ನಾಗಮಂಗಲದಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ: ಶಾಸಕ ಸುರೇಶ್‍ ಗೌಡರ ಪ್ರಯತ್ನದಿಂದ ಸುಖಾಂತ್ಯ ಕಂಡ ಪ್ರಕರಣ

Update: 2018-07-22 18:18 GMT

ನಾಗಮಂಗಲ, ಜು.22: ರಾಜಕೀಯ ಕಾರಣಗಳಿಂದಾಗಿ ವಿವಾದಕ್ಕೀಡಾಗಿ ಮೂರು ವರ್ಷಗಳಿಂದ ಪ್ರತಿಷ್ಠಾಪನೆಗೊಳ್ಳದೆ ನೆಲಮಟ್ಟದಲ್ಲೆ ನಿಲ್ಲಿಸಲಾಗಿದ್ದ ಡಾ.ಬಿ ಆರ್.ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಶಾಸಕ ಕೆ.ಸುರೇಶ್‍ ಗೌಡರ ನಿರ್ದೇಶನದಂತೆ ರವಿವಾರ ಪ್ರತಿಷ್ಠಾಪನೆಗೊಳಿಸುವ ಮೂಲಕ ತಾಲೂಕು ಆಡಳಿತಕ್ಕೆ ತಲೆನೋವಾಗಿದ್ದ ಪ್ರಕರಣವನ್ನು ದಲಿತ ಮುಖಂಡರು ಸುಖಾಂತ್ಯಗೊಳಿಸಿದ್ದಾರೆ.

ಪಟ್ಟಣದ ಮಿನಿ ವಿಧಾನಸೌಧದ ಮುಂದೆ ನೆಲಮಟ್ಟದಲ್ಲಿ ನಿಲ್ಲಿಸಲಾಗಿದ್ದ 700 ಕೆಜಿ ತೂಕದ ಕಂಚಿನ ಪ್ರತಿಮೆಯನ್ನು ಹಲವು ದಲಿತ ಮುಖಂಡರು ಬೆಳಗ್ಗೆ ಕ್ರೇನ್ ಮೂಲಕ ಮೇಲಕ್ಕೆ ಎತ್ತಿ ಪ್ರತಿಷ್ಠಾಪಿಸಿದರು. 

ಮಿನಿ ವಿಧಾನಸೌಧದ ಮುಂದೆ ಪ್ರತಿಷ್ಠಾಪಿಸಲಾಗಿರುವ ಗಾಂಧಿ ಪ್ರತಿಮೆಯಂತೆ ಅಂಬೇಡ್ಕರ್ ಪ್ರತಿಮೆಯನ್ನೂ ಸ್ಥಾಪಿಸಬೇಕು ಎಂದು ಪ್ರಗತಿಪರ ಮತ್ತು ದಲಿತ ಸಂಘಟನೆ ಮುಖಂಡರು ಬೇಡಿಕೆಯಿಟ್ಟು ಹಲವು ಬಾರಿ ದೊಡ್ಡಮಟ್ಟದ ಹೋರಾಟಗಳು ನಡೆದಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ದೂರಿನ ಕಾರಣಕ್ಕೆ ನೆನೆಗುದಿಗೆ ಬಿದ್ದಿದ್ದ ಪ್ರತಿಮೆ: ಕಳೆದ ಮೂರು ವರ್ಷದ ಹಿಂದೆ ದೊಡ್ಡ ಪ್ರತಿಮೆ ಪ್ರತಿಷ್ಠಾಪಿಸಲು ಮುಂದಾದಾಗ ಅಂದು ಶಾಸಕರಾಗಿದ್ದ  ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿಗರಾದ ಕೆಲವು ದಲಿತ ಮುಖಂಡರು ಪ್ರತಿಮೆಗೆ ನಮ್ಮ ವಿರೋಧವಿದೆ ಎಂದು ಪ್ರತಿಷ್ಟಾಪನೆ ಮಾಡದಂತೆ ತಹಶೀಲ್ದಾರ್ ಗೆ ಲಿಖಿತ ದೂರು ನೀಡಿ ತಡೆಯೊಡ್ಡಿದ್ದರು. ಇದರ ವಿರುದ್ಧವಾಗಿ ಪ್ರತಿಮೆ ಸ್ಥಾಪನೆಗೆ ಪಟ್ಟು ಹಿಡಿದು ಮತ್ತೊಂದು ದಲಿತ ಮುಖಂಡರ ಗುಂಪು, ಕೋರ್ಟ್ ಮೇಟ್ಟಿಲೇರಿತ್ತು. ಇದರಿಂದಾಗಿ ರಾಜಕೀಯ ತಿರುವು ಪಡೆದುಕೊಂಡು ವಿವಾದಕ್ಕೀಡಾಗಿತ್ತು. ಪ್ರತಿಮೆ ಪ್ರತಿಷ್ಠಾಪನೆಯಾಗದೆ ನೆನೆಗುದಿಗೆ ಬಿದ್ದಿತ್ತು. ಈ ಬಾರಿಯ ಚುನಾವಣೆ ವೇಳೆ ಎರಡೂ ದಲಿತ ಗುಂಪುಗಳು ಒಮ್ಮತವಾಗಿ ಪ್ರತಿಮೆ ನಿಲ್ಲಿಸಲು ಪ್ರಯತ್ನ ನಡೆಸಿದ್ದರೂ ಅದು ವಿಫಲವಾಗಿತ್ತು. ಈ ವಿವಾದದ ಕಾರಣಗಳಿಂದಾಗಿ ದಲಿತ ಸಮುದಾಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿತ್ತು ಎನ್ನಲಾಗಿದೆ.

