ಹನೂರು: ಅನೈರ್ಮಲ್ಯತೆಯಿಂದ ತಾಂಡವಾಡುತ್ತಿರುವ ಗುರು ನಗರ ಕಾಲೊನಿ
ಹನೂರು: ಮಲೈಮಹದೇಶ್ವರ ಬೆಟ್ಟದ ಗುರು ನಗರದ ಕಾಲೊನಿಯಲ್ಲಿ ಅನೈರ್ಮಲ್ಯತೆ ತಾಂಡವಾಡುತ್ತಿದ್ದು, ಈ ಸಂಬಂಧ ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಇತ್ತ ಗಮನಹರಿಸುವಂತೆ ಕಳೆದ ಆರು ತಿಂಗಳಿಂದ ದೂರುಗಳನ್ನು ನೀಡುತ್ತಿದ್ದರೂ ಸಹ ತಮ್ಮ ಅಸಹಾಯಕತೆಯನ್ನು ತೋರುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ದಿನ ನಿತ್ಯ ಸಾವಿರಾರು ಮಂದಿ ಮಲೈಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯದಿಂದ ಇಲ್ಲಿನ ಗುರುನಗರದ ಕಾಲೋನಿ ಕಸದ ರಾಶಿಯಿಂದಾಗಿ ಅನೈರ್ಮಲ್ಯತೆಯಿಂದ ತಾಂಡವಾಡುತ್ತಿರುವುದಲ್ಲದೇ, ರಸ್ತೆಯಲ್ಲಿ ಹರಿಯುವ ಚರಂಡಿ ನೀರಿನಿಂದ ಗಬ್ಬುನಾತ ಬೀರುತ್ತಿದೆ. ಇದರಿಂದ ಈ ಕಾಲೋನಿಯ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿ ಎದುರಾಗಿದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.
ಮಲೈಮಹದೇಶ್ವರ ಬೆಟ್ಟದಲ್ಲಿ ಕಳೆದ ಒಂದು ವರ್ಷದಿಂದ ಒಳಚರಂಡಿ ಕಾಮಗಾರಿಯೂ ನಡೆಯುತ್ತಿದ್ದು, ಇದು ಮುಕ್ತಾಯವಾಗಲು ಇನ್ನು ಎರಡು ವರ್ಷವಾದರೂ ಬೇಕು. ಮುಕ್ತಾಯವಾಗಿರುವ ಕಡೆ ಗುಂಡಿಗಳನ್ನು ಗುತ್ತಿಗೆದಾರರು ಸರಿಯಾಗಿ ಮುಚ್ಚದೇ ಇರುವ ಕಾರಣ ಕಳೆದ ತಿಂಗಳಲ್ಲಿ ಬಿದ್ದ ಮಳೆಯಿಂದ ಅಲ್ಲಲ್ಲಿ ಭಾರೀ ಗಾತ್ರದ ಗುಂಡಿಗಳಾಗಿದೆ. ಅಲ್ಲದೆ ರಸ್ತೆಯೆಲ್ಲಾ ಕೆಸರು ಗದ್ದೆಯಂತಾಗಿ ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗುತ್ತದೆ. ಇನ್ನಾದರೂ ಆಡಳಿತ ಮಂಡಳಿ ಎಚ್ಚೆತ್ತು ಈ ಕಾಲೊನಿಯ ನೈರ್ಮಲ್ಯತೆಯನ್ನು ಕಾಪಾಡಬೇಕೆಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಕಳೆದ ಆರು ತಿಂಗಳಿಂದ ಗ್ರಾಪಂ ಆಡಳಿತ ಮಂಡಳಿ ಮತ್ತು ಜಿಪಂ ಸದಸ್ಯೆಗೆ ಇಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಜಿಪಂ ಸದಸ್ಯರಂತೂ ಈ ಗ್ರಾಮವನ್ನೇ ಮರೆತಂತಿದೆ
-ಕಾರ್ತಿಕ್ ಸಣ್ಣಮುಗಮ್, ಮ.ಮ ಬೆಟ್ಟದ ನಿವಾಸಿ
ಇಲ್ಲಿನ ಸಮಸ್ಯೆಯ ಬಗ್ಗೆ ವಾರ್ತಾಭಾರತಿ ಪತ್ರಿಕೆ ಮುಖಾಂತರ ನನ್ನ ಗಮನಕ್ಕೆ ಬಂದಿದ್ದು, ಈ ಕೂಡಲೇ ಪಿಡಿಒಗೆ ಈ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವಂತೆ ಸೂಚಿಸಲಾಗುವುದು
-ಡಾ.ಹರೀಶ್‍ಕುಮಾರ್, ಕಾರ್ಯ ನಿರ್ವಾಹಣಾಧಿಕಾರಿ, ಜಿ ಪಂ ಚಾಮರಾಜನಗರ