ಸರಕಾರಿ ಪ್ರಾಯೋಜಿತ ಗುಂಪು ಹತ್ಯೆಗಳು

Update: 2018-07-22 18:51 GMT

ರಾಹುಲ್ ಗಾಂಧಿಯ ಪ್ರೀತಿ, ಅನುಕಂಪದ ಅಪ್ಪುಗೆಯಿಂದ ಪ್ರಧಾನಿ ಮೋದಿ ಚೇತರಿಸಿಕೊಳ್ಳುತ್ತಿರುವಾಗಲೇ, ರಾಜಸ್ಥಾನದ ಆಲ್ವಾರ್‌ಲ್ಲಿ ಮತ್ತೆ ನಕಲಿ ಗೋರಕ್ಷಕರಿಂದ ಅಮಾಯಕ ಕೃಷಿಕನೊಬ್ಬನ ಬರ್ಬರ ಹತ್ಯೆಯಾಗಿದೆ. ಗುಂಪಿನಿಂದ ಥಳಿತದಂತಹ ಪ್ರಕರಣ ಹೆಚ್ಚುತ್ತಿರುವುದರ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ ಒಂದೇ ವಾರದಲ್ಲಿ ನ್ಯಾಯ ವ್ಯವಸ್ಥೆಗೆ ಸವಾಲು ಹಾಕುವಂತೆ ಈ ಬರ್ಬರ ಘಟನೆ ನಡೆದಿದೆ. ಮೃತಪಟ್ಟ ತರುಣ, ಗೋಕಳ್ಳನಲ್ಲ, ಆತ ಗೋಪಾಲಕ ಎಂದು ಮನೆಯವರು ತಿಳಿಸಿದ್ದಾರೆ. ಕೊಂದವರು ಗೋವುಗಳನ್ನು ಸಾಕುತ್ತಿದ್ದರೋ, ಇಲ್ಲವೋ ಆದರೆ, ಹತ್ಯೆಗೀಡಾದವನು ತನ್ನ ಮನೆಯಲ್ಲಿ ಗೋವುಗಳನ್ನು ಸಾಕುತ್ತಿದ್ದ. ಈ ಬಾರಿ ದೊಡ್ಡ ಮನಸ್ಸಿನಿಂದ ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಗೃಹಸಚಿವ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

ಕಾಟಾಚಾರಕ್ಕೆ ಪೊಲೀಸರು ಪ್ರಕರಣ ದಾಖಲಿಸಿ, ಕೆಲವರನ್ನು ಬಂಧಿಸುವ ನಾಟಕ ಮಾಡುತ್ತಿದ್ದಾರೆ. ಆದರೆ ಇದೇ ಆಲ್ವಾರ್‌ನಲ್ಲಿ ಒಂದು ವರ್ಷದ ಹಿಂದೆ ಪೆಹ್ಲೂಖಾನ್ ಎಂಬ ವೃದ್ಧ ರೈತನನ್ನು ಇದೇ ಸಂಘಪರಿವಾರ ಗೂಂಡಾಗಳು ಕೊಂದು ಹಾಕಿದ್ದರು. ಕೊಲೆಗಾರರನ್ನು ಬಂಧಿಸಿ ಅವರಿಗೆ ಶಿಕ್ಷೆ ನೀಡುವಲ್ಲಿ ಪೊಲೀಸರು ಕೊನೆಗೂ ವಿಫಲರಾಗಿದ್ದರು. ವಿಪರ್ಯಾಸವೆಂದರೆ, ಪೆಹ್ಲೂಖಾನ್ ಸಾಯುವ ಮೊದಲು ನೀಡಿದ್ದ ಹೇಳಿಕೆಗಳನ್ನು