ಪಾಕಿಸ್ತಾನ ಧ್ವಜಾರೋಹಣ ಆರೋಪ ಪ್ರಕರಣ: ಪರಶುರಾಮ್ ವಾಗ್ಮೋರೆ ಖುಲಾಸೆ

Update: 2018-07-23 14:41 GMT

ಬೆಂಗಳೂರು/ವಿಜಯಪುರ, ಜು.23: ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜಾರೋಹಣ ಮಾಡಿದ ಆರೋಪದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಸೇರಿದಂತೆ 6 ಜನರನ್ನು ಖಲಾಸೆ ಮಾಡಿ ವಿಜಯಪುರ 1ನೇ ಹೆಚ್ಚುವರಿ ನ್ಯಾಯಾಲಯ ಸೋಮವಾರ ಆದೇಶಿಸಿದೆ.  

2012ರ ಜನವರಿ 1ರಂದು ಸಿಂದಗಿಯ ತಹಶೀಲ್ದಾರ್ ಕಚೇರಿ ಮೇಲೆ ಧ್ವಜಾರೋಹಣ ಪ್ರಕರಣದಲ್ಲಿ ಪರಶುರಾಮ್ ವಾಗ್ಮೋರೆ 5ನೆ ಆರೋಪಿಯಾಗಿದ್ದ. ಈ ಪ್ರಕರಣದ ಅನಿಲ ಸೋಲಂಕರ, ಮಲ್ಲನಗೌಡ ಪಾಟೀಲ, ರೋಹಿತ ನಾವಿ, ಸುನಿಲ ಅಗಸರ, ಅರುಣ ಎಂಬುವರ ವಿರುದ್ಧ ಐಪಿಸಿ ಕಲಂ 124ಎ, 153 ಎ(ದೇಶದ ವಿರುದ್ಧ ಮಾತು) ಹಾಗೂ ಕಲಂ 120ಬಿ(ಪ್ರಚೋದನಕಾರಿ ಭಾಷಣ) ಅಡಿ ಪ್ರಕರಣ ದಾಖಲು ಮಾಡಲಾಗಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಜಿಲ್ಲಾ 1ನೆ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಗೀತಾ ಕೆ.ಬಿ ಅವರು, ಪ್ರಕರಣದ ತನಿಖೆಯಲ್ಲಿ ತಾಂತ್ರಿಕ ದೋಷ ಹಿನ್ನೆಲೆ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

ಮತ್ತೆ ವಶಕ್ಕೆ: ಸೋಮವಾರ ಪರಶುರಾಮ್ ವಾಗ್ಮೋರೆ ಅನ್ನು ವಿಜಯಪುರದ ನ್ಯಾಯಾಲಯಕ್ಕೆ ಕರೆತಂದಿದ್ದ ಪೊಲೀಸರು, ಬಳಿಕ ಸಂಜೆಯೇ ಬೆಂಗಳೂರಿಗೆ ವಾಪಸ್ ಕರೆತಂದು, ಎಸ್‌ಐಟಿ ವಶಕ್ಕೆ ಒಪ್ಪಿಸಿದರು ಎಂದು ಮೂಲಗಳು ತಿಳಿಸಿವೆ.

‘ಮುಖ ಮುಚ್ಚಿಕೊಂಡ ವಾಗ್ಮೋರೆ’

ವಿಜಯಪುರ ನ್ಯಾಯಾಲಯಕ್ಕೆ ಬಂದಿದ್ದ ಗೌರಿ ಹತ್ಯೆ ಪ್ರಕರಣದ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಪತ್ರಕರ್ತರು ಮಾತನಾಡಿಸಲು ಮುಂದಾದಾಗ, ನೀವು ಇಲ್ಲಿಂದ ತೆರಳಿ ಎಂದು ಗದರಿಸಿ, ಫೋಟೋಗಳನ್ನು ತೆಗೆಯದಂತೆ ಮುಖ ಮುಚ್ಚಿಕೊಂಡ ದೃಶ್ಯ ಕಂಡುಬಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News