×
Ad

ಪ್ರಶಸ್ತಿ ಪುರಸ್ಕೃತರಿಂದ ಮತ್ತಷ್ಟು ಸಾಮಾಜಿಕ, ಜನಕಲ್ಯಾಣ ಕಾರ್ಯಗಳಾಗಲಿ: ಶಾಸಕ ರವೀಂದ್ರನಾಥ್

Update: 2018-07-22 23:00 IST

ದಾವಣಗೆರೆ,ಜು.22: ಪ್ರಶಸ್ತಿ ಪುರಸ್ಕೃತರಿಂದ ಮತ್ತಷ್ಟು ಸಾಮಾಜಿಕ, ಜನಕಲ್ಯಾಣ ಕಾರ್ಯಗಳು ಜರುಗಲಿ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಆಶಿಸಿದರು.

ಭಾನುವಾರ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ಹಮ್ಮಿಕೊಂಡಿದ್ದ ‘ಭಾರತದ ಪ್ರಜಾಪ್ರಭುತ್ವಕ್ಕಿರುವ ಸವಾಲುಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ’ ಹಾಗೂ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾಧನೆಯ ಹಾದಿಯಲ್ಲಿ ಸಂಗಮವಾಣಿ ತೃತೀಯ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯವನ್ನು ಮಾಡುವ ನಿಟ್ಟಿನಲ್ಲಿ ಇಂದಿನ ಗೌರವ ಸನ್ಮಾನ ಮತ್ತಷ್ಟು ಪ್ರೇರಣೆಯಾಗಲಿ. ಅಲ್ಲದೆ, ಇಂತಹ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುತ್ತಿರುವ ಅಕಾಡೆಮಿಯ ಕಾರ್ಯ ಶ್ಲಾಘನೀಯ ಎಂದರು.

ಕರ್ನಾಟಕ ಸ್ಲಂ ಜನಾಂದೋಲನಾ ಸಮಿತಿ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಅವರು ‘ಭಾರತದ ಪ್ರಜಾಪ್ರಭುತ್ವಕ್ಕಿರುವ ಸವಾಲುಗಳು’ ವಿಷಯ ಕುರಿತು ಮಾತನಾಡಿ, ಪ್ರಜಾಪ್ರಭುತ್ವ ಕಲ್ಪನೆ ಹುಟ್ಟಿದ್ದೇ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ. ಆದರೆ, ಇತ್ತೀಚಿನ ದಿನಗಳಲ್ಲಿ ಜನರ ಪರಮಾಧಿಕಾರಕ್ಕೆ ಕಡಿವಾಣ ಹಾಕುವ ಕಾರ್ಯವನ್ನು ಆಳುವ ಪ್ರಭುತ್ವ ಮಾಡುತ್ತಿದ್ದು, ಪ್ರಜಾಪ್ರಭುತ್ವದ ಆಶಯಗಳನ್ನು ನಿಯಂತ್ರಿಸುವ, ಮೊಟಕುಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದರು.

ಸಂವಿಧಾನದ ಪ್ರಮುಖ ಆಶಯ ಸಮಾನತೆ. ಆದರೆ, ಭಾರತದಲ್ಲಿ ಬಡತನ, ಅಸಮಾನತೆ ಹೆಚ್ಚುವ ಮೂಲಕ ಸಂವಿಧಾನ ಆಶಯ ಮೊಟಕಾಗುತ್ತಿದೆ. ದೇಶದ ಸಂಪತ್ತು ಕೆಲವೇ ಕೆಲವರಲ್ಲಿದ್ದು, 2011ರಲ್ಲಿ ಶೇ. 30ರಷ್ಟಿದ್ದ ಭಾರತದ ಬಡವರ ಸಂಖ್ಯೆ ಇಂದು ಶೇ. 46ಕ್ಕೆ ಏರಿಕೆಯಾಗಿದೆ ಎಂದ ಅವರು, ಸಂವಿಧಾನವನ್ನು ಅಪಾಯಕ್ಕೆ ಸಿಲುಕಿಸುವ, ಬದಲಾಯಿಸುವ ಕಾರ್ಯಗಳು ದೇಶಕ್ಕೆ ದೊಡ್ಡ ಗಂಡಾಂತರವನ್ನು ತಂದೊಡ್ಡಲಿವೆ. ಎಲ್ಲೆಡೆ ಸರ್ವಾಧಿಕಾರಿ ಧೋರಣೆ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು. ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸುವ ಕಾರ್ಯವಾಗಬೇಕಿದೆ ಎಂದರು.

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 150 ಸಾಧಕರಿಗೆ ಭಾರತ ಸೇವಾರತ್ನ ರಾಷ್ಟ್ರ ಪ್ರಶಸ್ತಿ, ಬಸವ ರತ್ನ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದಾವಣಗೆರೆ ವಿರಕ್ತಮಠದ ಬಸವಪ್ರಭು ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಾಯಕೊಂಡ ಶಾಸಕ ಪ್ರೊ.ಎನ್. ಲಿಂಗಣ್ಣ ಮಾತನಾಡಿದರು.

ವೇದಿಕೆಯಲ್ಲಿ ಪಾಲಿಕೆ ಸದಸ್ಯರಾದ ಎ.ಬಿ. ರೈಮಾನ್ ಸಾಬ್, ಫಾರೂಕ್, ಜೆಡಿಎಸ್ ಯುವಘಟಕದ ಜಿಲ್ಲಾಧ್ಯಕ್ಷ ಜೆ. ಅಮಾನುಲ್ಲಾ ಖಾನ್, ಜೆಡಿಎಸ್ ಮುಖಂಡ ಎಚ್.ಸಿ. ಗುಡ್ಡಪ್ಪ, ಮುಸ್ಲಿಂ ಯುವ ಮುಖಂಡ ಹಜ್‍ಮುಲ್ಲಾ ಖಾನ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಿ.ಎಚ್. ಶಂಭುಲಿಂಗಪ್ಪ, ಮಹಾಂತೇಶ್ ನಿಟ್ಟೂರು, ರೇಣುಕಾ ಯಲ್ಲಮ್ಮ ಮತ್ತಿತರರು ಉಪಸ್ಥಿತರಿದ್ದರು. ಪ್ರೊ.ಡಿ ಅಂಜಿನಪ್ಪ ಸ್ವಾಗತಿಸಿದರು. ಗಂಗಾಧರ ಬಿ.ಎಲ್.ನಿಟ್ಟೂರು ನಿರೂಪಿಸಿ, ಮಂಜುನಾಥ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News