ನಮ್ಮನ್ನಾಳುವ ಸರಕಾರಗಳಿಗೆ ಸೂರು ಕಲ್ಪಿಸುವ ಚಿಂತೆ ಇಲ್ಲ: ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್

Update: 2018-07-22 17:34 GMT

ದಾವಣಗೆರೆ, ಜು.22: ಕೃಷಿ, ಭೂಮಿ, ನಿರುದ್ಯೋಗ, ವಸತಿ, ಶಿಕ್ಷಣ ಸಮಸ್ಯೆಗಳು ಸೇರಿದಂತೆ ಒಟ್ಟು ಹತ್ತು ಅಂಶಗಳ ಆಧಾರದ ಮೇಲೆ ನೀಲ ನಕ್ಷೆ ತಯಾರಿಸಿ, ಅದಕ್ಕೆ ಪೂರಕವಾಗಿ ಹೋರಾಟ ರೂಪಿಸಲು ಸಿಪಿಐ ತೀರ್ಮಾನಿಸಿದೆ ಎಂದು ಭಾರತ ಕಮ್ಯುನಿಷ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದ್ದಾರೆ.

ನಗರದ ಅಶೋಕ ರಸ್ತೆಯ ಕಾಮ್ರೇಡ್ ಪಂಪಾಪತಿ ಭವನದಲ್ಲಿ ರವಿವಾರ ನಮ್ಮ ತಾಲೂಕು-ನಮ್ಮ ಜನ-ನಮ್ಮ ಅಭಿವೃದ್ಧಿ ಘೋಷಣೆಯೊಂದಿಗೆ ತಾಲೂಕಿನ ಅಭಿವೃದ್ಧಿಗಾಗಿ ಜನಾಂದೋಲನ ಆರಂಭಿಸಲು ಏರ್ಪಡಿಸಿದ್ದ ಭಾರತ ಕಮ್ಯನಿಷ್ಟ್ ಪಕ್ಷದ ತಾಲೂಕು ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮನ್ನಾಳುವ ಸರಕಾರಗಳಿಗೆ ಕನಿಷ್ಠ ಪಕ್ಷ ಎಲ್ಲರಿಗೂ ಸೂರು ಕಲ್ಪಿಸಬೇಕೆಂಬ ಆಲೋಚನೆಗಳಿಲ್ಲ. ಕೃಷಿ ಚಟುವಟಿಕೆಗೆ ಪೂರಕವಾದ ವಾತಾರವಣ ಸರಕಾರಗಳು ಸೃಷ್ಟಿಸುತ್ತಿಲ್ಲ. ಸಾರ್ವಜನಿಕರಿಗೆ ಕುಡಿಯಲು ಯೋಗ್ಯವಾದ ನೀರು ಸಹ ಪೂರೈಸುತ್ತಿಲ್ಲ. ಉದ್ಯೋಗ ಸೃಷ್ಟಿ ಇಲ್ಲದ ಕಾರಣ ಯುವಕರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಸರಕಾರದ ನೀತಿಗಳಿಂದಾಗಿ ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿ, ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣಕ್ಕೆ ಒಳಗಾಗಿದೆ. ಸರಕಾರಿ ಆಸ್ಪತ್ರೆಗಳು ರೋಗಗ್ರಸ್ಥವಾಗಿವೆ. ಈ ಎಲ್ಲಾ ಸಮಸ್ಯೆಗಳನ್ನು ಒಳಗೊಂಡಂತೆ ಒಟ್ಟು ಹತ್ತು ಅಂಶಗಳ ಅಭಿವೃದ್ಧಿಯ ಆಧಾರದ ಮೇಲೆ ಜನಾಂದೋಲನ ರೂಪಿಸಲು ನಮ್ಮ ಪಕ್ಷ ಮುಂದಾಗಿದೆ ಎಂದು ಹೇಳಿದರು.

ದೇಶದ ಜನರ ಬದುಕು ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ದಯನೀಯ ಸ್ಥಿತಿಯಲ್ಲಿತ್ತೊ, ಈಗಲೂ ಅದೇ ಪರಿಸ್ಥಿತಿಯಲ್ಲಿದೆ. ಆದ್ದರಿಂದ ನಮ್ಮ ಮುಂದಿರುವ ಸಮಸ್ಯೆಗಳು ಬಗೆಹರಿಯಬೇಕಾದರೆ, ನಿರಂತರವಾಗಿ ರಾಜಿರಹಿತ ಹೋರಾಟ ಕಟ್ಟಬೇಕಾದ ಅವಶ್ಯಕತೆ ಇದೆ ಎಂದ ಅವರು, ಸಂಸತ್‌ನಲ್ಲಿ ಮೋದಿ ನೇತೃತ್ವದ ಸರಕಾರ ನಾಲ್ಕು ವರ್ಷದಲ್ಲಿ ಯಾವ ರೀತಿಯಲ್ಲಿ ಆಡಳಿತ ನೀಡಿದೆ ಎಂಬುದರ ಬಗ್ಗೆ ಚರ್ಚೆಯಾಗುವ ಬದಲು, ರಾಹುಲ್‌ಗಾಂಧಿ ಯಾರಿಗೆ ಕಣ್ಣು ಮಿಟುಕಿಸಿದರು. ಮೋದಿ ಅವರನ್ನು ಏಕೆ ಆಲಂಗಿಸಿದರು ಎಂಬುದರ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆ. ನೂತನ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಪೂರಕ ಬಜೆಟ್ ಸಹ ಹಲವು ಜಿಲ್ಲೆಗಳ ಅಭಿವೃದ್ಧಿಯನ್ನು ಕಡೆಗಣಿಸಿದೆ. ಹೀಗೆ, ಸಂಸತ್ ಮತ್ತು ವಿಧಾನಸಭೆಯಲ್ಲಿ ನಡೆಯುತ್ತಿರುವ ಚರ್ಚೆಯನ್ನು ವಿಶ್ಲೇಷಿಸಿ ನೋಡಿದರೆ, ಸಮಾಜದ ಕಟ್ಟ ಕಡೆಯ ಮನುಷ್ಯನ ಅಭಿವೃದ್ಧಿಯ ಪರಿಕಲ್ಪನೆಯೇ ಕಾಣುತ್ತಿಲ್ಲ ಎಂದು ಆರೋಪಿಸಿದರು.

ಸಿಪಿಐ ತಾಲೂಕು ಕಾರ್ಯದರ್ಶಿ ಆವರಗೆರೆ ವಾಸು ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ, ಜಿಲ್ಲಾ ಖಜಾಂಚಿ ಆನಂದರಾಜ್, ಜಿಲ್ಲಾ ಸಹ ಕಾರ್ಯದರ್ಶಿಗಳಾದ ಎಚ್.ಜಿ.ಉಮೇಶ್, ಪಿ.ಷಣ್ಮುಖಸ್ವಾಮಿ, ಐರಣಿ ಚಂದ್ರು, ಯಲ್ಲಪ್ಪ ಇದ್ದರು. ಸೈಯದ್ ಖಾಜಾಪೀರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News