್ತಾರೆ. ಯಾರು ಹೆದರಬೇಕಾಗಿಲ್ಲ, ರಕ್ತದಾನ ಮಾಡುವುದರಿಂದ ನಿಮ್ಮ ಆರೋಗ್ಯ ಮತ್ತಷ್ಟು ಉತ್ತಮವಾಗಿರುತ್ತದೆ. ಎಲ್ಲಾ  ದಾನಗಳಿಗಿಂತ ರಕ್ತದಾನ ಶ್ರೇಷ್ಠವಾಗಿದೆ. ಮತ್ತೊಬ್ಬ ಮನುಷ್ಯನ ಜೀವ ಉಳಿಸಲು ರಕ್ತ ತುಂಬ ಅವಶ್ಯಕವಾಗಿದೆ. ಆದ್ದರಿಂದ ಬಡ ಗಾಯಾಳುಗಳ ಜೀವ ಉಳಿಸಲು ಪ್ರತಿಯೊಬ್ಬರು ರಕ್ತದಾನ ಮಾಡಿ ಸಮಾಜಕ್ಕೆ ಆದರ್ಶವಾಗಿ ಬದುಕುವಂತೆ ಕರೆ ನೀಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎ.ಜಿ.ಸುಧಾಕರ್ ಮಾತನಾಡಿ, ಮಹಿಳೆಯರು ಪ್ರತಿ ತಿಂಗಳು ಮುಟ್ಟಾಗುವುದರಿಂದ ತೀವ್ರ ರಕ್ತದಾನ ಸೋರಿಕೆಯಿಂದ ಅವರ ಆರೋಗ್ಯದಲ್ಲಿ ಏರು ಪೇರುಗಳು ಆಗುತ್ತವೆ. ಸಾಮಾನ್ಯವಾಗಿ ಹೆರಿಗೆ ಸಮಯದಲ್ಲಿ ರಕ್ತ ಕಡಿಮೆಯಾಗುವುದರಿಂದ ತಾಯಿ ಅಥವಾ ಮಗು ಮರಣ ಹೊಂದುವ ಸಾದ್ಯತೆ ಹೆಚ್ಚಾಗಿರುತ್ತದೆ. ಇಂತಹ ಬಡ ಮಹಿಳೆಯರ ಅಮೂಲ್ಯ ಜೀವಗಳನ್ನು ಕಾಪಾಡಲು ಯುವಕ, ಯುವತಿಯರು ಹೆಚ್ಚಾಗಿ ರಕ್ತದಾನ ಮಾಡಬೇಕಾಗಿದೆ. ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಜಿಲ್ಲಾ ರೆಡ್ ಕ್ರಾಸ್ ಘಟಕದ ಅತ್ಯುತ್ತಮ ಸಾಧನೆಗಾಗಿ ಈಗಾಗಲೇ 4 ಬಾರಿ ರಾಜ್ಯ ಮಟ್ಟದಲ್ಲಿಯೇ ಪ್ರಶಸ್ತಿ ಪಡೆದಿದೆ. ತಾಲೂಕಿನಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ ನೂರಾರು ಯೂನಿಟ್‍ ರಕ್ತ ಸಂಗ್ರಹಿಸಿ ಬಡ ಗಾಯಾಳುಗಳನ್ನು ಬದುಕಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡ ಮಾತನಾಡಿ, ಯುವಕರು ರಕ್ತದಾನ ಮಾಡುವುದರ ಮೂಲಕ ಅಮೂಲ್ಯ ಪ್ರಾಣಗಳ ರಕ್ಷಣೆ ಮಾಡಲು ಮುಂದೆ ಬರಬೇಕಾಗಿದೆ. ಸಮಾಜದಲ್ಲಿ ಎಲ್ಲ ವಸ್ತುಗಳು ಧಾರಾಳವಾಗಿ ಸಿಗುತ್ತವೆ. ಆದರೆ ರಕ್ತ ಮಾತ್ರ ಸಿಗುವುದಿಲ್ಲ ಎಂದರು.

25 ಯೂನಿಟ್‍ ರಕ್ತವನ್ನು ಈ ಸಂದರ್ಭದಲ್ಲಿ ಸಂಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ  ಭಾರತೀಯ ರೆಡ್‍ ಕ್ರಾಸ್ ಸಂಸ್ಥೆ ವೈದ್ಯ ಡಾ.ವಿಕ್ರಮ್, ಭರತ್, ಶ್ರೀನಾಥ್, ವಕೀಲರ ಸಂಘದ ಉಪಾಧ್ಯಕ್ಷೆ ಎನ್.ಮಂಜುಳ, ಕಾರ್ಯದರ್ಶಿ ಪ್ರಸನ್ನಕುಮಾರ್, ವಕೀಲರಾದ ಸುಬ್ಬಿರೆಡ್ಡಿ, ವೆಂಕಟೇಶ್, ಸೂರ್ಯ ನಾರಾಯಣರೆಡ್ಡಿ, ನರಸಿಂಹರೆಡ್ಡಿ, ಲಕ್ಷ್ಮೀಪತಿ ರೆಡ್ಡಿ, ರಾಮಾಂಜಿ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News