ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಿಬಿಐಗೆ ವಹಿಸುವುದು ಬೇಡ: ಪ್ರಗತಿಪರ ಚಿಂತಕರ ವೇದಿಕೆ ಆಗ್ರಹ
ಮೈಸೂರು,ಜು.23: ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಿಬಿಐಗೆ ವಹಿಸಬಾರದೆಂದು ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಆಗ್ರಹಿಸಿದೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ರಾಜ್ಯಾಧ್ಯಕ್ಷ ಕೆ.ಸಿ. ಪುಟ್ಟಸಿದ್ದಶೆಟ್ಟಿ ಮಾತನಾಡಿ, ಗೌರಿ ಲಂಕೇಶ್ ಪ್ರಕರಣದ ತನಿಖೆಯನ್ನು ರಾಜ್ಯದ ಎಸ್‍ಐಟಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಈ ವೇಳೆ ಮಹಾರಾಷ್ಟ್ರದ ಪನ್ಸಾರೆ ಹತ್ಯೆ ಪ್ರಕರಣಕ್ಕೂ ಇದಕ್ಕೂ ಸಂಬಂಧವಿದೆ ಎಂಬ ಕಾರಣ ನೀಡಿ ಅದರ ತನಿಖೆಯನ್ನು ತಾನು ವಹಿಸಿಕೊಳ್ಳಲು ಸಿಬಿಐ ಹವಣಿಸುತ್ತಿದೆ. ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಕಾರಣ ಕೇಂದ್ರಕ್ಕೆ ಬೇಕಾದಂತೆ ತನಿಖೆ ವರದಿ ಬರೆದು ಕೈತೊಳೆದುಕೊಳ್ಳಲಿದೆ. ಹೀಗಾಗಿ, ಗೌರಿ ಲಂಕೇಶ್ ಪ್ರಕರಣ ತನಿಖೆ ಸಿಬಿಐಗೆ ವಹಿಸುವುದು ಬೇಡ ಎಂದರು.
ಇನ್ನು, ಜನರಲ್ಲಿನ ಮೌಢ್ಯ ಹೋಗಲಾಡಿಸಬೇಕಾದ ಆಳುವ ಪಕ್ಷದವರೇ ಮೌಢ್ಯಾಚರಣೆ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಈ ಕಾರಣದಿಂದ ಒಂದು ಬಲಿಯಾಗಿರುವುದು ಬೇಸರದ ಸಂಗತಿ. ಇದೇ ರೀತಿ ರಾಜ್ಯದ ಇತರೆಡೆಯೂ ನಡೆಯುತ್ತಿದ್ದು, ಹಿಂದಿನ ಸರ್ಕಾರ ಅಂಗೀಕರಿಸಿದ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಯಥಾವತ್ತಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಕೇಂದ್ರದ ಮೋದಿ ಸರ್ಕಾರ ಉದ್ಯಮಿಗಳ ಪರ ಇದ್ದು, ಪೆಟ್ರೋಲ್ ಡೀಸೆಲ್ ಬೆಲೆಯನ್ನು ಬೇಕಾದಂತೆ ಹೆಚ್ಚಿಸುತ್ತಿದೆ. ಇದೇ ರೀತಿ ರಾಜ್ಯ ಸರ್ಕಾರವೂ ಸ್ಥಳೀಯ ದರ ಹೆಚ್ಚಿಸಿರುವ ಕಾರಣ ಜನಸಾಮಾನ್ಯರಿಗೆ ಹೊರೆಯಾಗಿದ್ದು, ಒಂದು ತಿಂಗಳಲ್ಲಿ ಎರಡೂ ಸರ್ಕಾರ ಪೆಟ್ರೋಲ್, ಡೀಸೆಲ್ ಕರ ಇಳಿಸದಿದ್ದಲ್ಲಿ ನಗರ ನ್ಯಾಯಾಲಯ ಎದುರು ಪ್ರತಿಭಟನೆ ನಡೆಸಲಾಗುವುದು. ಜೊತೆಗೆ ಸಹಿ ಸಂಗ್ರಹ ಆಂದೋಲನ ನಡೆಸಿ ಪ್ರಧಾನಿಗೆ ಸಹಿಗಳನ್ನು ಕಳಿಸಲಾಗುವುದೆಂದರು.
ಅತಿಥಿ ಶಿಕ್ಷಕರು, ಉಪನ್ಯಾಸಕರು ಮತ್ತು ಅಧ್ಯಾಪಕರಿಗೆ ನೆರೆಯ ಆಂಧ್ರ, ತೆಲಂಗಾಣ, ಕೇರಳ ಮಾದರಿ ಕನಿಷ್ಠ 20 ಸಾವಿರ ಮಾಸಿಕ ವೇತನ ನೀಡುವುದರ ಜೊತೆಗೆ, ಇವರಿಗೆ ಸೇವಾ ಭದ್ರತೆ ಒದಗಿಸಿ ಕಾಯಂ ಮಾಡಬೇಕೆಂದು ಆಗ್ರಹಿಸಿದರು. ಎಸ್‍ಸಿ, ಎಸ್‍ಟಿ ಮುಂಬಡ್ತಿ ಕಾಯ್ದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇದೆ ಎಂದು ಸರ್ಕಾರ ನುಣುಚಿಕೊಳ್ಳುವುದು ಬೇಡ. ಒಂದು ವೇಳೆ ಆ ರೀತಿ ಮಾಡಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಮಧು, ಬೋರಪ್ಪಶೆಟ್ಟಿ, ಮಹದೇವ್ ಗಾಣಿಗ, ಎಚ್.ಬಿ. ಸಂಪತ್ತು, ಡಾ. ರಾಜು ಉಪಸ್ಥಿತರಿದ್ದರು.