ಆಗಸ್ಟ್ 1ರಿಂದ ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿಯಾಗಲಿ: ನ್ಯಾ.ಕಬ್ಬೂರ ಸೂಚನೆ

Update: 2018-07-22 17:42 GMT

ಮುಂಡಗೋಡ, ಜು.22: ಆಗಸ್ಟ್ 1ರಿಂದ ಪ್ಲಾಸ್ಟಿಕ್ ನಿಷೇಧ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಜೆಎಮ್‌ಎಫ್‌ಸಿ ನ್ಯಾಯಾಧೀಶ ಈರನಗೌಡ ಕಬ್ಬೂರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಜೆಎಮ್‌ಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಪರಿಸರದಲ್ಲಿ ಪ್ಲಾಸ್ಟಿಕ್ ಮುಕ್ತಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಜಿಸಲಾಗಿದ್ದ ಅಧಿಕಾರಿಗಳು ಮತ್ತು ವರ್ತಕರ ಸಭೆಯನ್ನುದ್ದೇಶಿ ಮಾತನಾಡಿದರು. ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಕೆಟ್ಟಪರಿಣಾಮ ಬೀರುತ್ತಿರುವುದರಿಂದ ಲಾಭ ನಷ್ಟವನ್ನು ಮಾತ್ರ ಪರಿಗಣಿಸದೇ, ಪರಿಸರ ಹಾಗೂ ಜನರ ಆರೋಗ್ಯ ಹಿತ ದೃಷ್ಟಿಯಿಂದ ಪ್ರತಿಯೊಬ್ಬರೂ ಅವಶ್ಯವಾಗಿ ಚಿಂತಿಸಬೇಕಿದ್ದು, ಎಲ್ಲಾ ಅಂಗಡಿ, ವ್ಯಾಪಾರಸ್ಥರು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿ ವ್ಯವಹರಿಸಬೇಕೆಂದು ಕರೆ ನಿಡಿದರು.

ಪ್ರತಿಯೊಬ್ಬ ನಾಗರಿಕರೂ ಈಬಗ್ಗೆ ಸಂಕಲ್ಪ ಮಾಡಿದರೆ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಕಷ್ಟಸಾಧ್ಯವಲ್ಲ ಎಂದು ನುಡಿದ ಈರನಗೌಡ ಕಬ್ಬೂರ, ಸಾಮಾಜಿಕ ಕಳಕಳಿಯಿಂದ ನಡೆದುಕೊಳ್ಳುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದರು.

ಶಾಲಾ ಕಾಲೇಜುಗಳಲ್ಲಿ ಪ್ಲಾಸ್ಟಿಕ್ ನಿಂದ ಆಗುವ ಹಾನಿ ಹಾಗೂ ಪರಿಸರದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈ ಸಂಬಂಧ ಶಾಲಾ ಕಾಲೇಜುಗಳ ಮುಖ್ಯೋಧ್ಯಾಪಕರಿಗೆ ಆದೇಶಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪಅವರಿಗೆ ಸೂಚನೆ ನೀಡಿದರು.

ತಹಶೀಲ್ದಾರ್ ಅಶೋಕ ಗುರಾಣಿ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಬೈಲಪತ್ತಾರ, ಸಮಾಜ ಕಲ್ಯಾಣಾಧಿಕಾರಿ ಅಶೊಕ ಪವಾರ, ಪ.ಪಂ ಇಂಜಿನಿಯರ್ ಶಂಕರ ದಂಡಿನ್, ನ್ಯಾಯವಾದಿ ಸುಜೀತ ಸದಾನಂದ, ಸಲೀಂ ನಂದಿಕಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಹುದ್ಮನಿ, ಕಾರ್ಯದರ್ಶಿ ಎಸ್.ಡಿ.ಮುಡೆಣ್ಣವರ ಮತ್ತು ವರ್ತಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News