ತಿರುಚಿ, ಪೊಲೀಸರೇ ಆರೋಪಿಗಳಿಗೆ ಶಿಕ್ಷೆಯಾಗದಂತೆ ನೋಡಿಕೊಂಡರು. ಹೈನೋದ್ಯಮದಿಂದಲೇ ಬದುಕು ಸವೆಸುತ್ತಿದ್ದ ಈ ಕುಟುಂಬ ಇದೀಗ ಈ ವೃತ್ತಿಯಿಂದ ದೂರ ಸರಿದಿದೆ. ಆಲ್ವಾರ್ ಸೇರಿದಂತೆ ಈ ಪರಿಸರದಲ್ಲಿ ಮುಸ್ಲಿಮರು ಹೈನೋದ್ಯಮವನ್ನು ಜೀವನಾಧಾರವಾಗಿಸಿಕೊಂಡಿದ್ದಾರೆೆ. ಇವರೇ ನಿಜವಾದ ಗೋರಕ್ಷಕರೂ ಆಗಿದ್ದಾರೆ. ಆದರೆ ನಕಲಿ ಗೋರಕ್ಷಕರ ದೆಸೆಯಿಂದಾಗಿ ನಿಜವಾದ ಗೋರಕ್ಷಕರು ಬೀದಿಗೆ ಬಿದ್ದಿದ್ದಾರೆ. ಇದೀಗ ಅಂದಿನ ದುರಂತ ಆಲ್ವಾರ್‌ನಲ್ಲಿ ಪುನರಾವರ್ತನೆಯಾಗಿದೆ. ಈ ಘಟನೆಯಲ್ಲೂ ಪೊಲೀಸರ ಪಾತ್ರದ ಬಗ್ಗೆ ಆರೋಪಗಳು ಕೇಳಿ ಬರುತ್ತಿದೆ. ಮುಖ್ಯವಾಗಿ ಸಂಘಪರಿವಾರ ಮುಖಂಡರು ತಮ್ಮ ಕಾರ್ಯಕರ್ತರನ್ನು ರಕ್ಷಿಸುವುದಕ್ಕಾಗಿ, ಪೊಲೀಸರ ಥಳಿತದಿಂದ ಸಂತ್ರಸ್ತ ಸಾವನ್ನಪ್ಪಿದ್ದಾನೆ ಎಂದು ಹೇಳುತ್ತಿದ್ದಾರೆ. ಸಂಘಪರಿವಾರ ಕಾರ್ಯಕರ್ತರು, ಸಂತ್ರಸ್ತನಿಗೆ ಭೀಕರವಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಅಲ್ಲಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೆಲವರ ಪ್ರಕಾರ, ಸಂಘಪರಿವಾರ ಕಾರ್ಯಕರ್ತರ ಕೈಯಿಂದ ಸಂತ್ರಸ್ತನನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಯಲ್ಲಿ ಯದ್ವಾತದ್ವಾ ಥಳಿಸಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ, ದುಷ್ಕರ್ಮಿಗಳು ಪೊಲೀಸರ ಸಮ್ಮುಖದಲ್ಲೇ ಥಳಿಸಿದ್ದಾರೆ. ಇದೀಗ ರಾಜಕೀಯ ಒತ್ತಡ ಬಂದ ಕಾರಣಕ್ಕೆ ಅನಿವಾರ್ಯವಾಗಿ ಪೊಲೀಸರು ನಕಲಿ ಗೋರಕ್ಷಕರನ್ನು ಬಂಧಿಸುತ್ತಿದ್ದಾರೆ.

