×
Ad

ಮೈಸೂರು: ಕಬ್ಬಿಗೆ ಸೂಕ್ತ ಬೆಲೆ ನಿಗದಿ ಪಡಿಸಲು ಒತ್ತಾಯ

Update: 2018-07-23 21:43 IST

ಮೈಸೂರು,ಜು.23: ಕಳೆದ ಸಾಲಿನ ಕಬ್ಬಿನ ಬಾಕಿ ಹಣ ನೀಡಿ ಹಾಗೂ ಪ್ರಸಕ್ತ ಸಾಲಿನ ಕಬ್ಬು ಬೆಳೆಗೆ ಸೂಕ್ತ ವೈಜ್ಞಾನಿಕ ಬೆಲೆಯನ್ನು ನಿಗದಿಗೊಳಿಸುವಂತೆ  ರಾಜ್ಯ ಕಬ್ಬು ಬೆಳೆಗಾರರ ಹೋರಾಟ ಹಿತರಕ್ಷಣಾ ಸಮಿತಿಯು ಸರ್ಕಾರವನ್ನು ಒತ್ತಾಯಿಸಿತು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಳೇ ಮಿರ್ಲೆ ಸುಜಯ್ ಗೌಡ ಮಾತನಾಡಿ, ಕಳೆದ ಬಾರಿ ಕಬ್ಬಿಗೆ ನ್ಯಾಯಯುತ ಬೆಲೆ ನೀಡಲು ಸರ್ಕಾರ ವಿಫಲವಾಗಿದೆ. ಅಲ್ಲದೇ ಎಫ್ ಆರ್ ಪಿಗೆ ಕೊಡುವುದಾಗಿ ಹೇಳಿದ್ದು ಕೇವಲ 200 ರೂ ಹೆಚ್ಚಿಸಿರುವುದು ಅವೈಜ್ಞಾನಿಕ ನೀತಿಯಾಗಿದೆ ಎಂದು ಖಂಡಿಸಿದರು.

ಅಲ್ಲದೇ ಪ್ರತಿ ವರ್ಷ ಕೃಷಿಯಲ್ಲಿ ಶೇ.25 ರಷ್ಟು ವೆಚ್ಚವು ಏರಿಕೆಯಾಗುತ್ತಿದೆ. ಇದನ್ನು ಸರಿದೂಗಿಸಲು ರೈತಾಪಿ ವರ್ಗವೂ ಸೆಣಸುತ್ತಿದ್ದು, ಇವುಗಳನ್ನು ಪರಿಗಣನೆಗೆ ತೆಗೆದುಕೊಳ್ಳದ ಸರ್ಕಾರ ತನ್ನಿಚ್ಚೆಯಂತೆ ದರ ನಿಗದಿಗೊಳಿಸುತ್ತಿದೆ. ಕೂಡಲೇ 3600 ರೂಗಳ ಬೆಂಬಲ ಬೆಲೆಯನ್ನು ಕಬ್ಬಿಗೆ ಘೋಷಿಸಬೇಕು, ಎಪಿಎಂಸಿಯಲ್ಲಿನ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು, ಶೀಘ್ರವೇ ಡಾ. ಎಂ.ಎಸ್. ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯದಲ್ಲಿ ಸಕಾಲದಲ್ಲಿ ಉತ್ತಮ ಮಳೆಯಾಗಿದ್ದು ಅಣೆಕಟ್ಟೆಗಳು ಭರ್ತಿಯಾಗಿವೆ, ಆದ್ದರಿಂದ ಸರ್ಕಾರ ವಿಳಂಬ ನೀತಿ ಅನುಸರಿಸದೆ ಕೂಡಲೇ ಕಾವೇರಿ ಜಲಾನಯನ ಪ್ರದೇಶಗಳ ಕರೆ, ನಾಲೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಜಿ.ಮಾರಹಳ್ಳಿ ಮಂಜು, ಮುಖಂಡರಾದ ಎಂ.ಎಸ್.ರಾಜೇಂದ್ರ, ಮಧುಸೂದನ್ ದೊಡ್ಡಕೊಪ್ಪಲು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News