ಮೈಸೂರು: ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಖಂಡಿಸಿ ದಲಿತ, ಪ್ರಗತಿಪರರ ಪ್ರತಿಭಟನೆ

Update: 2018-07-23 14:46 GMT

ಮೈಸೂರು,ಜು.23: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ರವರ ಮೇಲಿನ ಹಲ್ಲೆ ಖಂಡಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಜಾರ್ಖಂಡ್ ನ ಪಕುರ್ ಹೋಟೆಲ್ ಒಂದರ ಮುಂದೆ ಸಾಮಾಜಿಕ ಕಾರ್ಯಕರ್ತ 80 ವರ್ಷದ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಕಳೆದ ಮಂಗಳವಾರ ಬೆಳಗ್ಗೆ ಬಿಜೆಪಿಗೆ ಸೇರಿದ ಯುವ ಸಂಘಟನೆ ಭಾರತೀಯ ಮೋರ್ಚಾ ಮತ್ತು ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ರೀತಿಯ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಗೋರಕ್ಷಕರು ಮತ್ತು ಹಿಂದುತ್ವ ಪ್ರತಿಪಾದಕರು ಈ ಕೃತ್ಯಗಳನ್ನು ನಡೆಸುತ್ತಿದ್ದರೂ ಮುಂಚೂಣಿಯ ಬಿಜೆಪಿ ನಾಯಕರುಗಳು ತಮಗೆ ಸಂಬಂಧವಿಲ್ಲದಂತೆ ಮಾತನಾಡುತ್ತಾರೆ. ಈ ಎಲ್ಲ ದಾಳಿಗಳು ಮುಸ್ಲಿಮರು, ದಲಿತರು ಮತ್ತು ದಮನಿತರ ಮೇಲೆ ಕೇಂದ್ರೀಕೃತವಾಗಿದೆ. ಇವೆಲ್ಲವೂ ದೇಶಾದ್ಯಂತ ಹಬ್ಬುತ್ತಿರುವ ಹಿಂದೂತ್ವವಾದಿ ಕೋಮುವಾದಿ ಪ್ಯಾಸಿಸಂ ನ ರೂಪಗಳಾಗಿದ್ದು ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಹರಿಹರ ಆನಂದಸ್ವಾಮಿ, ಪ್ರೊ.ಶಬ್ಬೀರ್ ಮುಸ್ತಫ, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ಕೆ.ವಿ.ದೇವೇಂದ್ರ, ನಾಗರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News