ಎನ್‌ಡಿ ಟಿವಿಯ ವರದಿಯೊಂದರ ಪ್ರಕಾರ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಸಂತ್ರಸ್ತನನ್ನು ಆಸ್ಪತ್ರೆಗೆ ಸೇರಿಸುವುದಕ್ಕೆ ಪೊಲೀಸರು ಆಸಕ್ತಿ ತೋರಿಸಿಲ್ಲ. ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿಯಲ್ಲಿ ಚಹಾ ಕುಡಿಯುವುದಕ್ಕಾಗಿ ಪೊಲೀಸರು ವಾಹನವನ್ನು ನಿಲ್ಲಿಸಿದ್ದರು. ಅಷ್ಟೇ ಅಲ್ಲ, ದನಗಳನ್ನು ಕೊಂಡೊಯ್ದು, ಅದನ್ನು ಸೇರಿಸಬೇಕಾದಲ್ಲಿಗೆ ಸೇರಿಸಿದ ಬಳಿಕ ಸಂತ್ರಸ್ತನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಂದರೆ ಒಂದು ಮನುಷ್ಯ ಜೀವದ ಕುರಿತಂತೆ ಪೊಲೀಸರು ಎಷ್ಟು ಗಂಭೀರವಾಗಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ. ಆಲ್ವಾರ್‌ನಲ್ಲಿ ಪೊಲೀಸರು ಮತ್ತು ರೌಡಿಗಳು ಜೊತೆ ಸೇರಿಯೇ ಒಬ್ಬ ರೈತನನ್ನು ಕೊಂದು ಹಾಕಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ. ಪರಿಸ್ಥಿತಿ ಹೀಗಿರುವಾಗ, ಸುಪ್ರೀಂಕೋರ್ಟ್, ‘ಕ್ರಮ ಕೈಗೊಳ್ಳಿ’ ಎಂದು ಯಾರಿಗೆ ಹೇಳುತ್ತಿದೆ? ಯಾವ ವ್ಯವಸ್ಥೆಗೆ ಹೇಳುತ್ತಿದೆ? ಈ ಗೋರಕ್ಷಕರು ಆಕಸ್ಮಿಕವಾಗಿ ಹುಟ್ಟಿಕೊಂಡವರಲ್ಲ. ರಾಜಕಾರಣಿಗಳು ತಮ್ಮ ರಾಜಕೀಯಕ್ಕಾಗಿ ಸ್ವಯಂ ಸೃಷ್ಟಿಸಿದ ‘ಭಸ್ಮಾಸುರರು’ ಅವರು. ಇವರಿಗೆ ಬೆಂಗಾವಲಾಗಿ ಕೇಂದ್ರ ಸರಕಾರವೇ ನಿಂತಿರುವಾಗ, ಸುಪ್ರೀಂಕೋರ್ಟ್‌ನ ಆದೇಶ ಜಾರಿಯಾಗುವುದು ಹೇಗೆ ಸಾಧ್ಯ? ನಕಲಿ ಗೋರಕ್ಷಕರು ಮತ್ತು ಪೊಲೀಸರ ನಡುವಿನ ಅನೈತಿಕ ಸಂಬಂಧವೇ ಇಂತಹ ಕೊಲೆಗಳಿಗೆ ಮುಖ್ಯ ಕಾರಣ.