ಕೊಟ್ಟ ಮಾತಿನಂತೆ ನಡೆದುಕೊಂಡ ಸುರೇಶ್‍ಗೌಡ
ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್‍ನಿಂದ ಸ್ಪರ್ದಿಸಿದ್ದ ಶಾಸಕ ಸುರೇಶ್‍ಗೌಡ ನಾನು ಗೆದ್ದರೆ 15 ದಿನಗಳಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಅಂತೆಯೇ ಪ್ರಯತ್ನಪಟ್ಟು 20 ದಿನಗಳ ಹಿಂದೆ ವಿಫಲರಾಗಿದ್ದ ಸುರೆಶ್‍ ಗೌಡ, ಈ ಬಾರಿ ಪಟ್ಟುಬಿಡದೆ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಸಿಎಂ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ದೇವೇಗೌಡರ ನೆರವಿನೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಆಡಳಿತ, ಪೋಲಿಸ್ ಇಲಾಖೆಗೆ ಖಡಕ್ ಸೂಚನೆ ನೀಡಿ ಸ್ಥಳದಲ್ಲಿದ್ದ ರಿಝರ್ವ್ ಪೋಲಿಸ್ ಭದ್ರತೆ ತೆರವು ಮಾಡಿಸಿದರು ಎನ್ನಲಾಗಿದೆ. ನಂತರ ದಲಿತ ಮುಖಂಡರಿಗೆ ಶಾಂತಿಯುತವಾಗಿ ಪ್ರತಿಮೆ ಸ್ಥಾಪನೆಗೆ ಅವಕಾಶ ಕಲ್ಪಿಸಿದರು.

ಅಭಿನಂದನೆ ಸಲ್ಲಿಸಿದ ಮುಖಂಡರು
ಪ್ರತಿಮೆ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಹರ್ಷಚಿತ್ತರಾದ ದಲಿತ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ಜಯಘೋಷ ಕೂಗಿ ಕ್ರಾಂತಿಗೀತೆ ಮೊಳಗಿಸಿದರು, ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಜಿಪಂ ಮಾಜಿ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಬಹಳ ವರ್ಷಗಳಿಂದ ಕೆಲವರ ವಿರೋಧದಿಂದಾಗಿ ಪ್ರತಿಷ್ಟಾಪನೆಯಾಗದೆ ಅಂಬೇಡ್ಕರ್ ಗೆ ಅಪಮಾನವಾಗಿತ್ತು. ಇದನ್ನು ಶಾಸಕ ಸುರೇಶ್‍ಗೌಡರು ಜನತೆಗೆ ಕೊಟ್ಟ ಭರವಸೆಯಂತೆ ಹಿತಾಶಕ್ತಿಯಿಂದಾಗಿ ಪ್ರತಿಷ್ಠಾಪನೆ ಮಾಡಿಸಿದ್ದಾರೆ ಎಂದರು.

ತಾಲೂಕಿನ ಪ್ರಗತಿಪರರ ಮತ್ತು ದಲಿತ ಸಮುದಾಯದ ಹಲವು ವರ್ಷಗಳ ಬೇಡಿಕೆಯನ್ನು ಶಾಸಕ ಸುರೇಶ್‍ಗೌಡ ಮತ್ತು ಸಿಎಂ ಕುಮಾರಸ್ವಾಮಿಯವರು ನನಸು ಮಾಡಿದ್ದು, ಇವರೆಲ್ಲರಿಗೂ ಮತ್ತು ತಾಲೂಕು ಆಡಳಿತದ ವರ್ಗಕ್ಕೆ ದಸಂಸ ಮುಖಂಡರಾದ ಮುಳುಕಟ್ಟೆ ಶಿವರಾಮಯ್ಯ, ಕಂಚಿನಕೋಟೆ ಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಧರ್ಭದಲ್ಲಿ ಹಿರಿಯ ದಲಿತ ಮುಖಂಡರಾದ ಸಿ.ಬಿ.ನಂಜುಂಡಪ್ಪ, ಬೆಟ್ಟದ ಮಲ್ಲೇನಹಳ್ಳಿ ರಮೇಶ್, ಮುಳುಕಟ್ಟೆ ಸಂತೋಷ, ಗೋವಿಂದರಾಜು, ಎನ್.ಡಿ.ಪುಟ್ಟಸ್ವಾಮಿ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News