ನಕಲಿ ಗೋರಕ್ಷಕರಿಗೆ ಮೂಗುದಾರ ತೊಡಿಸಬೇಕಾದರೆ, ಅವರಿಗೆ ಬೆಂಗಾವಲಾಗಿರುವ ಕಾನೂನು ವ್ಯವಸ್ಥೆಯೊಳಗಿರುವ ವಿರ್ಷ ಸರ್ಪಗಳ ಹಲ್ಲುಗಳನ್ನು ಕಿತ್ತು ಹಾಕಬೇಕು. ರಾಜಸ್ಥಾನದಲ್ಲಿ ನಡೆದಂತಹದೇ ಘಟನೆ ಇತ್ತೀಚೆಗೆ ಉಡುಪಿಯಲ್ಲಿ ನಡೆಯಿತು. ಹುಸೇನಬ್ಬ ಎಂಬವರನ್ನು ಕೊಂದು ಪೊಲೀಸ್ ಜೀಪ್‌ನಲ್ಲೇ ಹಾಡಿಯಲ್ಲಿ ಎಸೆಯಲಾಯಿತು. ಬಳಿಕ ಅದೇ ಪೊಲೀಸರು ಹೆಣವನ್ನು ಪತ್ತೆ ಮಾಡಿ ‘ಹೃದಯಾಘಾತದಿಂದ ಸಾವು’ ಎಂದು ಬಿಂಬಿಸಲು ಪ್ರಯತ್ನಿಸಿದರು. ಆದರೆ ಪೊಲೀಸ್ ಇಲಾಖೆಯೊಳಗಿರುವ ಬೆರಳೆಣಿಕೆಯ ಅಧಿಕಾರಿಗಳ ದೆಸೆಯಿಂದಾಗಿ ಸತ್ಯಾಂಶ ಬಹಿರಂಗವಾಯಿತು. ಪೊಲೀಸ್ ಅಧಿಕಾರಿಗಳು ಕೊಲೆಯಲ್ಲಿ ಭಾಗಿಯಾಗಿರುವ ಅಂಶ ಬೆಳಕಿಗೆ ಬಂತು. ಸುಪ್ರೀಂಕೋರ್ಟ್‌ನ ಎಚ್ಚರಿಕೆಯ ಬೆನ್ನಿಗೇ ದಕ್ಷಿಣ ಕನ್ನಡದಲ್ಲಿಯೂ ಸಂಘಪರಿವಾರ ವೇಷಧಾರಿ ರೌಡಿಗಳು ಬೀದಿಗಿಳಿಯುವ ಸಂಚು ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಮತ್ತೆ ಹಿಂದೂ ಮುಸ್ಲಿಮರ ನಡುವೆ ಬಿರುಕು ತರುವುದು, ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುವುದು ಇವರಿಗೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಮುಖಂಡನೆಂದು ಕರೆಸಿಕೊಂಡ ಜಗದೀಶ ಶೇಣವ ಎಂಬಾತ, ‘ಗೋ ರಕ್ಷಾ ದಳ’ ಸ್ಥಾಪಿಸಲು ಸಿದ್ಧತೆ ನಡೆಸುತ್ತಿದ್ದಾನೆ.

‘‘ಜಿಲ್ಲೆಯಲ್ಲಿ ಗೋ ಕಳ್ಳತನ ಹೆಚ್ಚಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಹೀಗಾಗಿ ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಹತ್ತು ಮಂದಿಯ ಗೋರಕ್ಷ ದಳವನ್ನು ಸ್ಥಾಪಿಸಲಾಗುವುದು. ಇದರಲ್ಲಿ ನಾಲ್ಕು ಅಥವಾ ಐದು ಮಂದಿಯ ತಂಡ ಗೋರಕ್ಷಣೆಗೆ ಕಾವಲು ಕಾಯುವರು’’ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾನೆ. ಜಿಲ್ಲೆಯಲ್ಲಿ ಗೋಕಳ್ಳತನ ಜಾಸ್ತಿಯಾಗಿದೆ ಎಂದು ಈತನಿಗೆ ಬಂದು ದೂರು ನೀಡಿದವರು ಯಾರು? ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಷ್ಟು ದೂರು ದಾಖಲಾಗಿವೆ? ಇವುಗಳ ಬಗ್ಗೆ ಈತನಲ್ಲಿ ವಿವರವಿಲ್ಲ.ಈತ ಮತ್ತು ಈತನ ರೌಡಿ ಗುಂಪುಗಳು ಗೋವುಗಳಿಗೆ ಕಾವಲು ಕಾಯುತ್ತಾರಂತೆ. ಮುಖ್ಯವಾಗಿ ಇವರ ಉದ್ದೇಶವೇ, ಗೋವುಗಳನ್ನು ಸಾಕುತ್ತಿರುವ ರೈತರಿಗೆ ಕಿರುಕುಳ ಕೊಡುವುದು. ಅವರು ತಮ್ಮ ಅನುಪಯುಕ್ತ ಗೋವುಗಳನ್ನು ಮಾರಾಟ ಮಾಡದಂತೆ ನೋಡಿಕೊಂಡು ಅವುಗಳನ್ನು ತಮ್ಮ ವಶಕ್ಕೆ ಪಡೆದು, ಅಕ್ರಮವಾಗಿ ಕಸಾಯಿಖಾನೆಗಳಿಗೆ ಮಾರಿ ದುಡ್ಡು ಮಾಡುವ ದೊಡ್ಡ ದಂಧೆ ಇದು.

ಇದೀಗ ‘ಗೋರಕ್ಷಾ ದಳ’ ಮಾಡುವ ಮೂಲಕ, ಒಂದೆಡೆ ಗೋವುಗಳನ್ನು ಸಾಕುವ ರೈತರನ್ನು ಬೆದರಿಸಿ ಅವರಿಂದ ದುಡ್ಡು ಕೀಳುವುದು, ಅರನ್ನು ಬ್ಲಾಕ್‌ಮೇಲ್ ಮಾಡುವುದು, ಜೊತೆಗೆ ಅವರಲ್ಲಿರುವ ಅನುಪಯುಕ್ತ ದನಗಳನ್ನು ವಶಕ್ಕೆ ತೆಗೆದುಕೊಂಡು ಕಸಾಯಿಖಾನೆಗೆ ತಾವೇ ಒದಗಿಸುವುದು ಅವರ ಉದ್ದೇಶವಾಗಿದೆ. ಇದರ ಜೊತೆ ಜೊತೆಗೇ, ಗೋ ಸಾಗಾಟ ಮಾಡುವ ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಅಥವಾ ಸಾರ್ವಜನಿಕವಾಗಿ ಕೊಂದು ಜನರ ನಡುವೆ ಉದ್ವಿಗ್ನ ವಾತಾವರಣ ನಿರ್ಮಿಸುವುದು. ಇಷ್ಟೇ ಅಲ್ಲದೆ, ಕರಾವಳಿಯಲ್ಲಿ ಅಧಿಕೃತವಾಗಿರುವ ಕಸಾಯಿಖಾನೆಗಳಿಂದ ಹಫ್ತಾ ವಸೂಲಿ ಮಾಡುವುದು. ಇದು ಈ ಶೇಣವನಂತಹ ನಕಲಿ ಗೋರಕ್ಷಕರ ‘ಗೋರಕ್ಷಣೆ’ಯ ವಿಧಾನವಾಗಿದೆ. ಕನಿಷ್ಠ ಸುಪ್ರೀಂಕೋರ್ಟ್‌ನ ಕಳಕಳಿಯ ಆದೇಶಕ್ಕೆ ತಲೆಬಾಗಿಯಾದರೂ, ಪೊಲೀಸರು ಈ ಶೇಣವ ಎಂಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿ, ಮುಂದೆ ನಡೆಯುವ ದುರಂತಗಳಿಗೆ ಈಗಲೇ ಕಡಿವಾಣ ಹಾಕಬೇಕಾಗಿದೆ. ನಕಲಿ ಗೋರಕ್ಷಕರು ದೇಶಾದ್ಯಂತ ನೇರವಾಗಿ ಹೈನೋದ್ಯಮದ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದರಿಂದ ಗ್ರಾಮೀಣ ಹೈನೋದ್ಯಮ ನಾಶವಾಗುವುದಲ್ಲದೆ, ರೈತರು ಗೋವುಗಳನ್ನು ಸಾಕುವುದರಿಂದ ನಿಧಾನಕ್ಕೆ ದೂರ ಸರಿಯಲಿದ್ದಾರೆ. ಈ ದೇಶದಲಲಗೋವುಗಳು ಉಳಿಯಬೇಕಾದರೆ, ಈ ನಕಲಿ ಗೋರಕ್ಷಕರು ಜೈಲು ಸೇರುವುದು ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News